Advertisement

ಈ ಬಾರಿ ಎಸ್ಸೆಸ್ಸೆಲ್ಸಿ ಪಠ್ಯ, ಕಠಿಣ ಪ್ರಶ್ನೆ ಕಡಿತವಿಲ್ಲ

02:49 PM Jul 24, 2022 | Team Udayavani |

ದಾವಣಗೆರೆ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೇ, ಈ ಬಾರಿ ಚೆನ್ನಾಗಿ ಅಭ್ಯಾಸ ಮಾಡಿ. ಈ ವರ್ಷ ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ಕಾರಣಕ್ಕೂ ಕಠಿಣ ಪ್ರಶ್ನೆಗಳನ್ನು ಕಡಿತ ಮಾಡುವುದಿಲ್ಲ. ಪಠ್ಯಪುಸ್ತಕ ಕಡಿತಗೊಳಿಸುವುದೂ ಇಲ್ಲ. ನಿಗದಿತ ಹಾಜರಾತಿ ಕಡ್ಡಾಯವಾಗಿದ್ದು, ಕೃಪಾಂಕವಂತೂ ಇಲ್ಲವೇ ಇಲ್ಲ!

Advertisement

ಹೌದು, ಪ್ರಸಕ್ತ (2022-23) ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸ್ವರೂಪ ಹಾಗೂ ಕಠಿಣತೆಯ ಮಟ್ಟವನ್ನು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಈಗಾಗಲೇ ನಿರ್ಧರಿಸಿದೆ. ಇದರನ್ವಯ ಯಾವುದೇ ಬದಲಾವಣೆ ಇಲ್ಲದೇ 2019-20ನೇ ಸಾಲಿನ ಪ್ರಶ್ನೆಪತ್ರಿಕೆ ಸ್ವರೂಪ ಹಾಗೂ ಕಠಿಣತೆ ಮಟ್ಟ ಯಥಾಸ್ಥಿತಿ ಮುಂದುವರಿಯಲಿದೆ.

2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕೋವಿಡ್‌-19 ಕಾರಣದಿಂದಾಗಿ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಶೈಕ್ಷಣಿಕ ಹಿತದೃಷ್ಟಿಯಿಂದ ಪರೀಕ್ಷೆಯನ್ನೇ ಸರಳೀಕರಿಸಿ ಎರಡು ದಿನಗಳಲ್ಲಿ (ಒಂದು ದಿನ ಕೋರ್‌ ವಿಷಯಗಳು ಮತ್ತು ಇನ್ನೊಂದು ದಿನ ಭಾಷಾ ವಿಷಯಗಳು) ಬಹು ಆಯ್ಕೆಯ ಪ್ರಶ್ನೆ ಆಧಾರಿತ ಪ್ರಶ್ನೆಗಳನ್ನು ನೀಡಲಾಗಿತ್ತು. ಉತ್ತರಿಸಲು ಉತ್ತರ ಪತ್ರಿಕೆಯನ್ನು ಒಎಂಆರ್‌ ಶೀಟ್‌ಗೆ ಪೂರಕವಾದ ವಿನ್ಯಾಸದಲ್ಲಿ ನೀಡಲಾಗಿತ್ತು. ಇಷ್ಟೆಲ್ಲ ಪರೀಕ್ಷೆ ಸರಳೀಕರಿಸಿದ ಮೇಲೆಯೂ ಎಲ್ಲರನ್ನೂ ಉತ್ತೀರ್ಣ ಮಾಡಲಾಗಿತ್ತು.

2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕೋವಿಡ್‌ ಕಾರಣದಿಂದಾಗಿಯೇ ಶಾಲೆಗಳು ಭೌತಿಕವಾಗಿ ಎರಡರಿಂದ ಮೂರು ತಿಂಗಳು ವಿಳಂಬವಾಗಿ ಪ್ರಾರಂಭವಾಗಿದ್ದವು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೇ.20ರಷ್ಟು ಪಠ್ಯಪುಸ್ತಕ ಕಡಿತಗೊಳಿಸಲಾಗಿತ್ತು.

ಆಗ 2019-20ನೇ ಸಾಲಿನ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಬದಲಾವಣೆ ಮಾಡದೆ, ಪ್ರಶ್ನೆಪತ್ರಿಕೆಯಲ್ಲಿನ ಕಠಿಣತೆಯ ಮಟ್ಟವನ್ನು ಕಡಿಮೆಗೊಳಿಸಲಾಗಿತ್ತು. ಅಂದರೆ ಶೇ.20ರಷ್ಟಿದ್ದ ಕಠಿಣ ಪ್ರಶ್ನೆಗಳನ್ನು ಶೇ.10ಕ್ಕೆ ಇಳಿಸಲಾಗಿತ್ತು. ಸುಲಭ ಪ್ರಶ್ನೆಗಳನ್ನು ಶೇ.10ರಷ್ಟು ಹೆಚ್ಚಿಸಲಾಗಿತ್ತು. ಭೌತಿಕ ತರಗತಿಗಳು ಸರಿಯಾಗಿ ನಡೆಯದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಶೇ.10ರಷ್ಟು ಕೃಪಾಂಕವನ್ನೂ ನೀಡಲಾಗಿತ್ತು.

Advertisement

ಈ ಕೃಪಾಂಕ ಪಡೆದು ರಾಜ್ಯದಲ್ಲಿ ಸರಾಸರಿ 45,000 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಉತೀ¤ರ್ಣರಾಗಿದ್ದರು ಎಂಬುದು ಗಮನಾರ್ಹ. ಶೇ.20ರಷ್ಟು ಕಠಿಣ ಪ್ರಶ್ನೆ: ಪ್ರಸಕ್ತ ವರ್ಷ ಮೇ 16ರಿಂದಲೇ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಭೌತಿಕವಾಗಿ ಪ್ರಾರಂಭವಾಗಿರುವುದರಿಂದ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಕೊರೊನಾ ಪೂರ್ವದ ವರ್ಷಗಳಂತೆ ಪರೀಕ್ಷೆಯಲ್ಲಿ ಯಾವುದೇ ವಿನಾಯಿತಿ ನೀಡದೆ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.

ಈ ತೀರ್ಮಾನದಿಂದಾಗಿ ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.30ರಷ್ಟು ಸುಲಭದ ಪ್ರಶ್ನೆಗಳು, ಶೇ.50ರಷ್ಟು ಸಾಧಾರಣ ಪ್ರಶ್ನೆಗಳು ಹಾಗೂ ಶೇ.20ರಷ್ಟು ಕಠಿಣ ಪ್ರಶ್ನೆಗಳು ಇರಲಿವೆ. ಹೀಗಾಗಿ ವಿದ್ಯಾರ್ಥಿಗಳು ಪ್ರಸಕ್ತ ವರ್ಷ ಪೂರ್ಣ ಪ್ರಮಾಣದ ಪಠ್ಯಪುಸ್ತಕ ಅಧ್ಯಯನ ಮಾಡಲೇಬೇಕಾಗಿದೆ. ಒಟ್ಟಾರೆ ಕೊರೊನಾ ಸಾಂಕ್ರಾಮಿಕದಿಂದ ಕಳೆದ ಎರಡು ವರ್ಷ ಶೈಕ್ಷಣಿಕ ವ್ಯವಸ್ಥೆಯಲ್ಲಾದ ಎಲ್ಲ ವ್ಯತ್ಯಾಸಗಳನ್ನು ಬದಿಗೊತ್ತಿ ಈ ಹಿಂದಿನಂತೆಯೇ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ.

ಶೇ.75 ಹಾಜರಾತಿ ಕಡ್ಡಾಯ

ಕೊರೊನಾ ಸಾಂಕ್ರಾಮಿಕ ಕಾರಣದಿಂದ ಭೌತಿಕ ತರಗತಿಗಳು ಸರಿಯಾಗಿ ನಡೆಯದೇ ಇರುವುದರಿಂದ ಕಳೆದೆರಡು ಶೈಕ್ಷಣಿಕ ಸಾಲಿನಲ್ಲಿ (2020-21 ಹಾಗೂ 2021-22) ಎಸ್ಸೆಎಸ್ಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯಕ್ಕೆ ವಿನಾಯಿತಿ ನೀಡಲಾಗಿತ್ತು. ಆದರೆ, ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಶೇ.75ರಷ್ಟು ಹಾಜರಾತಿಯನ್ನು ಪ್ರೌಢಶಿಕ್ಷಣ ಮಂಡಳಿ ಕಡ್ಡಾಯಗೊಳಿಸಿದೆ.

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ಣ ಪ್ರಮಾಣದ ಪಠ್ಯ ಆಧರಿಸಿ ನಡೆಯಲಿದೆ. ಪ್ರಶ್ನೆ ಪತ್ರಿಕೆಯ ಸ್ವರೂಪ, ಕಠಿಣತೆಯ ಮಟ್ಟದಲ್ಲಿ ಯಾವುದೇ ಕಡಿತವಿಲ್ಲದೇ 2019-20ನೇ ಸಾಲಿನಂತೆ ನಡೆಸಲು ಪ್ರೌಢ ಶಿಕ್ಷಣ ಮಂಡಳಿ ನಿರ್ಧರಿಸಿದ್ದು, ಈ ಕುರಿತು ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. -ಜಿ.ಆರ್‌. ತಿಪ್ಪೇಶ್‌, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ದಾವಣಗೆರೆ

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next