Advertisement

ಸೋಮವಾರದಿಂದ ಎಸೆಸೆಲ್ಸಿ ಪರೀಕ್ಷೆ : ಜಿಲ್ಲೆಯಲ್ಲಿ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳು ಸಜ್ಜು

07:01 PM Jul 17, 2021 | Team Udayavani |

ಉಡುಪಿ: ಕೊರೊನಾ ಆತಂಕ ನಡು ವೆ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ಜು. 19 ಹಾಗೂ ಜು.22ರಂದು ನಡೆಯುವ ಪರೀಕ್ಷೆಗೆ ಈಗಾಗಲೇ ಪೂರ್ವ ತಯಾರಿ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಹಲವು ರೀತಿಯ ಉಪಕ್ರಮ ತೆಗೆದುಕೊಂಡಿದೆ.ಜಿಲ್ಲೆಯಲ್ಲಿ 77 ಪರೀಕ್ಷಾ ಕೇಂದ್ರ ಗಳಿದ್ದು, 12,881 ಮಂದಿ ವಿದ್ಯಾರ್ಥಿ ಗಳಿದ್ದಾರೆ.

Advertisement

ಸಿಸಿ ಕೆಮರಾ ಅಳವಡಿಕೆ
ಹಳೆಯ 51 ಕೇಂದ್ರಗಳಲ್ಲಿ ಸಿಸಿಟಿವಿ ಕೆಮರಾಗಳು ಈಗಾಗಲೇ ಇವೆ. ಉಳಿದ 26 ಕೇಂದ್ರಗಳಲ್ಲಿಯೂ ಅಳವಡಿಕೆ ಮಾಡಲಾಗಿದೆ. ಪ್ರತೀ ಕೇಂದ್ರದಲ್ಲಿ ಆರೋಗ್ಯ ಇಲಾಖೆಯಿಂದ ಕ್ಯಾಂಪ್‌ ತಂಡವನ್ನು ನೇಮಿಸಲಾಗಿದೆ. ಪ್ರತೀ ಕೇಂದ್ರವನ್ನು ಪಂಚಾಯತ್‌ ಗ್ರಾಮೀಣ್‌ ಇಲಾಖೆಯ ವತಿಯಿಂದ ಮತ್ತು ನಗರ ಪೌರಾಡಳಿತದ ವತಿಯಿಂದ ಸ್ಯಾನಿಟೈಸ್‌ ಮಾಡಿಸಲಾಗಿದೆ.

ಹೆಚ್ಚುವರಿ ವಾಹನ
ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆಯನ್ನು ತಾಲೂಕು ಹಂತದಲ್ಲಿ ಮಾಡಿಕೊಡಲಾಗಿದೆ. ಸಾರಿಗೆ ವ್ಯವಸ್ಥೆ ಇಲ್ಲದಿದ್ದರೆ ಶಿಕ್ಷಕರು ತಮ್ಮ ಸ್ವಂತ ವಾಹನದಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಿಡುವ ಹಾಗೂ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಿದ್ದಾರೆ. ಅಲ್ಲದೆ ಎಲ್ಲ ಪರೀಕ್ಷಾ ಕೇಂದ್ರದಲ್ಲಿ ಯೂ ಹೆಚ್ಚುವರಿಯಾಗಿ ಎರಡು ವಾಹನಗಳನ್ನು ತಯಾರಾಗಿರಿಸಿಕೊಳ್ಳಲಾಗಿದೆ. ಪರೀಕ್ಷೆ ಹಾಜರಾಗುವ ವಿದ್ಯಾಥಿಗಳಿಗೆ ಉಚಿತ ಸಾರಿಗೆಯನ್ನು ವ್ಯವಸ್ಥೆಯನ್ನು ಸಾರಿಗೆ ಇಲಾಖೆ ಅನುಮತಿ ನೀಡಿದೆ. ಹಾಲ್‌ ಟಿಕೇಟ್‌ ತೋರಿಸಿ ಉಚಿತ ಪ್ರಯಾಣ ಮಾಡಬಹುದಾಗಿದೆ. ಪೊಲೀಸ್‌ ಬಂದೋಬಸ್ತ್, ಥರ್ಮಲ್‌ ಯಂತ್ರವನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ. ಸ್ಯಾನಿಟೈಸ್‌ ಲಿಕ್ವಿಡ್‌ಗಳನ್ನೂ ಎಲ್ಲ ಕೇಂದ್ರಗಳಿಗೂ ಪೂರೈಸಲಾಗಿದೆ. ಪ್ರತಿ ಕೇಂದ್ರಕ್ಕೆ ಹಾಜರಾಗುವ ಮತ್ತು ಅಲ್ಲಿ ಕೆಲಸ ಮಾಡುವ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಸಿಬಂದಿಗೆ ಎನ್‌-95 ಮಾಸ್ಕ್
ಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತದೆ.

ವಿಶೇಷ ಕೊಠಡಿ
ಕೊರೊನಾ ಲಕ್ಷಣಗಳಿರುವ ಮಕ್ಕಳಿಗೆ ಪ್ರತೀ ಕೇಂದ್ರದಲ್ಲಿ ಮೀಸಲಿರಿಸಿರುವ ವಿಶೇಷ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆಯನ್ನು ಬರೆಸಲಾಗುತ್ತದೆ. ಕೋವಿಡ್‌ ಸೋಂಕು ದೃಢಪಟ್ಟಿರುವ ಮಕ್ಕಳಿಗೆ ತಾ| ಮಟ್ಟದ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಈ ಮಕ್ಕಳಿಗೆ ಆರೋಗ್ಯ ಸಿಬಂದಿಯ ನೆರವಿನೊಂದಿಗೆ ಪರೀಕ್ಷೆಯನ್ನು ಬರೆಸಲಾ ಗುತ್ತದೆ. ಜಿಲ್ಲೆಯಲ್ಲಿ ಒಟ್ಟು 2,266 ವ್ಯಕ್ತಿಗಳು ಪರೀಕ್ಷಾ ಕಾರ್ಯದಲ್ಲಿ ತೊಡಗಿದ್ದಾರೆ. ಅವರೆಲ್ಲರಿಗೂ ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳಲಾಗಿದೆ.

ಇದನ್ನೂ ಓದಿ ;ನಿಮ್ಮ ತಂದೆಗೆ ಹುಟ್ಟಿದ್ದರೆ ಧರ್ಮಸ್ಥಳಕ್ಕೆಹೋಗಿ ಆಣೆ ಮಾಡಿ:ದರ್ಶನ್ಗೆ ಇಂದ್ರಜಿತ್ ಮರು ಸವಾಲು

Advertisement

144 ಸೆಕ್ಷನ್‌
ಪರೀಕ್ಷಾ ದಿನಗಳಂದು ಪ್ರತೀ ಕೇಂದ್ರದ ಸುತ್ತಲೂ 200 ಮೀಟರ್‌ ವ್ಯಾಪ್ತಿಯಲ್ಲಿ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ. 23 ಮಾರ್ಗಗಳ ಮೂಲಕ ಜಿಲ್ಲೆಯ ಎಲ್ಲ 77 ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲಾಗುತ್ತದೆ. ವಾಹನ ಮತ್ತು ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ.

200 ವಿದ್ಯಾರ್ಥಿಗಳಿಗೆ ಒಂದು ಆರೋಗ್ಯ ತಪಾಸಣ ಕೇಂದ್ರವನ್ನು ಪ್ರತೀ ಕೇಂದ್ರಲ್ಲಿ ಸ್ಥಾಪಿಸಲಾಗಿದೆ.
ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆರು ಅಡಿ ಅಂತರದ ಚೌಕ್‌ಗಳನ್ನು ಪ್ರತೀ ಕೇಂದ್ರಲ್ಲಿ ಹಾಕಿ ವಿದ್ಯಾರ್ಥಿಗಳನ್ನು ಕೇಂದ್ರಕ್ಕೆ ಸ್ವಾಗತಿಸಲಾಗುತ್ತದೆ.

ಎಸೆಸೆಲ್ಸಿ ಪರೀಕ್ಷೆ : ಬೈಂದೂರು ವಲಯದಲ್ಲಿ “ಮಾದರಿ’ ಸಿದ್ಧತೆ

ಕುಂದಾಪುರ: ಬೈಂದೂರು ವಲಯ ದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಾಮೀಣ ಭಾಗದಿಂದ 13 ವಿಶೇಷ ಬಸ್‌ ಸಹಿತ ಅನೇಕ ಕ್ರಮ ಕೈಗೊಳ್ಳುವ ಮೂಲಕ ಎಸೆಸೆಲ್ಸಿ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎನ್ನುವ ನೆಲೆಯಲ್ಲಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ ನೇತೃತ್ವದಲ್ಲಿ ಬೈಂದೂರು ವಲಯದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ.

13 ವಿಶೇಷ ಬಸ್‌
ಬೈಂದೂರು ವಲಯದಲ್ಲಿ ದಾನಿಗಳು, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಖಾಸಗಿ ಶಾಲೆಗಳಿಂದ ಉಚಿತವಾಗಿ 13 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಜಡ್ಕಲ್‌, ಮುದೂರು, ಬೀಸಿನಪಾರೆ, ಗೋಳಿಹೊಳೆ, ಯಳಜಿತ್‌ ಕಡೆಯಿಂದ ಬರುವ ವಿದ್ಯಾರ್ಥಿ ಗಳಿಗೆ ತಲಾ 2 ಬಸ್‌, ಕೆರಾಡಿ, ಹೊಸೂರು, ಹಕ್ಲಾಡಿ, ಆಲೂರು, ಶಿರೂರು-ಕರಾವಳಿ, ಕಾಲೊ¤àಡಿನ ಬೋಳಂ ಬಳ್ಳಿ, ನಾವುಂದದ ಬ್ಯಾಟನಿಯಿಂದ ತಲಾ ಒಂದೊಂದು ಬಸ್‌ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದು ಬಸ್‌ ಅನ್ನು ತಾಲೂಕು ಕೇಂದ್ರದಲ್ಲಿ ತುರ್ತು ಅನಿವಾರ್ಯ ಬಂದಲ್ಲಿ, ಸನ್ನದ್ಧವಾಗಿ ಇಡಲಾಗಿದೆ. ಪ್ರತೀ ಬಸ್‌ನಲ್ಲಿಯೂ ಒಬ್ಬರು ಶಿಕ್ಷಕರನ್ನು ನೇಮಕಗೊಳಿಸಲಾಗಿದೆ.

ಇದನ್ನೂ ಓದಿ :ಬೈಕ್-ಲಾರಿ ಮುಖಾಮುಖಿ ಢಿಕ್ಕಿ: ಸ್ಥಳದಲ್ಲಿಯೇ ಶಿಕ್ಷಕರಿಬ್ಬರ ಸಾವು

ಪ್ರತೀ ಕೇಂದ್ರದಲ್ಲೂ ಶಿಕ್ಷಕರ ವಾಹನ
ಬೈಂದೂರು ವಲಯದಲ್ಲಿ ಬೈಂದೂರು ಸರಕಾರಿ ಪ್ರೌಢಶಾಲೆ, ರತ್ತುಬಾಯಿ ಜನತಾ ಪ್ರೌಢಶಾಲೆ, ಉಪ್ಪುಂದ ಜೂ| ಕಾಲೇಜು, ಕಂಬದಕೋಣೆ ಜೂ| ಕಾಲೇಜು, ನಾವುಂದ ಜೂ| ಕಾಲೇಜು, ತಲ್ಲೂರು ಸ. ಪ್ರೌಢಶಾಲೆ, ವಂಡ್ಸೆ ಜೂ| ಕಾಲೇಜು, ಕೊಲ್ಲೂರು ಶ್ರೀ ಮೂಕಾಂಬಿಕಾ ಪ್ರೌಢಶಾಲೆ ಕೊಲ್ಲೂರು, ಮಾವಿನಕಟ್ಟೆ, ತೌಹಿದ್‌ ಪಬ್ಲಿಕ್‌ ಪ್ರೌಢಶಾಲೆ, ಯು.ಬಿ. ಶೆಟ್ಟಿ ಆ.ಮಾ.ಪ್ರೌಢಶಾಲೆ ಬೈಂದೂರು, ಸಂದೀಪನ್‌ ಆ.ಮಾ. ಪ್ರೌಢಶಾಲೆ ಕಿರಿಮಂಜೇಶ್ವರ, ಗ್ರೆಗರಿ ಪ್ರೌಢಶಾಲೆ ನಾಡ ಸೇರಿ 13 ಪರೀಕ್ಷಾ ಕೇಂದ್ರಗಳಿವೆ. ಪ್ರತಿ ಕೇಂದ್ರದಲ್ಲೂ ಶಿಕ್ಷಕರ ಖಾಸಗಿ ವಾಹನಗಳನ್ನು ಸಹ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಯಾರಾದರೂ ವಿದ್ಯಾರ್ಥಿಗಳಿಗೆ ಕೇಂದ್ರಕ್ಕೆ ಬರುವಲ್ಲಿ ತೊಂದರೆಯಾದರೆ ಹೋಗಿ ಕರೆದುಕೊಂಡು ಬರಲು ಈ ವ್ಯವಸ್ಥೆ ಮಾಡಲಾಗಿದೆ.

ಕೆಲವೆಡೆ ಉಪಾಹಾರ
ಬೆಳಗ್ಗೆ ದೂರ-ದೂರದ ಊರುಗಳಿಂದ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿರುವುದರಿಂದ ತೊಂದರೆಯಾಗದಂತೆ ಕೆಲವೆಡೆಗಳಲ್ಲಿ ಉಪಾಹಾರ, ಬಿಸ್ಕಿಟ್‌ ವ್ಯವಸ್ಥೆ, ಸುಮುಖ ಸರ್ಜಿಕಲ್ಸ್‌ ಉಪ್ಪುಂದ ಹಾಗೂ ಕಿಶೋರ್‌ ಕೊಡ್ಗಿ ಅವರು ಎಲ್ಲರಿಗೂ ಮಾಸ್ಕ್ ನೀಡಿದ್ದಾರೆ.

ಕುಂದಾಪುರ ವಲಯದಲ್ಲಿ ಕುಂದಾಪುರದ ಬೋರ್ಡ್‌ ಹೈಸ್ಕೂಲ್‌, ಸೈಂಟ್‌ ಮೇರಿಸ್‌, ಪಬ್ಲಿಕ್‌ ಶಾಲೆ ಕೋಟೇಶ್ವರ, ಬಿದ್ಕಲ್‌ಕಟ್ಟೆ ಪಬ್ಲಿಕ್‌ ಶಾಲೆ, ಶಂಕರನಾರಾಯಣ ಜೂ| ಕಾಲೇಜು, ಮದರ್‌ ತೆರೆಸಾ ಆ.ಮಾ. ಪ್ರೌಢಶಾಲೆ, ಸಿದ್ದಾಪುರದ ಸರಕಾರಿ ಪ್ರೌಢಶಾಲೆ, ಸರಸ್ವತಿ ಆ.ಮಾ. ಪ್ರೌಢಶಾಲೆ, ಬಸ್ರೂರಿನ ಸರಕಾರಿ ಪ್ರೌಢಶಾಲೆ, ಶಾರದ ಪ್ರೌಢಶಾಲೆ, ಗಂಗೊಳಿ ಸರಸ್ವತಿ ವಿದ್ಯಾಲಯ, ವೆಂಕಟರಮಣ ಆ.ಮಾ. ಪ್ರೌಢಶಾಲೆ, ಜೂ| ಕಾಲೇಜು ತೆಕ್ಕಟ್ಟೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಇಲ್ಲಿ ಬಹುತೇಕ ವಿದ್ಯಾರ್ಥಿಗಳಿಗೆ ಅವರ ಮನೆಯವರು, ಸಂಬಂಧಿಕರ ವಾಹನವಿದ್ದು, ಕೆಲವರು ಇಂತಿಷ್ಟು ಮಂದಿ ವಾಹನವನ್ನು ಬಾಡಿಗೆಗೆ ನಿಗದಿ ಮಾಡಿಕೊಂಡಿದ್ದಾರೆ. ಇನ್ನು ಸಮಸ್ಯೆ ಇರುವ ಕಡೆಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ತುರ್ತು ಅನುಕೂಲಕ್ಕಾಗಿ ವಾಹನ ವ್ಯವಸ್ಥೆ ಮಾಡಿದ್ದಾರೆ.

ಕುಂದಾಪುರ -ಬೈಂದೂರು : 4,951 ವಿದ್ಯಾರ್ಥಿಗಳು
ಕುಂದಾಪುರ ವಲಯದಲ್ಲಿ 2,719 ಹೊಸಬರು, 150 ರಿಪಿಟರ್ ಸೇರಿದಂತೆ ಒಟ್ಟು 2,869 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 13 ಕೇಂದ್ರಗಳ 266 ಕೊಠಡಿಯಲ್ಲಿ ಗರಿಷ್ಠ 12 ಮಂದಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. 547 ಮಂದಿ ಶಿಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. ಇವರಿಗೆ ಪೊಲೀಸರು, ಸ್ಕೌಟ್ಸ್‌-ಗೈಡ್ಸ್‌, ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರು ಸಹಕರಿಸಲಿದ್ದಾರೆ. ಬೈಂದೂರು ವಲಯದಲ್ಲಿ 1,989 ಹೊಸಬರು, 93 ರಿಪಿಟರ್ ಸೇರಿ ಒಟ್ಟು 2,082 ಮಂದಿ ಪರೀಕ್ಷೆ ಬರೆಯಲಿದ್ದಾರೆ. 28 ಮಂದಿ ಹೊರ ಜಿಲ್ಲೆ, ತಾ|ನವರಿದ್ದು, ಇಲ್ಲಿನ 77 ಮಂದಿ ಹೊರ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. 13 ಕೇಂದ್ರಗಳ 188 ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. 447 ಮಂದಿ ಶಿಕ್ಷಕರು ಕರ್ತವ್ಯ ನಿರ್ವಹಿಸಲಿದ್ದಾರೆ.

ಸಕಲ ಸಿದ್ಧತೆ
ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರನ್ನು, ಕಸ್ಟೋಡಿಯನ್‌ರನ್ನು, ಮೊಬೈಲ್‌ ಸ್ವಾಧೀನಾಧಿ ಕಾರಿಗಳನ್ನು, ಸ್ಥಳೀಯ ಜಾಗೃತದಳದವರನ್ನು, ಮಾರ್ಗಾಧಿಕಾರಿಗಳನ್ನು, ಶಿಸ್ತುಪಾಲನೆಗಾಗಿ ದೈಹಿಕ ಶಿಕ್ಷಕರನ್ನು, ಸ್ಕೌಟ್ಸ್‌ ಮತ್ತು ಗೈಡ್ಸ್‌ಗಳನ್ನು ನೇಮಿಸಲಾಗಿದೆ. 1780 ಕೊಠಡಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಬಳಸಲಾಗುತ್ತಿದ್ದು, ಕೊಠಡಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಪ್ರತೀ ಕೇಂದ್ರದಲ್ಲಿ 4 ಮಂದಿ ಹೆಚ್ಚುವರಿ ಕೊಠಡಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.

ಸಿದ್ಧತೆ ಸಂಪೂರ್ಣ
ಉಡುಪಿ ಜಿಲ್ಲಾದ್ಯಂತ ಎಸೆಸೆಲ್ಸಿ ಪರೀಕ್ಷೆ ಎದುರಿಸಲು ಎಲ್ಲ ರೀತಿಯ ಸಿದ್ದತೆಗಳನ್ನೂ ಮಾಡಲಾಗಿದೆ. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಪರೀಕ್ಷೆ ನಡೆಸಲಾಗುವುದು.
-ಎನ್‌.ಎಚ್‌.ನಾಗೂರ, ಡಿಡಿಪಿಐ ಉಡುಪಿ

ಮಾಕ್‌ ಡ್ರಿಲ್‌
ಪ್ರತೀ ಕೇಂದ್ರಲ್ಲಿ ಎಲ್ಲ ಸಿಬಂದಿ ಹಾಜರಾಗಿ ಪರೀಕ್ಷೆ ನಡೆಸುವ ಕುರಿತು ಮಾಕ್‌ ಡ್ರಿಲ್‌ ಶನಿವಾರ ಮಾಡಿಸಲಾಯಿತು. ಎಲ್ಲ ಕೊಠಡಿ ಮೇಲ್ವಿಚಾರಕರಿಗೆ ಈಗಾಗಲೇ ತರಬೇತಿಯನ್ನು ಕೇಂದ್ರ ಮತ್ತು ತಾಲೂಕು ಹಂತದಲ್ಲಿ ನೀಡಲಾಗಿದೆ.

ಸಕಲ ಸಿದ್ಧತೆ
ಎಸೆಸೆಲ್ಸಿ ಪರೀಕ್ಷೆಗೆ ವಲಯದ ವ್ಯಾಪ್ತಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪದ್ಮನಾಭ ಎಸ್‌.ಕೆ., ಜಿ.ಎಂ. ಮುಂದಿನಮನಿ ಅವರ ನೇತೃತ್ವದಲ್ಲಿ ಎಲ್ಲ ಸಿದ್ಧತೆ ನಡೆಸಲಾಗಿದೆ. ಪರೀಕ್ಷಾ ಕೇಂದ್ರಗಳನ್ನು ಗ್ರಾ.ಪಂ.ನಿಂದ ಸ್ಯಾನಿಟೈಸ್‌ ಮಾಡಿಸಲಾಗಿದೆ. ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಗೊಂದಲಗಳಿಲ್ಲದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ. -ಸಂತೋಷ್‌ ಪೂಜಾರಿ ಕುಂದಾಪುರ, ಕರುಣಾಕರ ಶೆಟ್ಟಿ ಬೈಂದೂರು, ಎಸೆಸೆಲ್ಸಿ ನೋಡಲ್‌ ಅಧಿಕಾರಿಗಳು

Advertisement

Udayavani is now on Telegram. Click here to join our channel and stay updated with the latest news.

Next