ಚಳ್ಳಕೆರೆ: ಕೇಂದ್ರ ಬರ ಅಧ್ಯಯನ ತಂಡ ಭಾನುವಾರ ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ತಾಲೂಕಿನ ಗಡಿ ಭಾಗದ ಕೆಂಚಮ್ಮನಹಳ್ಳಿಯಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ತಂಡವನ್ನು ಬರಮಾಡಿಕೊಂಡರು. ಸಂಸದ ಬಿ.ಎನ್. ಚಂದ್ರಪ್ಪ ಹಾಗೂ ಶಾಸಕ ಟಿ. ರಘುಮೂರ್ತಿ ಇಲ್ಲಿನ ಬರ ಪರಿಸ್ಥಿತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕೂಡಲೇ ವರದಿ ನೀಡುವಂತೆ ಕೋರಿದರು.
ಆರಂಭದಲ್ಲಿ ಪರಶುರಾಂಪುರ ಗ್ರಾಮದ ಹಳೆ ಕೆರೆಗೆ ಭೇಟಿ ನೀಡಿದ ಬರ ಅಧ್ಯಯನ ತಂಡದ ಸದಸ್ಯರು, ಅಲ್ಲಿನ ಕೆರೆ ಸಂಪೂರ್ಣವಾಗಿ ಒಣಗಿದ್ದನ್ನು ವೀಕ್ಷಿಸಿದರು. ಕೆರೆಯ ಒಳಭಾಗ ಹಾಗೂ ದಂಡೆ ಮೇಲೆ ಬಳ್ಳಾರಿ ಜಾಲಿ ಬೆಳೆದಿದ್ದನ್ನೂ ಗಮನಿಸಿದರು.
ಗ್ರಾಮದ ಐತಿಹಾಸಿಕ ಕೆರೆ ಇದಾಗಿದ್ದು ಸುಮಾರು 30 ವರ್ಷಗಳಿಂದ ಈ ಕೆರೆಗೆ ನೀರು ಬಂದಿಲ್ಲ ಎಂದು ಗ್ರಾಮಸ್ಥರು ತಂಡಕ್ಕೆ ಮನವರಿಕೆ ಮಾಡಿಕೊಟ್ಟರು. ನಂತರ ಅಲ್ಲಿಂದ ನೇರವಾಗಿ ಪರಶುರಾಂಪುರದ ಅಮೃತ ಮಹಲ್ ಕಾವಲು ಬಳಿ 5 ಲಕ್ಷ ರೂ. ವೆಚ್ಚದ ನರೇಗಾ ಕಾಮಗಾರಿಯನ್ನು ಪರಿಶೀಲಿಸಲಾಯಿತು. ಕೂಲಿಕಾರರಾದ ತಿಮ್ಮರಾಜು, ಮಹಾಲಕ್ಷ್ಮೀ ಎಂಬುವವರೊಂದಿಗೆ ಕೇಂದ್ರ ತಂಡದ ಸದಸ್ಯರು ಕೂಲಿ ಪಾವತಿ ಮತ್ತಿತರ ವಿಚಾರಗಳ ಬಗ್ಗೆ ಮಾಹಿತಿ ಪಡೆದರು.
ಇದಾದ ಬಳಿಕ ಪರಶುರಾಂಪುರ ಗ್ರಾಮಕ್ಕೆ ತೆರಳಿ ಕುಡಿಯುವ ನೀರಿನ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿದರು. ಪರಶುರಾಂಪುರದಿಂದ ದೊಡ್ಡಗೊಲ್ಲರ ಹಟ್ಟಿಗೆ ಮೂರು ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದರು. ಅಲ್ಲಿಂದ ವೇದಾವತಿ ನದಿ ತಟಕ್ಕೆ ಬಂದ ತಂಡ, ನದಿ ಸಂಪೂರ್ಣ ಬತ್ತಿ ಹೋಗಿದ್ದನ್ನು ವೀಕ್ಷಿಸಿತು. ಬಳಿಕ ಚೌಳೂರು ಗ್ರಾಮದ ನಾಗಣ್ಣ ಬಿನ್ ಅಜ್ಜಪ್ಪ ಎಂಬುವವರ ಜಮೀನಿನಲ್ಲಿ ಕೃಷಿ ಇಲಾಖೆಯಿಂದ ನಿರ್ಮಾಣ ಮಾಡಿದ್ದ ಕೃಷಿಹೊಂಡ, ಚಟ್ಟೆಕಂಬದ ರೈತ ತಿಪ್ಪೇಸ್ವಾಮಿ ಎಂಬುವವರ ಒಣಗಿದ ತೆಂಗಿನತೋಟವನ್ನು ವೀಕ್ಷಣೆ ಮಾಡಿತು. ಇದೇ ಸಂದರ್ಭದಲ್ಲಿ ಮಲ್ಲಪ್ಪ ಎಂಬುವವರು ತಾವು ಮೂರು ಎಕರೆ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಿದ್ದು, ಸಂಪೂರ್ಣ ಒಣಗಿದೆ. ಬಿತ್ತನೆ ಕಾರ್ಯಕ್ಕೆ 60 ಸಾವಿರ ರೂ. ಖರ್ಚು ಮಾಡಿರುವುದಾಗಿ ತಿಳಿಸಿದರು.
ರೈತಸಂಘದ ಮುಖಂಡರಾದ ಕರೀಕೆರೆ ಭೀಮಾರೆಡ್ಡಿ, ರೆಡ್ಡಿಹಳ್ಳಿ ವೀರಣ್ಣ, ತಿಪ್ಪೇಸ್ವಾಮಿ, ಬಾಲರಾಜು ಮಾತನಾಡಿ, ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದರು. ಜಿಪಂ ಸಿಇಒ ಪಿ.ಎನ್. ರವೀಂದ್ರ, ಪ್ರೊಬೇಷನರಿ ಐಎಎಸ್ ಅಧಿಕಾರಿ ಡಾ| ಕೆ. ನಂದಿನಿದೇವಿ, ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ್, ಉಪವಿಭಾಗಾಧಿ ಕಾರಿ ವಿಜಯಕುಮಾರ್, ಕೃಷಿ ಇಲಾಖೆ ಉಪನಿರ್ದೇಶಕಿ ಡಾ| ಸುಜಾತಾ, ತಹಶೀಲ್ದಾರ್ ಟಿ.ಸಿ. ಕಾಂತರಾಜ್, ತಾಪಂ ಇಒ ಈಶ್ವರಪ್ರಸಾದ್, ಸಿಪಿಐ ಎನ್. ತಿಮ್ಮಣ್ಣ, ಸಹಾಯಕ ಕೃಷಿ ನಿರ್ದೇಶಕ ಮಾರುತಿ ಇದ್ದರು.
ಬರ ಪರಿಸ್ಥಿತಿಯ ಸಮಗ್ರ ವರದಿಯನ್ನು ಈಗಾಗಲೇ ಕೃಷಿ ಇಲಾಖೆ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇಲ್ಲಿನ ರೈತರು ಬರ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಕೇಂದ್ರ ಸರ್ಕಾರ ರೈತರ ಹಿತದೃಷ್ಟಿಯಿಂದ ಪರಿಹಾರವನ್ನು ಸಮರ್ಪಕವಾಗಿ ನೀಡಬೇಕು. ಒಂದು ಹೆಕ್ಟೇರ್ ಪ್ರದೇಶಕ್ಕೆ 6500 ರೂ. ಪರಿಹಾರ ನೀಡುತ್ತಿರುವುದನ್ನು ಹೆಚ್ಚಿಸಬೇಕು.
ಟಿ. ರಘುಮೂರ್ತಿ, ಶಾಸಕರು.