Advertisement
ಅಷ್ಟೇ ಅಲ್ಲ ಪರೀಕ್ಷೆ ರದ್ದು ಮಾಡಬೇಕು ಎಂದು ಕೋರಿ ಬೆಳಗಾವಿ ನಿವಾಸಿಯೊಬ್ಬರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.
ತೆಲಂಗಾಣ ಸರಕಾರವು 10ನೇ ತರಗತಿ ಪರೀಕ್ಷೆ ರದ್ದು ಮಾಡಿದ ಬೆನ್ನಲ್ಲೇ ತಮಿಳುನಾಡು ಮತ್ತು ಪುದುಚೇರಿ ಸರಕಾರಗಳೂ ಇದೇ ಕ್ರಮ ಕೈಗೊಂಡಿವೆ. ಪ್ರಸಕ್ತ ವರ್ಷದ ಎಸೆಸೆಲ್ಸಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದ್ದು, ವಿದ್ಯಾರ್ಥಿಗಳನ್ನು ಆಂತರಿಕ ಮೌಲ್ಯಮಾಪನದ ಅಂಕಗಳು ಮತ್ತು ಸೆಮಿಸ್ಟರ್ ಪರೀಕ್ಷೆಯ ಅಂಕಗಳ ಆಧಾರದಲ್ಲಿ ಮುಂದಿನ ಹಂತಕ್ಕೆ ತೇರ್ಗಡೆ ಮಾಡಲಾಗುವುದು ಎಂದು ಮಂಗಳವಾರ ಘೋಷಿಸಲಾಗಿದೆ.
Related Articles
ರಾಜ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆ ವಿಚಾರ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸದಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
Advertisement
ಬೆಳಗಾವಿ ನಿವಾಸಿ ರಾಜಶ್ರೀ ನಾಗರಾಜ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ಸರಕಾರ ಮತ್ತು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ಪ್ರತಿವಾದಿ ಮಾಡಲಾಗಿದೆ. ಮೇ 27ರ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಬೇಕು, ಪರೀಕ್ಷೆಗಳನ್ನು ನಡೆಸದಂತೆ ಸೂಚನೆ ನೀಡಬೇಕು. ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಮತ್ತು ಪೂರ್ವಭಾವಿ ಪರೀಕ್ಷೆಯ ಫಲಿತಾಂಶಗಳನ್ನೇ ಪರಿಗಣಿಸಿ ಅಂತಿಮ ಫಲಿತಾಂಶ ಪ್ರಕಟಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಪರೀಕ್ಷೆ ದಿನ ಬದಲಿಲ್ಲಈ ಹಿಂದೆ ನಿಗದಿಪಡಿಸಿದಂತೆಯೇ ಎಸೆಸೆಲ್ಸಿ ಪರೀಕ್ಷೆ ಜೂ. 25ರಿಂದ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಮೂರು ದಿನಗಳ ಮುನ್ನ ಪರೀಕ್ಷಾ ಕೇಂದ್ರವಿರುವ ಪರಿಸರ ಕಂಟೈನ್ಮೆಂಟ್ ವಲಯವಾಗಿ ಘೋಷಣೆಯಾದರೆ ಪರೀಕ್ಷಾ ಕೇಂದ್ರವನ್ನು ಪರ್ಯಾಯ ಜಾಗಕ್ಕೆ ಸ್ಥಳಾಂತರಿಸಲಾಗುವುದು. ಪರೀಕ್ಷೆ ಆರಂಭವಾದ ಬಳಿಕ ಕಂಟೈನ್ಮೆಂಟ್ ವಲಯವಾದಲ್ಲಿ ಆ ಕೇಂದ್ರದ ಮಕ್ಕಳಿಗೆ ಜುಲೈಯಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಹೊಸ ಅಭ್ಯರ್ಥಿ ಎಂದು ಪರಿಗಣಿಸಿ ಪರೀಕ್ಷೆ ನಡೆಸಲಾಗುವುದು ಎಂದಿದ್ದಾರೆ. ಪರಿಣತರ ಜತೆ ಚರ್ಚಿಸಿಯೇ ಪರೀಕ್ಷೆಯ ನಿರ್ಧಾರ ತಳೆಯಲಾಗಿದೆ. ವಿದ್ಯಾರ್ಥಿಗಳ ಸುರಕ್ಷೆ ಮತ್ತು ಆತ್ಮವಿಶ್ವಾಸಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದವರು ಹೇಳಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಶಾಲಾರಂಭಕ್ಕೆ ಮಾರ್ಗಸೂಚಿಗಳನ್ನು ನೀಡಿದೆ. ಆಗಸ್ಟ್ ನಲ್ಲಿ ಶಾಲೆಗಳನ್ನು ಹಂತ ಹಂತವಾಗಿ ತೆರೆಯುವ ಚಿಂತನೆ ಇದೆ. ಪೋಷಕರ ಜತೆ ಚರ್ಚಿಸಿ ಅಂತಿಮ ನಿರ್ಧಾರ ತಳೆಯುತ್ತೇವೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. ಎಸೆಸೆಲ್ಸಿ: ಎಲ್ಲೆಲ್ಲಿ ಏನು ಪರಿಸ್ಥಿತಿ? – ತಮಿಳುನಾಡು, ಪುದುಚೇರಿ, ತೆಲಂಗಾಣ: ಪರೀಕ್ಷೆ ರದ್ದು – ಆಂಧ್ರಪ್ರದೇಶ: ಜು.10ರಿಂದ ಪರೀಕ್ಷೆ – ಬಿಹಾರ, ಗುಜರಾತ್, ಉತ್ತರಪ್ರದೇಶ, ಗೋವಾ: ಪರೀಕ್ಷೆಗಳು ಪೂರ್ಣ – ಹರಿಯಾಣ: ವಿಜ್ಞಾನ ಪರೀಕ್ಷೆ ಮಾತ್ರ ಬಾಕಿ. ಜುಲೈಯಲ್ಲಿ ಪರೀಕ್ಷೆ – ರಾಜಸ್ಥಾನ: ಪರೀಕ್ಷಾ ದಿನಾಂಕ ಪ್ರಕಟವಾಗಿಲ್ಲ ಪಠ್ಯಕ್ರಮ, ಕಲಿಕಾ ಸಮಯ ಕಡಿತ?
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಠ್ಯಕ್ರಮ ಮತ್ತು ಕಲಿಕಾ ಸಮಯವನ್ನು ಕಡಿತಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದ್ದಾರೆ. ಈ ಕುರಿತು ಮಂಗಳವಾರ ಟ್ವೀಟ್ ಮಾಡಿರುವ ಅವರು, ಶಿಕ್ಷಕರು, ಪೋಷಕರಿಂದ ಸಾಕಷ್ಟು ಮನವಿಗಳು ಬಂದಿರುವುದರಿಂದ ಪಠ್ಯಕ್ರಮ ಮತ್ತು ಕಲಿಕಾ ಸಮಯವನ್ನು ಕಡಿತ ಮಾಡಲು ಆಲೋಚಿಸಲಾಗುತ್ತಿದೆ. ಈ ಕುರಿತು ಶಿಕ್ಷಕರು ಮತ್ತು ತಜ್ಞರು ಸಲಹೆ ನೀಡಬೇಕು. ನಿಮ್ಮ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ #syllabusforstudents2020 ಮೂಲಕ ಟ್ಯಾಗ್ ಮಾಡಬಹುದು. ಇವುಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ. ವದಂತಿ ಹರಡುವವರಿಗೆ ‘ಕ್ರಿಮಿನಲ್’ ಏಟು
ಎಸೆಸೆಲ್ಸಿ ಪರೀಕ್ಷೆ ರದ್ದಾಗಿದೆ ಎಂದು ವದಂತಿ ಹಬ್ಬಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. ನಿಗದಿತ ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆಯಲಿದೆ. ಆದರೂ ಕೆಲವು ಕಿಡಿಗೇಡಿಗಳು ಪರೀಕ್ಷೆ ಕುರಿತು ಸುಳ್ಳು ವದಂತಿಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಈ ಸಂಬಂಧ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ವದಂತಿ ಹಬ್ಬಿಸುವವರು ಕಂಡುಬಂದಲ್ಲಿ ತತ್‌ಕ್ಷಣವೇ ಹತ್ತಿರದ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಇಲಾಖೆಗೆ ವರದಿ ನೀಡುವಂತೆ ಶಿಕ್ಷಣ ಇಲಾಖೆ ಆಯುಕ್ತ ಡಾ| ಕೆ.ಜಿ. ಜಗದೀಶ್ ಸೂಚಿಸಿದ್ದಾರೆ. ಪಾಲಕರ ಸಭೆ
ಶಾಲಾರಂಭದ ಕುರಿತು ಜೂನ್ 20ರ ವರೆಗೂ ಸಭೆ ನಡೆಸಲು ಇಲಾಖೆ ಸೂಚಿಸಿದೆ. ಸಾಮಾಜಿಕ ಅಂತರಕ್ಕಾಗಿ ಪ್ರತ್ಯೇಕ ತಂಡ ರಚಿಸಿ, ಸಭೆ ನಡೆಸಬೇಕು. ಪಾಲಕರ ಹೇಳಿಕೆ ದಾಖಲಿಸಬೇಕು ಮತ್ತು ಅದನ್ನು ಮೇಲುಸ್ತು ವಾರಿ ವಹಿಸಲು ಅಧಿಕಾರಿಯೊಬ್ಬರು ಹಾಜರಿರಬೇಕು ಎಂದು ಇಲಾಖೆ ಸೂಚಿಸಿದೆ. ಶೇ. 50 ಶುಲ್ಕ ಪಡೆಯಲಿ
ಶಾಲೆಗಳ ಆರಂಭ ವಿಳಂಬವಾಗುತ್ತಿರುವುದರಿಂದ ಮುಂದಿನ ಶೈಕ್ಷಣಿಕ ವರ್ಷಕ್ಕೆ ಶೇ.50 ಶುಲ್ಕ ವಿನಾಯಿತಿ ನೀಡಲು ಖಾಸಗಿ, ಅನುದಾನಿತ ಶಾಲಾಡಳಿತ ಮಂಡಳಿಗಳಿಗೆ ಸರಕಾರ ಮತ್ತು ಶಿಕ್ಷಣ ಇಲಾಖೆ ನಿರ್ದೇಶನ ನೀಡಬೇಕು ಎಂಬ ಆಗ್ರಹ ರಾಜ್ಯಾದ್ಯಂತ ಕೇಳಿಬರುತ್ತಿದೆ. ಶೈಕ್ಷಣಿಕ ವರ್ಷ ಆರಂಭ ಯಾವಾಗ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಕೇಂದ್ರ ಮಾನವ ಸಂಪನ್ಮೂಲ ಸಚಿವರೇ ಆ.15ರ ಬಳಿಕ ಶಾಲಾರಂಭದ ಬಗ್ಗೆ ಪ್ರಸ್ತಾವಿಸಿದ್ದಾರೆ. ಹೀಗಾಗಿ ಶಾಲಾರಂಭ ಇನ್ನೂ ಎರಡು ಮೂರು ತಿಂಗಳು ವಿಳಂಬವಾಗಬಹುದು ಎಂದು ಶೈಕ್ಷಣಿಕ ವಲಯದಲ್ಲಿ ಅಂದಾಜಿಸಲಾಗುತ್ತಿದೆ. ಈ ಮಧ್ಯೆ ಶಿಕ್ಷಣ ಇಲಾಖೆ ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಗೆ ಅನುಮತಿ ನೀಡಿದೆ. ಶಾಲಾಡಳಿತ ಮಂಡಳಿಗಳು ಶುಲ್ಕ ಪಾವತಿಸಲು ಹೆತ್ತವರ ಮೇಲೆ ಒತ್ತಡ ಹೇರುತ್ತಿವೆ. ಇದನ್ನು ನಿಯಂತ್ರಿಸಲು ಶಿಕ್ಷಣ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಶೈಕ್ಷಣಿಕ ವರ್ಷ ವಿಳಂಬವಾಗಿ ಶುರುವಾಗಲಿದ್ದರೂ ಶುಲ್ಕ ಕಡಿಮೆ ಮಾಡುತ್ತಿಲ್ಲ ಏಕೆ? ಖಾಸಗಿ, ಅನುದಾನಿತ ಶಾಲೆಗಳು ಶೇ.50ರಷ್ಟು ಶುಲ್ಕ ಕಡಿಮೆ ಮಾಡಬೇಕು ಎಂದು ಪಾಲಕ, ಪೋಷಕರು ರಾಜ್ಯ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. ಸರಕಾರ ಅಗತ್ಯ ಸೂಚನೆಯನ್ನು ನೀಡಬೇಕು ಮತ್ತು ತತ್‌ಕ್ಷಣದಿಂದಲೇ ಅನುಷ್ಠಾನಕ್ಕೆ ಬರುವಂತೆ ಮಾಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.