ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಸ್ತುತ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ತೋರಿದ್ದಾರೆ. ಪರೀಕ್ಷೆ ಬರೆದ ಒಟ್ಟು 8,53,102 ವಿದ್ಯಾರ್ಥಿಗಳ ಪೈಕಿ 7,00,619 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಒಟ್ಟಾರೆ ಶೇ.83.89ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಫಲಿತಾಂಶದಲ್ಲಿ ಕೊಂಚ ಇಳಿಕೆಯಾಗಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದರೆ ಒಟ್ಟು ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ.
ಶೇ.96.08 ಫಲಿತಾಂಶದೊಂದಿಗೆ ಚಿತ್ರದುರ್ಗ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದರೆ ಮಂಡ್ಯ ಮತ್ತು ಹಾಸನ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದೆ. ಇನ್ನು ಯಾದಗಿರಿ ಜಿಲ್ಲೆ ಶೇ. 75.49 ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಒಟ್ಟಾರೆಯಾಗಿ 23 ಜಿಲ್ಲೆಗಳು ಎ ಗ್ರೇಡ್ ಪಡೆದಿದ್ದರೆ 12 ಜಿಲ್ಲೆಗಳು ಬಿ ಗ್ರೇಡ್ ಪಡೆದಿವೆ.
ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನಲ್ಲಿ ಎಸೆಸೆಲ್ಸಿ ಮಹತ್ತರ ಮೈಲುಗಲ್ಲಾಗಿದ್ದು ಇದರ ಫಲಿತಾಂಶ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಭದ್ರ ಬುನಾದಿಯಾಗಿದೆ. ಎಸೆಸೆಲ್ಸಿ ಫಲಿತಾಂಶದ ಬಳಿಕ ವಿದ್ಯಾರ್ಥಿಗಳಿಗೆ ತಮ್ಮ ಆಸಕ್ತಿಯ ವಿಷಯಗಳಲ್ಲಿ ಶಿಕ್ಷಣ ಮುಂದುವರಿಸುವ ಆಯ್ಕೆ ಲಭಿಸಲಿದ್ದು ಈ ಹಂತದಲ್ಲಿ ಒಂದಿಷ್ಟು ಯೋಚನೆ ಮಾಡಿ ಮುಂದಡಿ ಇಡುವುದು ಅತ್ಯಗತ್ಯವಾಗಿದೆ. ಎಸೆಸೆಲ್ಸಿಯಲ್ಲಿ ಉತ್ತಮ ಅಂಕ ಬಂದಿದೆ ಎಂದೋ ಆ ವಿಷಯದಲ್ಲಿಯೇ ಶಿಕ್ಷಣ ಪಡೆಯಬೇಕೆಂದು ಪಟ್ಟು ಹಿಡಿದು ತಮ್ಮ ಮುಂದಿನ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳುವ ಬದಲಾಗಿ ತಮ್ಮ ಆಸಕ್ತಿಯ ಮತ್ತು ಈ ವಿಷಯವನ್ನು ಆಯ್ಕೆ ಮಾಡಿಕೊಂಡರೆ ಅದನ್ನು ಯಶಸ್ವಿಯಾಗಿ ಪೂರೈಸಿ ಗುರಿ ತಲು ಪಬಲ್ಲೆ ಎಂಬ ಆತ್ಮವಿಶ್ವಾಸವನ್ನು ಹೊಂದಿರುವ ವಿಷಯವನ್ನು ಆಯ್ಕೆ ಮಾಡಿಕೊಳ್ಳು ವುದು ಒಳಿತು. ಈ ವಿಚಾರದಲ್ಲಿ ವಿದ್ಯಾರ್ಥಿಗಳ ಹೆತ್ತವರ ಪಾತ್ರ ಅತ್ಯಂತ ಮುಖ್ಯ ವಾಗಿದೆ. ತಮ್ಮ ಮಕ್ಕಳ ಇಷ್ಟ-ಆಯ್ಕೆಗಳತ್ತ ಕಿಂಚಿತ್ತೂ ಗಮನ ಹರಿಸದೆ ತಮ್ಮ ಯೋಜನೆ ಯಂತೆಯೇ ಮಕ್ಕಳು ಶಿಕ್ಷಣವನ್ನು ಮುಂದುವರಿಸಬೇಕು ಎಂಬ ಹಠಕ್ಕೆ ಜೋತು ಬೀಳದೆ ಮಕ್ಕಳೊಂದಿಗೆ ಚರ್ಚಿಸಿ ಅವರಿಗೊಂದಿಷ್ಟು ಸಲಹೆ, ಕಿವಿಮಾತುಗಳನ್ನು ಹೇಳಿ ಬೇಕು. ಇದರ ಜತೆಯಲ್ಲಿ ಮಕ್ಕಳು ಹೇಳಿದ್ದಕ್ಕೆಲ್ಲ ತಲೆಯಾಡಿಸದೆ ಅವರ ಆಯ್ಕೆ ಸರಿ ಯಾಗಿದೆಯೇ ಎಂಬ ಬಗೆಗೆ ಪರಾಮರ್ಶಿಸಿ ಅಂತಿಮ ನಿರ್ಧಾರಕ್ಕೆ ಬರುವುದು ಸೂಕ್ತ.
ಇದೇ ವೇಳೆ ತಾವು ನಿರೀಕ್ಷಿಸಿದಷ್ಟು ಅಂಕ ಬಾರದಿದ್ದಲ್ಲಿ ಅಥವಾ ಅನುತ್ತೀರ್ಣ ರಾಗಿದ್ದಲ್ಲಿ ಆಕಾಶವೇ ಕಳಚಿ ಬಿತ್ತು ಎಂಬಂತೆ ಮಕ್ಕಳು ಮತ್ತವರ ಹೆತ್ತವರು ತಲೆ ಕೆಡಿಸಿಕೊಳ್ಳಬಾರದು. ಈ ಕಾರಣಕ್ಕಾಗಿ ಮಕ್ಕಳನ್ನು ಪದೇಪದೆ ಅವಮಾನಿಸುವುದು, ನಿರ್ಲಕ್ಷಿಸುವುದು ಸರಿಯಲ್ಲ. ಉತ್ತರ ಪತ್ರಿಕೆಯ ಪ್ರತಿಯನ್ನು ತರಿಸಿಕೊಂಡು ಪರಿಶೀ ಲಿಸಿ, ತಪ್ಪುಗಳಾಗಿದ್ದಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಇನ್ನು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಪೂರಕ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ತೇರ್ಗಡೆಯಾಗಬಹುದಾಗಿದೆ. ಹೀಗಾಗಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಹಾಲಿ ಫಲಿತಾಂಶದಿಂದ ಹತಾಶರಾಗದೆ ಒಂದಿಷ್ಟು ಧೈರ್ಯ ತಂದುಕೊಂಡು ಪೂರಕ ಪರೀಕ್ಷೆಗೆ ಹಾಜರಾಗಲು ಸನ್ನದ್ಧರಾಗಬೇಕಿದೆ. ಈ ದಿಸೆಯಲ್ಲಿ ಮಕ್ಕಳ ಹೆತ್ತವರೂ ಕೂಡ ವಿದ್ಯಾರ್ಥಿಗಳಿಗೆ ಧೈರ್ಯ ಮತ್ತು ಮಾನಸಿಕ ಸ್ಥೈರ್ಯ ತುಂಬಬೇಕಿದೆ.
ಎಸೆಸೆಲ್ಸಿ ಫಲಿತಾಂಶ ಉತ್ತಮವಾಗಿರುವುದರಿಂದ ಈ ಬಾರಿಯೂ ಪಿಯುಸಿಗೆ ಸೇರ್ಪಡೆಗೊಳ್ಳುವವರ ಸಂಖ್ಯೆ ಅಧಿಕವಾಗಿರಲಿದೆ. ಹೀಗಾಗಿ ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸೇರ್ಪಡೆಗೆ ಅವಶ್ಯವಾದ ಕ್ರಮಗಳನ್ನು ಕೈಗೊಳ್ಳಬೇಕಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆ ಕೂಡ ಉತ್ತಮವಾಗಿರುವುದರಿಂದ ಅವರ ಮುಂದಿನ ಶಿಕ್ಷಣಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಸರಕಾರ ಕಲ್ಪಿಸಿಕೊಡಬೇಕು.