Advertisement

ವಾಮದಪದವು: ಸುಸಜ್ಜಿತ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ

11:11 AM Jul 24, 2018 | Team Udayavani |

ಪುಂಜಾಲಕಟ್ಟೆ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಂದ ರಾಜ್ಯಕ್ಕೇ ಮಾದರಿ ಆಸ್ಪತ್ರೆ ಎಂದು ಪ್ರಶಂಸೆ ಗಳಿಸಿದ ಬಂಟ್ವಾಳ ತಾಲೂಕಿನ ವಾಮದಪದವು ಆರೋಗ್ಯ ಕೇಂದ್ರವು ಸುಸಜ್ಜಿತವಾಗಿದ್ದು, ಎಲ್ಲ ರೀತಿಯ  ವ್ಯವಸ್ಥೆಯನ್ನು ಒಳಗೊಂಡಿದ್ದರೂ ಇಲ್ಲಿಗೆ ಹೆಚ್ಚುವರಿ ವೈದ್ಯಾಧಿಕಾರಿಗಳು ಹಾಗೂ ಸಿಬಂದಿಯ ಅಗತ್ಯವಿದೆ. ಅತೀ ಹೆಚ್ಚು ಜನಸಂಖ್ಯೆ ವ್ಯಾಪ್ತಿಯನ್ನು ಹೊಂದಿರುವ ಈ ಆರೋಗ್ಯ ಕೇಂದ್ರಕ್ಕೆ ಒಬ್ಬರೇ ಕರ್ತವ್ಯ ನಿರ್ವಹಿಸುವುದು ಅಸಾಧ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಸರಕಾರ ತತ್‌ ಕ್ಷಣ ಇಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ.

Advertisement

ಚೆನ್ನೈತ್ತೋಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅಜ್ಜಿಬೆಟ್ಟು, ಚೆನ್ನೈತ್ತೋಡಿ, ಕುಕ್ಕಿಪಾಡಿ, ಪಿಲಿಮೊಗರು, ಕುಡಂಬೆಟ್ಟು, ಇರ್ವತ್ತೂರು ಗ್ರಾಮಗಳ ಸುಮಾರು 12 ಸಾವಿರ ಜನರು ಈ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಕೆಲವೊಂದು ಕೊರತೆಗಳಿಂದಾಗಿ ಜನರು ಬೆಳ್ತಂಗಡಿ, ಮಂಗಳೂರು ಕಡೆಗೆ ಹಾಗೂ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವಂತಾಗಿದೆ.

30 ಹಾಸಿಗೆಗಳ ಆಸ್ಪತ್ರೆ
ಮೂವತ್ತು ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಇದಾಗಿದ್ದು, ಎಕ್ಸ್‌ರೇ ಟೆಕ್ನೀಶಿಯನ್‌, ಲ್ಯಾಬ್‌ ಟೆಕ್ನೀಶಿಯನ್‌, ಹಿರಿಯ, ಕಿರಿಯ ಆರೋಗ್ಯ ಸಹಾಯಕಿಯರ ಹುದ್ದೆ ಭರ್ತಿಯಿದೆ. ಇದರಿಂದ ಆಸ್ಪತ್ರೆಯಲ್ಲಿ ಲಭ್ಯ ಸೇವೆಗಳು ತ್ವರಿತವಾಗಿ ದೊರಕುತ್ತವೆ. ಪ್ರತಿ ತಿಂಗಳು ಸುಮಾರು 2,500 ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಆಸ್ಪತ್ರೆ ವ್ಯಾಪ್ತಿಯಲ್ಲಿ ಅಜ್ಜಿಬೆಟ್ಟು, ಚೆನ್ನೈತ್ತೋಡಿ, ಕುಕ್ಕಿಪಾಡಿಗಳಲ್ಲಿ ಉಪ ಆರೋಗ್ಯ ಕೇಂದ್ರಗಳಿದ್ದು, ಅಜ್ಜಿಬೆಟ್ಟುವಿನಲ್ಲಿ ಹುದ್ದೆ ಖಾಲಿ ಇದೆ. ಆಸ್ಪತ್ರೆಯಲ್ಲಿರುವ ಇಸಿಜಿ ಯಂತ್ರ ಕೆಟ್ಟು ಹೋಗಿದ್ದು, ಹೊಸ ಯಂತ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ| ಉಮೇಶ್‌ ಅಡ್ಯಂತಾಯ ಅವರು ತಿಳಿಸಿದ್ದಾರೆ.

ಜನಸ್ನೇಹಿ ಕಾರ್ಯಕ್ರಮಗಳ ಅನುಷ್ಠಾನ
ಈ ಹಿಂದೆ ಆಡಳಿತ ವೈದ್ಯಾಧಿಕಾರಿ ಯಾಗಿದ್ದ ಡಾ| ದುರ್ಗಾಪ್ರಸಾದ್‌ ಎಂ.ಆರ್‌. ಅವರ ಅವಧಿಯಲ್ಲಿ ಆಸ್ಪತ್ರೆ ಸುಸಜ್ಜಿತಗೊಂಡು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿದ್ದರು. ಆಸ್ಪತ್ರೆ ಒಳಾಂಗಣ ಖಾಸಗಿ ಆಸ್ಪತ್ರೆಗಳಿಗಿಂತಲೂ ಸುಂದರವಾಗಿ ವಿನ್ಯಾಸಗೊಂಡಿತ್ತು. ಅವರ ವರ್ಗಾವಣೆ ಬಳಿಕ ಆಸ್ಪತ್ರೆ ವೈದ್ಯಾಧಿಕಾರಿಗಳಿಲ್ಲದೆ ಸೊರಗಿತ್ತು. ಪ್ರಸ್ತುತ ಆಡಳಿತ ವೈದ್ಯಾಧಿಕಾರಿ ಮತ್ತು ಸಿಬಂದಿಯ ಮುತುವರ್ಜಿಯಿಂದ ಮತ್ತೆ ಆಸ್ಪತ್ರೆ ಜನಸ್ನೇಹಿಯಾಗಿದೆ. ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ರಾಷ್ಟ್ರೀಯ ಆರೋಗ್ಯ ಭಾಗ್ಯ ಯೋಜನೆ ಮೂಲಕ ದೇರಳಕಟ್ಟೆ ದಂತ ವೈದ್ಯಕೀಯ ಆಸ್ಪತ್ರೆ, ರೋಟರಿ ಕ್ಲಬ್‌ ಹಾಗೂ ದಾನಿಗಳ ಸಹಕಾರದಿಂದ 30 ವೃದ್ಧರಿಗೆ ಉಚಿತ ಹಲ್ಲಿನ ಸೆಟ್‌ ಒದಗಿಸಲಾಗಿದೆ. ಸ್ಥಳೀಯ ಗ್ರಾ.ಪಂ., ಪದವಿ ಮತ್ತು ಪದವಿಪೂರ್ವ ಕಾಲೇಜುಗಳ ಸಹಯೋಗದೊಂದಿಗೆ ಕೀಟಜನ್ಯ ಸಾಂಕ್ರಾಮಿಕ ರೋಗ ತಡೆಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಮಲೇರಿಯಾ ಮಾಸಾಚರಣೆ ಕಾರ್ಯಕ್ರಮ, ಡೆಂಗ್ಯೂ ಮುಂಜಾಗ್ರತೆಗಾಗಿ ಫಾಗಿಂಗ್‌ ನಡೆಸಲಾಗಿದೆ.  ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಮನೆ ಮನೆಗೆ ತೆರಳಿ ಮಾಹಿತಿ ನೀಡುತ್ತಿದ್ದಾರೆ. ಆರೋಗ್ಯ ಜಾಗೃತಿ ಕರಪತ್ರ ನೀಡಲಾಗುತ್ತಿದೆ. ಪರಿಸರದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗುತ್ತಿದೆ.

ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದ ಸೇವೆ, ಹೆಚ್ಚುವರಿ ವೈದ್ಯಾಧಿಕಾರಿಗಳ ನೇಮಕ, ಸರಕಾರದ ಸವಲತ್ತುಗಳು ಜನರಿಗೆ ಸಿಗಬೇಕು, ತುರ್ತು ಚಿಕಿತ್ಸೆಗಾಗಿ 108 ಆ್ಯಂಬುಲೆನ್ಸ್‌ ಸೇವೆ, ಸಿಬಂದಿ ಕೊರತೆ ನಿವಾರಣೆ ಇತ್ಯಾದಿ ಬೇಡಿಕೆಗಳು ಸರಕಾರದ ಮುಂದಿವೆ. ಇವುಗಳನ್ನು ತ್ವರಿತವಾಗಿ ಈಡೇರಿಸಿದರೆ ಆರೋಗ್ಯ ಸೇವೆ ಇನ್ನಷ್ಟು ಪರಿಣಾಮಕಾರಿಯಾದೀತು.

Advertisement

ವೈದ್ಯರ 4 ಹುದ್ದೆಗಳು ಖಾಲಿ
ಪ್ರಸ್ತುತ ಆಸ್ಪತ್ರೆಯಲ್ಲಿ ಮೂವರು ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಒರ್ವ ಆಡಳಿತ ವೈದ್ಯಾಧಿಕಾರಿ, ದಂತ, ಆಯುರ್ವೇದ ವೈದ್ಯರಿದ್ದು, ನಾಲ್ಕು ಹುದ್ದೆಗಳು ಖಾಲಿ ಇವೆ. ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಅರಿವಳಿಕೆ ತಜ್ಞರು, ಫಿಜಿಶಿಯನ್‌ ಹುದ್ದೆಗಳನ್ನು ತುಂಬಬೇಕಾಗಿದೆ.

ಆವರಣದೊಳಗೆ ಖಾಸಗಿ ರಸ್ತೆ
ವೈದ್ಯರ ಹುದ್ದೆಗಳು ಖಾಲಿ ಇರುವುದರಿಂದ ಹೆರಿಗೆ, ಶಸ್ತ್ರಚಿಕಿತ್ಸೆಗಳು ನಡೆಯುತ್ತಿಲ್ಲ. ಒಳರೋಗಿಗಳಿಗೆ ಹಗಲು ಹೊತ್ತಿನ ಚಿಕಿತ್ಸೆ ಮಾತ್ರ ಲಭ್ಯವಿದೆ. ಈ ಹಿಂದೆ ಆಸ್ಪತ್ರೆಗೆ ರಸ್ತೆಯ ಸಮಸ್ಯೆಯಿದ್ದು, ಇದೀಗ ಕಾಂಕ್ರೀಟ್‌ ರಸ್ತೆ ನಿರ್ಮಾಣಗೊಂಡಿದೆ. ಆಸ್ಪತ್ರೆಯ ಆವರಣದಿಂದ ಖಾಸಗಿ ರಸ್ತೆ ಹಾದು ಹೋಗಿದ್ದು, ಮಾತುಕತೆ ನಡೆಸಿ ಈ ರಸ್ತೆ ತೆರವುಗೊಳಿಸಿ ಆಸ್ಪತ್ರೆಗೆ ಆವರಣ ಗೋಡೆ ನಿರ್ಮಿಸಬೇಕಾಗಿದೆ.

ಶೀಘ್ರ ಹೆಚ್ಚಿನ ಸೌಲಭ್ಯ
ವಾಮದಪದವು ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರ ಹುದ್ದೆಗಳು ಖಾಲಿಯಿದ್ದು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರಕಾರದಿಂದ ನೇಮಕಾತಿ ಸಂದರ್ಭದಲ್ಲಿ ಹುದ್ದೆ ಭರ್ತಿಯಾಗಲಿದೆ. ಶೀಘ್ರ ನೇಮಕಾತಿಯಾಗುವ ಅವಕಾಶವಿದೆ. ಇದರಿಂದ ಆಸ್ಪತ್ರೆಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯ ದೊರೆಯಲಿದೆ. 
– ಡಾ| ದೀಪಾ ಪ್ರಭು, ತಾಲೂಕು ಆರೋಗ್ಯ ಅಧಿಕಾರಿ

— ರತ್ನದೇವ್‌ ಪುಂಜಾಲಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next