ನಟ ಕಮ್ ನಿರ್ದೇಶಕ ಎಂ.ಜಿ. ಶ್ರೀನಿವಾಸ್ ನಿರ್ದೇಶನದ “ಶ್ರೀನಿವಾಸ ಕಲ್ಯಾಣ’ ಚಿತ್ರ ಈ ವಾರ (ಫೆ. 17) ರಿಲೀಸ್ ಆಗುತ್ತಿರೋದು ಗೊತ್ತೇ ಇದೆ. ಈಗಾಗಲೇ ಚಿತ್ರದ ಟ್ರೇಲರ್‌ವೊಂದು ಸಿಕ್ಕಾಪಟ್ಟೆ ಸೌಂಡ್ ಮಾಡಿರೋದು ಗೊತ್ತು. ಈಗ ಈ ಚಿತ್ರದಲ್ಲಿ ಒಂದಷ್ಟು “ಮೊದಲ ಸಲ’ದ ಸುದ್ದಿಗಳಿವೆ. ಮೊದಲ ಬಾರಿಗೆ ಸಿನಿಮಾದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಲಾಗಿದೆ ಅನ್ನೋದೇ ಆ ಹೊಸ ಸುದ್ದಿ.
ಅಂದಹಾಗೆ, ಆ ಹೊಸ ಸುದ್ದಿ ಏನು ಗೊತ್ತಾ? ಇದೇ ಮೊದಲ ಸಲ “ಮ್ಯಾಜಿಕ್ ಲ್ಯಾಂಟ್ರೆನ್’ ಕ್ಯಾಮೆರಾದಲ್ಲಿ ಇಡೀ ಸಿನಿಮಾವನ್ನು ಚಿತ್ರೀಕರಿಸಿರುವುದು. ಒಳ್ಳೆಯ ಫಲಿತಾಂಶದೊಂದಿಗೆ ಸಿನಿಮಾ ಮೂಡಿ ಬಂದಿರುವುದು ವಿಶೇಷತೆಗಳಲ್ಲೊಂದು. ಮೊದಲ ಬಾರಿಗೆ ಚಿತ್ರದಲ್ಲಿರುವ ಡುಯೆಟ್ ಸಾಂಗ್‌ವೊಂದಕ್ಕೂ ವಿಶೇಷ ತಾಂತ್ರಿಕತೆ ಬಳಸಲಾಗಿದೆ.
“ಪ್ಯಾರಲಾಕ್ಸ್ ಅಸೆಟ್’ ಎಂಬ ತಂತ್ರಜ್ಞಾನವನ್ನು ಆ ಸಾಂಗ್‌ಗೆ ಬಳಸಿದ್ದು, ಫುಲ್ ಹಾಡನ್ನು ಸ್ಟಾಪ್‌ಮೋಷನ್‌ನಲ್ಲಿ ತೋರಿಸಲಾಗುತ್ತಿದೆಯಂತೆ. ಇನ್ನು, ಆ ಹಾಡಿಗೆ ಚೆನ್ನೈನ ಪ್ರವೀಣ್ ಎಂಬ ನೃತ್ಯ ನಿರ್ದೇಶಕರು ನೃತ್ಯ ಸಂಯೋ ಜಿಸಿದ್ದಾರೆ. ಇವುಗಳ ಜತೆಯಲ್ಲಿ ಮೊದಲ ಬಾರಿಗೆ ಚಿತ್ರದ ಸಂಗೀತ ನಿರ್ದೇಶಕರು, ಕ್ಯಾಮೆರಾಮೆನ್ ಹಾಗೂ ಕೆಲ ಕಲಾವಿದರನ್ನು ಕೂಡ ಫೇಸ್‌ಬುಕ್‌ನಲ್ಲೇ ಆಯ್ಕೆ ಮಾಡಿರುವುದು ಕೂಡ ವಿಶೇಷ ಎನ್ನುತ್ತಾರೆ ನಿರ್ದೇಶಕ ಶ್ರೀನಿವಾಸ್ ಅಲಿಯಾಸ್ ಶ್ರೀನಿ.
“ಶ್ರೀನಿವಾಸ ಕಲ್ಯಾಣ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜತೆಯಲ್ಲಿ ನಟನೆಯನ್ನೂ ಮಾಡಿರುವ ಶ್ರೀನಿವಾಸ್, ಕಥೆಯ ಗುಟ್ಟು ಬಿಡದೆ, ಸಣ್ಣದ್ದೊಂದು ಎಳೆಯನ್ನು ಮಾತ್ರ ಹೊರಹಾಕುತ್ತಾರೆ. “ಚಿತ್ರದ ನಾಯಕ “ಮೋಕ್ಷ’ ಹುಡುಕಿ ಹೊರಡುತ್ತಾನೆ. ಆ ಮಧ್ಯೆ ಏನೆಲ್ಲಾ ಘಟನೆಗಳು ನಡೆಯುತ್ತವೆ ಅನ್ನೋದೇ ಚಿತ್ರದ ಕಥೆ’ ಎನ್ನುವ ಶ್ರೀನಿ ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ ಎನ್ನುತ್ತಾರೆ. ಬುಧವಾರ ಚಿತ್ರದ ಇಂಟ್ರಡಕ್ಷನ್ ಹಾಡೊಂದನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ.
ಚಿತ್ರಕ್ಕೆ ಮಿಥುನ್ ಮುಕುಂದನ್ ಹಾಗೂ ರಘುಥಾಣೆ ಸಂಗೀತ ನೀಡಿದರೆ, ಅಶ್ವಿನ್ ಕಡಂಬೂರು ಕ್ಯಾಮೆರಾ ಹಿಡಿದಿದ್ದಾರೆ. ವಿಕ್ರಂ ಶ್ರೀಧರ್ ಕತ್ತರಿ ಪ್ರಯೋಗಿಸಿದ್ದಾರೆ. “ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಖ್ಯಾತಿಯ ಕವಿತಾ ಹಾಗೂ ನಿಖೀಲಾರಾವ್ ನಾಯಕಿಯರು. ಝೇಂಕಾರ್ ಭರತ್ ಮತ್ತು ಗೆಳೆಯರು ಚಿತ್ರವನ್ನು ನಿರ್ಮಿಸಿದ್ದಾರೆ.