Advertisement
ಗುರುವಾರ ಅನಿರುದ್ಧ ಸರಳತ್ತಾಯರಿಗೆ ಸನ್ಯಾಸಾಶ್ರಮವನ್ನು ನೀಡಿದ್ದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಶುಕ್ರವಾರ ಶ್ರೀವೇದವರ್ಧನತೀರ್ಥರೆಂದು ನಾಮಕರಣ ಮಾಡಿ ಶೀರೂರು ಮಠದ ಉತ್ತರಾಧಿಕಾರಿಗಳಾಗಿ ಪಟ್ಟಾಭಿಷೇಕ ಮಾಡಿದರು. ಪಟ್ಟಾಭಿಷೇಕದ ಅಂಗವಾಗಿ ಶೀರೂರು ಮಠದ ದೇವರನ್ನು ಹರಿವಾಣದಲ್ಲಿಟ್ಟು ಹರಿವಾಣವನ್ನು ಶಿರದ ಮೇಲಿರಿಸಿ ಅಭಿಷೇಕ ಮಾಡಿದರು. ಇದೇ ಸಂದರ್ಭ ಪ್ರವಣ ಮಂತ್ರ ಮತ್ತಿತರ ಮಂತ್ರೋಪದೇಶ ನೀಡಿ ಹರಸಿದರು. ಪಟ್ಟಾಭಿಷೇಕದ ಸ್ಮರಣಾರ್ಥ ಉಭಯ ಶ್ರೀಗಳು ಎರಡು ಅಶ್ವತ್ಥದ ಸಸಿಗಳನ್ನು ನೆಟ್ಟರು.
Related Articles
ಮಧ್ವಾಚಾರ್ಯರು ಜಗತ್ತಿಗೆ ನೀಡಿದ ಸಂದೇಶವೆಂದರೆ ನಮ್ಮ ಪಾಲಿನ ಕರ್ಮವನ್ನು ಮಾಡಬೇಕು, ಅದರಿಂದ ಬಂದ ಫಲವನ್ನು ಅನುಭವಿಸಬೇಕು. ಭಗವಂತ ಶ್ರೀಹರಿ ಗುರುವೂ ಹೌದು, ತಂದೆ ತಾಯಿಗಳ ಸ್ಥಾನದಲ್ಲಿದ್ದು ಜಗತ್ತನ್ನು ಸಂರಕ್ಷಿಸುತ್ತಿದ್ದಾನೆ. ಇಡೀ ವಿಶ್ವಕ್ಕೇ ಶ್ರೀಕೃಷ್ಣಮುಖ್ಯಪ್ರಾಣ ದೇವರು ಅನುಗ್ರಹಿಸಬೇಕು ಎಂದು ಶ್ರೀವೇದವರ್ಧನತೀರ್ಥರು ಪ್ರಾರ್ಥಿಸಿದರು.
Advertisement
ಹೆಸರಿನ ಮರ್ಮಸನಾತನ ಧರ್ಮ, ಶಾಸ್ತ್ರ ಪುರಾಣಗಳಿಗೆ ವೇದಗಳೇ ಆಧಾರ. ನೂತನ ಯತಿಗಳಿಗೆ ಶ್ರೀವೇದವರ್ಧನತೀರ್ಥರೆಂದು ಹೆಸರು ಇರಿಸಿದ್ದೇವೆ. ಅದರಂತೆ ಯತಿಗಳು ಧರ್ಮಸಂರಕ್ಷಣೆಯ ಕೆಲಸವನ್ನು ಸದಾ ಕಾಲ ಮಾಡುವಂತಾಗಬೇಕು. ನಮ್ಮ ಪರ್ಯಾಯದ ಅವಧಿಯಲ್ಲಿ ಡಾ|ಉದಯಕುಮಾರ ಸರಳತ್ತಾಯರು ಎರಡು ವರ್ಷ ಪುರಾಣ ಪ್ರವಚನ ಮಾಡಿದರು. ಈಗ ಅದರ ಫಲವೋ ಎಂಬಂತೆ ಅವರ ಮಗನನ್ನು ನಾವು ಕೇಳಿದಾಗ ಶೀರೂರು ಮಠಕ್ಕೆ ನೀಡಲು ಒಪ್ಪಿದರು ಎಂದು ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ತಿಳಿಸಿದರು.
ಕರ್ಮ ತ್ಯಾಗ ಮಾಡಲಾಗದು, ಕೇವಲ ಕರ್ಮದ ಫಲ ತ್ಯಾಗ ಮಾಡಬೇಕು. ಸಂಪತ್ತು, ದಾನ, ಪೂಜೆ ಇತ್ಯಾದಿ ಕರ್ಮಗಳನ್ನೂ ನಾನು ಮಾಡುವುದಲ್ಲ, ಭಗವಂತನೇ ಮಾಡಿಸಿಕೊಳ್ಳುತ್ತಿದ್ದಾನೆ ಎಂಬ ಅನುಸಂಧಾನ ಅಗತ್ಯ. ಪಲಿಮಾರು ಮಠಾಧೀಶರ ಪರ್ಯಾಯ ಸಂದರ್ಭ ಶೀರೂರು ಸ್ವಾಮೀಜಿಯವರಿಗೆ ಆರೋಗ್ಯ ಸರಿ ಇಲ್ಲ, ತುರ್ತಾಗಿ ದೇವರ ಪೂಜೆ ಮಾಡಬೇಕೆಂಬ ಕರೆ ಬಂತು. ನಾವು ಹೋಗಿ ಪೂಜೆ ಸಲ್ಲಿಸಿ, ದೇವರನ್ನು ಶ್ರೀಕೃಷ್ಣಮಠದಲ್ಲಿರಿಸಿದೆವು. ಈಗ ಶೀರೂರು ಮಠಾಧೀಶರು ಆಗಮಿಸಿದ್ದಾರೆ. ದೇವರನ್ನು ಮತ್ತೆ ಹಿಂದಿರುಗಿಸುತ್ತಿದ್ದೇವೆ ಎಂದು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು. ಶೀರೂರು ಮಠವನ್ನು ಪ್ರವೇಶಿಸಿದ ಬಳಿಕ ಇತರ ಮಠಗಳಿಗೂ ತೆರಳಿ ಸ್ವಾಮೀಜಿಯವರಿಗೆ ಗೌರವ ಸಲ್ಲಿಸಿದರು. ಶಾಸಕ ಕೆ.ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಶುಭ ಹಾರೈಸಿದರು.