ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಆರಾಧ್ಯ ದೇವಿ ಶ್ರೀ ಶಾರದಾಂಬೆಗೆ ವೈಶಾಖ ಕೃಷ್ಣ ಪಾಡ್ಯದ ದಿನವಾದ ಶುಕ್ರವಾರ ಶಾಸ್ತ್ರೋಕ್ತವಾಗಿ ಮಹಾಭಿಷೇಕ ನಡೆಯಿತು.
ಇಲ್ಲಿ ವರ್ಷದಲ್ಲಿ ಮೂರು ಬಾರಿ ಮಹಾಭಿಷೇಕ ನಡೆಯಲಿದ್ದು, ಕ್ರೋಧಿ ಸಂವತ್ಸರದ ಮೊದಲ ಅಭಿಷೇಕ ಇದಾಗಿದೆ. ಇದಲ್ಲದೆ ಮಹಾಲಯ ಅಮಾವಾಸ್ಯೆ ಮತ್ತು ಭೂಮಿ ಹುಣ್ಣಿಮೆಯಂದು ಮಹಾಭಿಷೇಕ ನಡೆಯುತ್ತದೆ.
1916ರ ಮೇ 18ರಂದು ಪೀಠದ 34ನೇ ಅಧಿ ಪತಿಗಳಾದ ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿಗಳು ಶಿಲಾಮಯ ಶ್ರೀ ಶಾರದಾಂಬಾ ದೇಗುಲಕ್ಕೆ ಕುಂಭಾಭಿಷೇಕ ನಡೆಸಿದ್ದರು. ಅಂದಿನಿಂದ ಇದು ಅನೂಚಾನವಾಗಿ ಮುಂದುವರಿದುಕೊಂಡು ಬಂದಿದೆ.
ಶುಕ್ರವಾರ ಬೆಳಗ್ಗೆ ಪೀಠದ ಉಭಯ ಜಗದ್ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಭಾರತೀ ಸ್ವಾಮೀಜಿಗಳು ಮೂಲ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು. ಪಂಚಾಮೃತಾಭಿಷೇಕ, 108 ಕಲಶಾಭಿಷೇಕ, ಪೂಜೆ ನಡೆಯಿತು.
ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳು ರುದ್ರ ಪಾರಾಯಣ ನಡೆಸಿದರು. ಶ್ರೀಮಠದ ಅರ್ಚಕರಾದ ಸೀತಾರಾಮ ಶರ್ಮ, ಶಿವಕುಮಾರ ಶರ್ಮ, ಕೃಷ್ಣ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಅನಂತರ ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿ ಈಶ್ವರಗಿರಿಯ ಮಲಹಾನಿಕರೇಶ್ವರ ಸ್ವಾಮಿ ಸನ್ನಿ ಧಿಗೆ ತೆರಳಿ ಪೂಜೆ ಸಲ್ಲಿಸಿದರು. ಸ್ತಂಭ ಗಣಪತಿಗೆ ಪೂಜೆ ಸಲ್ಲಿಸಿದರು.