ಕಾರ್ಕಳ: ಪಿಯುಸಿ ಪರೀಕ್ಷೆಯಲ್ಲಿ ಕುಕ್ಕುಂದೂರು ಕೆ.ಎಂ.ಇ.ಎಸ್. ಶಿಕ್ಷಣ ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿನಿಯೊಬ್ಬಳು ಉತ್ತಮ ಅಂಕಗಳೊಂದಿಗೆ ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಾಳೆ. ಆದರೆ ಪದವಿಪೂರ್ವ ಶಿಕ್ಷಣ ಮಂಡಳಿಯು ಬೇಜವಾಬ್ದಾರಿ ಯಿಂದ ಕಡಿಮೆ ಅಂಕ ಪ್ರಕಟಿಸಿ ರ್‍ಯಾಂಕ್ ಪಟ್ಟಿಯಲ್ಲಿ ಆಕೆ ಕೆಳಗಿನ ಸ್ಥಾನಕ್ಕಿಳಿಯುವಂತೆ ಮಾಡಿದೆ.
ಐದು ವಿಷಯಗಳಲ್ಲಿ ಉತ್ತಮ ಅಂಕ ಗಳನ್ನು ಗಳಿಸಿರುವ ಝುಹಾ ಫಿರ್ದೋಶ್ ಅವರಿಗೆ ಅರ್ಥ ಶಾಸ್ತ್ರದಲ್ಲಿ ಮಾತ್ರ 49 ಅಂಕ ಬಂದಿತ್ತು. ಉತ್ತಮ ಅಂಕ ಗಳಿಸುವ ವಿಶ್ವಾಸ ಹೊಂದಿದ್ದ ಝುಹಾ ಇದರಿಂದ ಆಘಾತ ಗೊಂಡಿದ್ದರು. ಉತ್ತರ ಪತ್ರಿಕೆ ಪ್ರತಿಯನ್ನು ತರಿಸಿ ದಾಗ ಮಂಡಳಿಯ ಎಡವಟ್ಟು ಅರಿವಿಗೆ ಬಂತು. ನಿಜಕ್ಕೂ ಆಕೆಗೆ ಅರ್ಥಶಾಸ್ತ್ರದಲ್ಲಿ 82 ಅಂಕ ದೊರಕಿದ್ದು, ಅಂಕಪಟ್ಟಿ ಯಲ್ಲಿ 49 ಎಂದು ತಪ್ಪಾಗಿ ಮುದ್ರಣವಾಗಿದೆ. ಇದರಿಂದಾಗಿ ಪ್ರತಿಭಾನ್ವಿತ ವಿದ್ಯಾರ್ಥಿನಿಯೊಬ್ಬಳು ಮಾನಸಿಕವಾಗಿ ಕುಗ್ಗಿದ್ದಾಳೆ.
82ಕ್ಕೂ ಅಧಿಕ ಅಂಕದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿನಿ ಉತ್ತರ ಪತ್ರಿಕೆಯನ್ನು ಹಿರಿಯ ಉಪ ನ್ಯಾಸಕರೊಬ್ಬರಲ್ಲಿ ಪರಿಶೀಲನೆಗೆ ನೀಡಿದ್ದು, ಅವರ ಪ್ರಕಾರ ಆಕೆಗೆ ಇನ್ನೂ 8 ಅಂಕಗಳು ಸಿಗಬೇಕು. ಆಕೆಯ ಅಂಕಪಟ್ಟಿಯಲ್ಲಿ ವ್ಯತ್ಯಾಸವಾಗದೆ ಇರುತ್ತಿದ್ದರೆ ಕಾಲೇಜಿನ ಫಲಿತಾಂಶ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲೂ ರ್‍ಯಾಂಕ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲೂ ಗುರು ತಿಸಿಕೊಳ್ಳುತ್ತಿದ್ದರು ಎಂದು ಸಂಸ್ಥೆಯ ಉಪನ್ಯಾಸಕರು ಹೇಳಿದ್ದಾರೆ.
ಆಕೆಯ ತಂದೆ ಶಬೀರ್ ಪುತ್ರಿ ಕಲಿಯುತ್ತಿರುವ ಕಾಲೇಜಿನ ಬಸ್ ಚಾಲಕರಾಗಿದ್ದಾರೆ. ತಾಯಿ ಸೈತುನ್ ನಿಶಾ ಗೃಹಿಣಿ. ಪ.ಪೂ. ಮಂಡಳಿಯ ಬೇಜವಾಬ್ದಾರಿತನಕ್ಕೆ ಅವರು ದಂಡ ತೆರುವಂತಾಗಿದೆ. ಈ ಹಿಂದೆ ಎಸೆಸೆಲ್ಸಿ ಪರೀಕ್ಷೆಯಲ್ಲೂ ಶೇ.94 ಅಂಕಗಳನ್ನು ಗಳಿಸಿದ್ದ ಝುಹಾ ತನಗೆ ಅನ್ಯಾಯವಾಗಿದ್ದು, ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ಝುಹಾ ಅರ್ಥಶಾಸ್ತ್ರದಲ್ಲಿ 82 ಅಂಕ ಗಳಿಸಿದ್ದರೂ 49 ಎಂದು ಪ್ರಕಟವಾಗಿದೆ. ಮರುಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಲು ಸೂಚಿಸಿದ್ದು ಆಕೆ ಅರ್ಜಿ ಸಲ್ಲಿಸಿದ್ದಾರೆ.
– ರಾಮಚಂದ್ರ ನೆಲ್ಲಿಕಾರು, ಪ್ರಾಂಶುಪಾಲ, ಕೆಎಂಇಎಸ್ ಕಾಲೇಜು