Advertisement

ಎಸೆಸೆಲ್ಸಿ ಫಲಿತಾಂಶ: ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಕನಸು

02:11 AM Aug 11, 2020 | mahesh |

ಸುಮುಖ್‌ಗೆ ಸಂಶೋಧಕನಾಗುವ ಕನಸು
624/625
ವಿಟ್ಲ: ಇಲ್ಲಿನ ಅಳಿಕೆ ಶ್ರೀ ಸತ್ಯಸಾಯಿ ಪ್ರೌಢ ಶಾಲೆಯ ವಿದ್ಯಾರ್ಥಿ ಸುಮುಖ್‌ ಸುಬ್ರಹ್ಮಣ್ಯ ಶೆಟ್ಟಿ ಅವರು 624 ಅಂಕ ಗಳಿಸಿದ್ದಾರೆ. ಅವರು ಹೊನ್ನಾವರ ಕಡತೋಕಾ ಮೂಲದ, ಪ್ರಸ್ತುತ ತೀರ್ಥಹಳ್ಳಿ ನಿವಾಸಿ ಸುಬ್ರಹ್ಮಣ್ಯ ಶೆಟ್ಟಿ – ರಶ್ಮಿ ದಂಪತಿಯ ಪುತ್ರ. ಶಿಕ್ಷಕರ ಅತ್ಯುತ್ತಮ ಮಾರ್ಗದರ್ಶನ, ಕೋವಿಡ್ ಭಯದ ಮಧ್ಯೆ ಓದಲು ಹುರಿದುಂಬಿಸಿದ ಹೆತ್ತವರಿಂದಾಗಿ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು. ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿ, ಉತ್ತಮ ಸಂಶೋಧಕನಾಗಬೇಕೆಂಬ ಕನಸನ್ನು ಹೊಂದಿದ್ದೇನೆ ಎಂದು ಅವರು ಹೇಳಿದರು. ಅಳಿಕೆಯ ಶಿಕ್ಷಣ
ಸಂಸ್ಥೆಯಲ್ಲಿ ಇರುವ ಎಲ್ಲ ಶಿಕ್ಷಕರೂ ಯೋಗ್ಯ ರೀತಿಯಲ್ಲಿ ನನಗೆ ಮಾರ್ಗ ದರ್ಶನ ಮಾಡಿದ್ದರಿಂದ ಮತ್ತು ಶ್ರೀ ಸತ್ಯ ಸಾಯಿಬಾಬಾ ಅವರ ಕೃಪೆಯಿಂದ ನನಗೆ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಯಿತು ಎನ್ನುತ್ತಾರೆ ಅವರು.

Advertisement


ನಿಧಿಗೆ ನಿರೀಕ್ಷಿತ ಅಂಕ ಗಳಿಸಿದ ಖುಷಿ

624/625
ಮಂಗಳೂರು: ವೇಳಾ ಪಟ್ಟಿ ಹಾಕಿಕೊಂಡು ಓದಿದ್ದೆ. ಯಾವುದೇ ಒತ್ತಡ ತೆಗೆದು ಕೊಳ್ಳದೆ ನಿರಾತಂಕವಾಗಿ ಓದುತ್ತಿದ್ದೆ. ಉತ್ತಮ ಅಂಕಗಳ ನಿರೀಕ್ಷೆ ಇತ್ತು. ಇದೀಗ 624 ಅಂಕದೊಂದಿಗೆ ರಾಜ್ಯದಲ್ಲಿ 2ನೇ ಸ್ಥಾನ ಹಂಚಿಕೊಂಡಿರುವುದು ಖುಷಿ ತಂದಿದೆ. ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಅಭಿಲಾಷೆ ಹೊಂದಿದ್ದೇನೆ. ಹೆತ್ತವರು ಮತ್ತು ಶಿಕ್ಷಕರ ಪ್ರೋತ್ಸಾಹ ಮತ್ತು ಮಾರ್ಗದರ್ಶನವೇ ಹೆಚ್ಚು ಅಂಕ ಪಡೆಯಲು ಪ್ರೇರಣೆ ಎಂದು ಸಂತಸ ಹಂಚಿಕೊಂಡರು ಕೊಡಿಯಾಲ್‌ಬೈಲ್‌ನ ನಿಧಿ ರಾವ್‌. ನಿಧಿ ಅವರು ಎಸ್‌ಬಿಐ ಬ್ಯಾಂಕ್‌ನ ಮಲ್ಲಿಕಟ್ಟೆ ಶಾಖೆಯ ಡೆಪ್ಯುಟಿ ಮ್ಯಾನೇಜರ್‌ ಜಯಚಂದ್ರ ಬಿ.ವಿ. ಮತ್ತು ಬಲ್ಮಠ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ನ ಉದ್ಯೋಗಿ ಸ್ವಪ್ನಾ ಜೆ. ಅವರ ಪುತ್ರಿ. ಅಕ್ಕ ನಿಖೀತಾ ರಾವ್‌ ಬೆಂಗಳೂರಿನಲ್ಲಿ ಸಾಫ್ಟ್‌ ವೇರ್‌ ಎಂಜಿನಿಯರ್‌ ಆಗಿದ್ದಾರೆ. ಮಗಳ ಸಾಧನೆ ನಮಗೆ ತುಂಬಾ ಹೆಮ್ಮೆಯಾಗಿದೆ ಎಂದು ಖುಷಿ ವ್ಯಕ್ತಪಡಿಸಿದರು ನಿಧಿಯ ಹೆತ್ತವರಾದ ಜಯಚಂದ್ರ ಮತ್ತು ಸ್ವಪ್ನಾ.


ಕೌಶಿಕ್‌ ರಾವ್‌ಗೆ ವೈದ್ಯನಾಗುವ ಆಸೆ

623/625
ಕಡಬ: ಪೇಜಾವರ ಮಠಾಧೀಶರ ಹಿರಿತನದಲ್ಲಿ ನಡೆಯುತ್ತಿರುವ ರಾಮ ಕುಂಜದ ಶ್ರೀ ರಾಮ ಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿ ಕೆ. ಕೌಶಿಕ್‌ ರಾವ್‌ 625ರಲ್ಲಿ 623 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಮೂರನೇ ರ್‍ಯಾಂಕ್‌ ಗಳಿಸಿದ್ದಾರೆ. ಕೌಶಿಕ್‌ ಅವರು ಬದೆಂಜ ನಿವಾಸಿ ಚಿತ್ತರಂಜನ್‌ ರಾವ್‌ ಹಾಗೂ ಸಂಧ್ಯಾ ರಾವ್‌ ದಂಪತಿಯ ಪುತ್ರ. ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್‌ನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಯಕ್ಷಗಾನ ಕಲಾವಿದನೂ ಹೌದು.ಮಿಮಿಕ್ರಿಯಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಹಾಗೂ ಕ್ರೀಡೆಯಲ್ಲೂ ಭಾಗ ವಹಿಸಿದ್ದಾರೆ. ಮುಂದೆ ವಿಜ್ಞಾನ ಓದಿ ವೈದ್ಯನಾಗಬೇಕೆಂಬ ಬಯಕೆ ವ್ಯಕ್ತಪಡಿಸುತ್ತಾರೆ. ಪೇಜಾವರ ಮಠಾಧೀಶರು ಕೌಶಿಕ್‌ನನ್ನು ಆಶೀರ್ವದಿಸಿ ಅಭಿನಂದಿಸಿದ್ದಾರೆ.

ತನ್ವಿಗೆ ವಿಜ್ಞಾನದಲ್ಲಿ ಸಾಧನೆ ಮಾಡುವಾಸೆ
623/625
ಮಂಗಳೂರು: ಲೇಡಿಹಿಲ್‌ ವಿಕ್ಟೋರಿಯಾ ಪ್ರೌಢಶಾಲೆಯ ವಿದ್ಯಾರ್ಥಿನಿ ತನ್ವಿ ಎಸ್‌. ನಾಯಕ್‌ 623 ಅಂಕ ಗಳಿಸಿದ್ದಾರೆ. ಇಂಗ್ಲಿಷ್‌ನಲ್ಲಿ 124, ಕನ್ನಡ, ಹಿಂದಿ, ಗಣಿತ ಮತ್ತು ಸಮಾಜವಿಜ್ಞಾನದಲ್ಲಿ ತಲಾ 100, ವಿಜ್ಞಾನದಲ್ಲಿ 99 ಅಂಕ ಗಳಿಸಿದ್ದಾರೆ. ತಂದೆ ಸಂಜೀವ್‌ ನಾಯಕ್‌ ಅವರು ಎಲೆಕ್ಟ್ರಿಕಲ್‌ ಎಂಜಿನಿಯರ್‌ ಹಾಗೂ ತಾಯಿ ಗಾಯತ್ರಿ ನಾಯಕ್‌ ಅವರು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ.
ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡುವ ಆಸೆ ಇದೆ. ನಾನು ತರಗತಿಯಲ್ಲಿ ಆಯಾ ದಿನ ಮಾಡಿದ ಪಾಠವನ್ನು ಅದೇ ದಿನ ಮನೆಯಲ್ಲಿಯೂ ಅಭ್ಯಾಸ ಮಾಡಿಕೊಳ್ಳುತ್ತಿದ್ದೆ. ಬೆಳಗ್ಗೆ ಮತ್ತು ರಾತ್ರಿ ಕೂಡ ಸ್ವಲ್ಪ ಹೆಚ್ಚು ಸಮಯವನ್ನು ಅಭ್ಯಾಸಕ್ಕೆ ನೀಡುತ್ತಿದ್ದೆ. ಶಿಕ್ಷಕರು, ಹೆತ್ತವರ ಪ್ರೋತ್ಸಾಹ ತುಂಬಾ ಸಿಕ್ಕಿದೆ. ಶಾಲೆಯಲ್ಲಿ ಚೆನ್ನಾಗಿ ಹೇಳಿಕೊಡುತ್ತಿದ್ದರು. ಉತ್ತಮ ಅಂಕದ ನಿರೀಕ್ಷೆ ಇತ್ತು. ನಾನು ಎಲ್ಲ ವಿಷಯಗಳನ್ನು ಕೂಡ ಸಮಾನ ಆದ್ಯತೆ ನೀಡಿ ಓದುತ್ತಿದ್ದೆ. ವಿಜ್ಞಾನ ಮತ್ತು ಗಣಿತಕ್ಕೆ ಇನ್ನೂ ಹೆಚ್ಚು ಗಮನ ನೀಡುತ್ತಿದ್ದೆ. ಹೆಚ್ಚು ಅಂಕ ಪಡೆಯಬೇಕಾದರೆ ಎಲ್ಲ ವಿಷಯಗಳಿಗೂ ಆದ್ಯತೆ ನೀಡಿ ಓದುವುದು ಅಗತ್ಯ.

Advertisement

ಲಕ್ಷ್ಮೀ ನಾಯ್ಕ ಅವರಿಗೆ ವೈದ್ಯೆಯಾಗುವಾಸೆ
623/625
ಕಾರ್ಕಳ: ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿದ್ಯಾರ್ಥಿನಿ ಲಕ್ಷ್ಮೀ ಪಿ. ನಾಯ್ಕ 623 ಅಂಕ ಗಳಿಸಿ ದ್ದಾರೆ. ಅವರು ಜೋಡು ರಸ್ತೆ ನಿವಾಸಿ ಬೈಲೂರು ಪಿಯು ಕಾಲೇಜು ಉಪನ್ಯಾಸಕ ಪ್ರಮೋದ್‌ ಬಿ. ನಾಯ್ಕ ಹಾಗೂ ಶಿಕ್ಷಕಿಯಾಗಿರುವ ಜಯಶ್ರೀ ದಂಪತಿಯ ಪುತ್ರಿ. ತರಗತಿ ಪಾಠವನ್ನು ಗಮನವಿಟ್ಟು ಆಲಿಸುತ್ತಿದ್ದೆ. ಅದಂದಿನ ಪಾಠವನ್ನು ಅಂದಂದೇ ಅಭ್ಯಸಿಸುತ್ತಿದ್ದೆ. ಬೆಳಗ್ಗೆ 6ರಿಂದ ರಾತ್ರಿ 10ಕ್ಕೆ ದಿನಚರಿ. ಯಾವುದೇ ಒತ್ತಡಕ್ಕೆ ಒಳಗಾಗುತ್ತಿರಲಿಲ್ಲ. ಭಜನೆ, ಸಂಗೀತದ ಕಡೆ ಒಲವಿದೆ. ಅದರಿಂದ ಏಕಾಗ್ರತೆ ದೊರೆತು ಓದಿಗೆ
ಅನುಕೂಲವಾಯಿತು. ಮುಂದೆ ವೈದ್ಯೆಯಾಗಿ ಬಡವರ ಸೇವೆ ಮಾಡಬೇಕು ಎನ್ನುವ ಬಯಕೆ ಈಕೆಯದು.


ಭವ್ಯಾಗೆ ಎಂಜಿನಿಯರ್‌ ಆಗುವಾಸೆ

622/625
ಉಡುಪಿ: ಒಳಕಾಡು ಸರಕಾರಿ ಪ್ರೌಢಶಾಲೆಯ ಭವ್ಯಾ ನಾಯಕ್‌ 622 ಅಂಕ ಗಳಿಸಿದ್ದಾರೆ. ಅವರು ಪುತ್ತೂರು ಎಲ್‌ವಿಟಿ ನಿವಾಸಿ ಬಿ. ನಾರಾಯಣ ನಾಯಕ್‌, ಉಮಾ ನಾಯಕ್‌ ದಂಪತಿಯ ಪುತ್ರಿ. 620ಕ್ಕೂ ಅಧಿಕ ಅಂಕ ಪಡೆಯುವ ವಿಶ್ವಾಸ ಇತ್ತು. ದಿನಕ್ಕೆ ಮೂರು ಹೊತ್ತು ಸಮಯ ನಿಗದಿ ಮಾಡಿಕೊಂಡು ಓದಿದೆ ಎಂದರು.
ಯೂಟ್ಯೂಬ್‌ ಕಲಿಕೆ, ಸ್ಮಾರ್ಟ್‌ ತರಗತಿಗಳು ಲಾಕ್‌ಡೌನ್‌ ಅವಧಿಯಲ್ಲಿ ಕೈಹಿಡಿದವು. ಮನೆಯಲ್ಲಿ ಪೋಷಕರು ಓದಿಗೆ ಪ್ರೋತ್ಸಾಹಿಸುತ್ತಿದ್ದರು. ಶಿಕ್ಷಕರೂ ಕೂಡ ನಿರಂತರ ಸಂಪರ್ಕದಲ್ಲಿದ್ದು ಸೂಕ್ತ ರೀತಿಯಲ್ಲಿ ಸಲಹೆ-ಸೂಚನೆಗಳನ್ನು ನೀಡುತ್ತಿದ್ದರು ಎಂದು ತಿಳಿಸಿದ್ದಾರೆ.
ಭವಿಷ್ಯದಲ್ಲಿ ಒಳ್ಳೆಯ ಕಾಲೇಜು ಸೇರಿ ವಿಜ್ಞಾನ ವಿಷಯ ಪಡೆದು ಎಂಜಿನಿಯರಿಂಗ್‌ ಮಾಡಬೇಕು ಎಂಬ ಆಸೆ ಅವರಿಗೆ.

ಶಿಕ್ಷಕ ಪುತ್ರಿಯ ಸಾಧನೆ
622/625
ಮೂಡುಬಿದಿರೆ: “ಬಹಳ ಖುಷಿ ಆಗು ತ್ತಿದೆ. ಪಾಠಗಳು ಪರಿಣಾಮಕಾರಿಯಾ ಗಿದ್ದವು. ಲಾಕ್‌ಡೌನ್‌ ಸಮಯ ಹೆಚ್ಚಿನ ತರಬೇತಿ ಕೊಟ್ಟಿದ್ದರು. ಸಂಸ್ಥೆಯ ಅಧ್ಯಕ್ಷ ಡಾ| ಆಳ್ವರು ಪ್ರೋತ್ಸಾಹಿಸುತ್ತಿದ್ದರು. ಆಳ್ವಾಸ್‌ನಲ್ಲೇ ನಾನು ಪಿಯುಸಿ ಓದುವವಳಿದ್ದೇನೆ’ ಎನ್ನುತ್ತಾರೆ 622 ಅಂಕ ಗಳಿಸಿರುವ ಆಳ್ವಾಸ್‌ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಬೆಳಗಾವಿ ರಾಮದುರ್ಗಾದ ಹಿರೇಬಾನ್‌ನ ಪ್ರಕೃತಿಪ್ರಿಯ. ತಂದೆ ರವೀಂದ್ರ ಗೋಕಾವಿ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ, ತಾಯಿ ಅಂಜನಾ ಗೃಹಿಣಿ. “ಮಗಳ ಸಾಧನೆಯಿಂದ ನಮಗೆ ಖುಷಿಯಾಗಿದೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ’ ಎಂದು ತಂದೆ ಪ್ರತಿಕ್ರಿಯಿಸಿದ್ದಾರೆ.

ಕೃಷಿಕ ದಂಪತಿ ಪುತ್ರನ ಸಾಧನೆ
622/625
ಮೂಡುಬಿದಿರೆ: “ನಮ್ಮ ಶಿಕ್ಷಕರು ಎಲ್ಲ ಸಂಶಯಗಳ ನಿವಾರಣೆ ಮಾಡು ತ್ತಿದ್ದರು. ಪ್ರಿಪರೇ ಟರಿ ತಯಾರಿ ಚೆನ್ನಾಗಿತ್ತು. ಲಾಕ್‌ಡೌನ್‌ ಸಮಯದಲ್ಲಿಯೂ ವಿಶೇಷ ತರಬೇತಿ ಕೊಟ್ಟಿದ್ದು ನನಗೆ ಹೆಚ್ಚಿನ ಅಂಕ ಗಳಿಸಲು ಸಹಕಾರಿಯಾಗಿದೆ. ಡಾ| ಮೋಹನ ಆಳ್ವರು ನಮ್ಮೆಲ್ಲರ ಮೇಲೆ ಕಾಳಜಿ ವಹಿಸಿದ್ದರು’ ಎನ್ನುತ್ತಾರೆ 622 ಅಂಕ ಗಳಿಸಿದ ಆಳ್ವಾಸ್‌ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಮ್ಮೇದ್‌ ಮಹಾವೀರ್‌.
ಸಮ್ಮೇದ್‌ ಬೆಳಗಾವಿಯ ಅಳಗವಾಡಿಯವರು. ತಂದೆ ಮಹಾವೀರ್‌ ಕೃಷಿಕ. ತಾಯಿ ಸಂಗೀತಾ ಗೃಹಿಣಿ. ಅಕ್ಕ ಸ್ವಾತಿ ಊರಲ್ಲೇ ಪಿಯುಸಿ, ತಂಗಿ ಶ್ರುತಿ 9ನೇ ತರಗತಿ ಓದುತ್ತಿದ್ದಾರೆ.

ಕಠಿನ ಶ್ರಮದಿಂದ ಗೆಲುವು
622/625
ಸುರತ್ಕಲ್‌: ಯಾವುದೇ ಕ್ಷಣ ಪರೀಕ್ಷೆ ಘೋಷಣೆ ಆಗಬಹುದು ಎಂಬ ನಿರೀಕ್ಷೆ ಯೊಂದಿಗೆ ಪ್ರತಿ ನಿತ್ಯ ಅಭ್ಯಾಸ ಮಾಡುತ್ತಿದ್ದೆ. ಶಿಕ್ಷಕರು, ಆಡಳಿತ ಮಂಡಳಿ, ಶಿಕ್ಷಕ – ರಕ್ಷಕ ಸಂಘ ಸಹಕಾರವೂ ಇತ್ತು ಎಂದಿದ್ದಾರೆ ಇಡ್ಯಾ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶೇಷಕೃಷ್ಣ ಅವರು.
ಸುರತ್ಕಲ್‌ನ ಎಸ್‌.ಆರ್‌. ಹರಿಕೃಷ್ಣ – ವಿದ್ಯಾಲಕ್ಷ್ಮೀ ದಂಪತಿಯ ಪುತ್ರನಾಗಿರುವ ಶೇಷಕೃಷ್ಣ ಅವರು ಪರೀಕ್ಷೆಯಲ್ಲಿ ಕಠಿನ ಪರಿಶ್ರಮದಿಂದ ಕಲಿತು ಈ ಸಾಧನೆ ಮಾಡಿದ್ದಾರೆ.

ಗುರಿ ಸಾಧಿಸಿದ ತೃಪ್ತಿ
622/625
ಸುರತ್ಕಲ್‌: ಕೊರೊನಾ ಹಾವಳಿಯ ನಡುವೆ ಪರೀಕ್ಷೆ ಮಾಡಬೇಕೋ, ಬೇಡವೋ ಎಂಬ ಗೊಂದಲ ಇದ್ದರೂ ಓದನ್ನು ನಿಲ್ಲಿಸದೆ ಗರಿಷ್ಠ ಅಂಕ ಪಡೆಯಬೇಕೆಂಬ ಉದ್ದೇಶದಿಂದ ಓದುತ್ತಿದ್ದೆ ಎನ್ನುತ್ತಾರೆ 622 ಅಂಕ ಗಳಿಸಿರುವ ಇಡ್ಯಾ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಪ್ರಜ್ಞಾ ಬಿ. ಶೆಟ್ಟಿಗಾರ್‌. ಶಿಕ್ಷಕರು, ಹೆತ್ತವರ ಪ್ರೋತ್ಸಾಹ, ಶಾಲೆಯ ಆಡಳಿತ ಮಂಡಳಿ, ಪಿಟಿಎ ಸಹಕಾರ ಸಿಕ್ಕಿದ್ದು ಸಾಧನೆಗೆ ಸಹಕಾರಿಯಾಯಿತು ಎನ್ನುವ ಪ್ರಜ್ಞಾ ಮುಂದೆ ಪಿಯುಸಿಯಲ್ಲಿ ಪಿಸಿಎಂಬಿ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಅಂಕ ನಿರೀಕ್ಷಿಸಿದ್ದ ಶ್ರೇಯಾ
622/625
ಬೆಳ್ತಂಗಡಿಯ ಸೈಂಟ್‌ ಮೇರಿಸ್‌ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ಡೋಂಗ್ರೆ 622 ಅಂಕ
ಗಳಿಸಿ ರಾಜ್ಯಕ್ಕೆ ನಾಲ್ಕನೇ ಮತ್ತು ತಾಲೂಕಿಗೆ ಅಗ್ರಸ್ಥಾನಿ ಯಾಗಿದ್ದಾರೆ. 622 ಅಂಕ ಪಡೆದಿರುವುದು ಖುಷಿ ನೀಡಿದೆ. ಶಿಕ್ಷಕರು, ಹೆತ್ತವರು, ಕುಟುಂಬದಿಂದ ಉತ್ತಮ ಬೆಂಬಲ ಸಿಕ್ಕಿತ್ತು. ಅರ್ಥವಾಗದ ಪಠ್ಯ ವಿಷಯಗಳ ಕುರಿತು ಶಿಕ್ಷಕರು ಪುನರ್‌ ಮನನಗೊಳಿಸುತ್ತಿದ್ದರು. ಕೋವಿಡ್‌ ಸಮಯದಲ್ಲಿ ನಾವು ಪಠ್ಯ ಮರೆಯದಂತೆ ವಾಟ್ಸ್‌ ಆ್ಯಪ್‌ ಮೂಲಕ ಹೋಂವರ್ಕ್‌ ಕಳುಹಿಸುತ್ತಿದ್ದರು. ಇದರಿಂದ ಹೆಚ್ಚು ಅಂಕ ಪಡೆಯಲು ಸಹಾಯ ವಾಯಿತು ಎಂದಿದ್ದಾರೆ ಅವರು. ಶ್ರೇಯಾ ಲಾೖಲದ ಡಾ| ದೀಪಾಲಿ ಡೋಂಗ್ರೆ ಹಾಗೂ ಡಾ| ಶಶಿಕಾಂತ್‌ ಡೋಂಗ್ರೆ ಅವರ ಪುತ್ರಿ.

Advertisement

Udayavani is now on Telegram. Click here to join our channel and stay updated with the latest news.

Next