ರಾಯಚೂರು: ಜಿಲ್ಲೆಯಲ್ಲಿ ಮಾ. 28ರಿಂದ ಏ.11ರವರೆಗೆ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾರದರ್ಶಕ, ನಕಲು ಮುಕ್ತವಾಗಿ ನಡೆಯುವಂತೆ ನೋಡಿ ಕೊಳ್ಳಬೇಕು ಎಂದು ಜಿಪಂ ಸಿಇಒ ನೂರ ಜಹಾನ್ ಖಾನಂ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಭಾವಿ ಸಿದ್ಧತೆ ಕುರಿತು ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲ ಪರೀಕ್ಷಾ ಕೇಂದ್ರಗಳ ಮೇಲೆ ತೀವ್ರ ನಿಗಾ ವಹಿಸಬೇಕು. ಯಾವುದೇ ರೀತಿಯಿಂದ ಲೋಪದೋಷ ಆಗದಂತೆ ಕಾರ್ಯ ನಿರ್ವಹಿಸಬೇಕು. ಜಿಲ್ಲೆಯ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದರು.
ಪರೀಕ್ಷಾ ಕೇಂದ್ರದ 200 ಮೀ. ಸುತ್ತ ಸಾರ್ವಜನಿಕರು ಮತ್ತು ಪಾಲಕರ ಪ್ರವೇಶ ನಿಷೇಧಿಸಲಾಗಿದೆ. ಪರೀಕ್ಷೆ ಆರಂಭಕ್ಕೂ ಒಂದು ಗಂಟೆ ಮುಂಚೆ ಪಾಲಕರು ಪರೀûಾ ಕೇಂದ್ರದ ನಿರ್ಬಂಧಿತ ಪ್ರದೇಶದಲ್ಲಿ ಇರುವಂತಿಲ್ಲ. ವಾಹನ ಸಹ ನಿರ್ಬಂಧಿ ಸಲಾಗಿದೆ. ಯಾವುದೇ ಝರಾಕ್ಸ್ ಅಂಗಡಿ ಕೂಡ ತೆರೆಯುವಂತಿಲ್ಲ. ಪರೀಕ್ಷಾ ಕೇಂದ್ರಕ್ಕೆ ನಿಯೋಜಿತ ಅಧಿಕಾರಿಗಳು, ಸಿಬ್ಬಂದಿ ಮತ್ತು ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಇತರ ಯಾರೂ ಪ್ರವೇಶ ಮಾಡಕೂಡದು. ನಕಲು, ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ ಟಿವಿ ಅಳವಡಿಸಲಾಗುವುದು. ಅಲ್ಲದೇ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದ ಬಿಇಒಗಳು ತೆರಳಿ ಪರೀಕ್ಷೆ ನಡೆಸಲು ಅಗತ್ಯ ಸೌಕರ್ಯಗಳ ಬಗ್ಗೆ ಪರಿಶೀಲಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವೃಷಭೇಂದ್ರಯ್ಯ ಮಾತನಾಡಿ, ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ದೇವದುರ್ಗ-16, ಲಿಂಗಸುಗೂರು-27, ಮಾನವಿ-18 ಹಾಗೂ ಸಿಂಧನೂರು-19 ಸೇರಿದಂತೆ ಒಟ್ಟು 114 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 16,725 ಬಾಲಕರು, 15,171 ಬಾಲಕಿಯರು ಸೇರಿದಂತೆ 31,896 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ್, ಸಿಪಿಐ ಫಸಿಯುದ್ದೀನ್, ಯರಮರಸ್ ಡಯಟ್ ಕಾಲೇಜು ಪ್ರಾಚಾರ್ಯ ಮುತ್ತಪ್ಪ ರೆಡ್ಡಿ ಸೇರಿದಂತೆ ಜಿಲ್ಲಾ ತಾಲೂಕಿನ ಬಿಇಒಗಳು ಹಾಗೂ ಪರೀಕ್ಷೆಗೆ ನಿಯೋಜನೆಗೊಂಡ ಅಧಿಕಾರಿಗಳು ಇದ್ದರು.