ಬೆಂಗಳೂರು: ಬಳ್ಳಾರಿಯ ತುಂಗಭದ್ರಾ ನಾಲೆ ಸಮೀಪದ ಕೋಟ್ಯಾಂತರ ರೂ. ಮೊತ್ತದ ಜಮೀನಿಗೆ ಸಂಬಂಧಿಸಿದಂತೆ ಅಕ್ರಮ ನಡೆದಿದ್ದು ಈ ಸಂಬಂಧ ಸಚಿವ ಶ್ರೀರಾಮುಲು ಅವರ ವಿರುದ್ದ ಲೋಕಾಯುಕ್ತ ಪೋಲಿಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಕೂಡಲೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಹಾಗೂ ಬಿಜೆಪಿ ವರಿಷ್ಠರು ಸಾರಿಗೆ ಸಚಿವ ಶ್ರೀರಾಮುಲು ಅವರ ರಾಜೀನಾಮೆ ಪಡೆಯಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್ ಉಗ್ರಪ್ಪ ಒತ್ತಾಯಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಟಿ.ಬಿ.ನಾಲೆ ಭೂ ಅಕ್ರಮಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೋಲಿಸರು ಹಾಕಿರುವ ಆರು ಸಾವಿರ ಪುಟಗಳ ಚಾರ್ಜ್ ಶೀಟ್ ಬಿಡುಗಡೆ ಮಾಡಿದರು.
ತುಂಗಾ ಭದ್ರಾ ನಾಲೆ ಹಾದು ಹೋಗುವ ಪ್ರದೇಶದಲ್ಲಿ 27 ಎಕರೆ 25 ಗುಂಟೆಗೆ ಜಮೀನು ಅಕ್ರಮವಾಗಿ ಕಬಳಿಸಲಾಗಿದೆ. ಈ ಸಂಬಂಧ ಅವ್ಯವಹಾರದಲ್ಲಿ ಭಾಗಿ ಆಗಿದ್ದ ಜಿಲ್ಲಾಧಿಕಾರಿ, ತಹಶೀಲ್ದಾರ್, ಎಸಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ದ ಕೂಡ ಪ್ರಕರಣ ದಾಖಲಾಗಿದೆ ಎಂದರು.
ಇದನ್ನೂ ಓದಿ:ವಂದೇ ಭಾರತ್ ರೈಲಿಗೆ ಢಿಕ್ಕಿಯಾದ ಎಮ್ಮೆಗಳ ಮಾಲೀಕರ ವಿರುದ್ಧ ಎಫ್ ಐಆರ್
ಈಗಾಗಲೇ ಈ ಪ್ರಕರಣ ಜನಪ್ರತಿನಿಧಿಗಳ ಕೋರ್ಟ್ ನಲ್ಲಿದೆ. ಸಚಿವ ಶ್ರೀರಾಮುಲು ಈ ಸಂಬಂಧ ಬೇಲ್ ಪಡೆದು ತಿರುಗಾಡುತ್ತಿದ್ದಾರೆ. ಪ್ರಕರಣದ ಸಾಕ್ಷಿ ನಾಶಪಡಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಸಚಿವ ಶ್ರೀರಾಮುಲು ಅವರ ಬೇಲ್ ರದ್ದುಪಡಿಸಿ ಶೀಘ್ರವಾಗಿ ವಿಚಾಚರಣೆ ನಡೆಯಬೇಕು ಎಂದು ಆಗ್ರಹಿಸಿದರು.