Advertisement

ಕಾಫಿ ಬೆಳೆಗೆ ಬೇಕಿದೆ ವರುಣನ ಕೃಪೆ

01:53 PM Mar 21, 2020 | Naveen |

ಶೃಂಗೇರಿ: ಕಳೆದ ವಾರ ಸುರಿದ ತುಂತುರು ಮಳೆಯಿಂದ ಕಾಫಿ ತೋಟದಲ್ಲಿ ಹೂವು ಬಿಟ್ಟಿದ್ದು, ನಂತರ ಮಳೆ ಬಾರದ ಹಿನ್ನೆಲೆಯಲ್ಲಿ ರೈತರು ಫಸಲು ನಷ್ಟವಾಗುವ ಭೀತಿ ಎದುರಿಸುತ್ತಿದ್ದಾರೆ.

Advertisement

ಅಡಕೆಗೆ ಪರ್ಯಾಯ ಬೆಳೆಯಾಗಿರುವ ಕಾಫಿ ಬೆಳೆಗೆ ಫೆಬ್ರವರಿ ಅಂತ್ಯದಲ್ಲಿ ಬಂದ ತುಂತುರು ಮಳೆ ಮಾರಕವಾಗಿದೆ. ತಾಲೂಕಿನಲ್ಲಿ ಸಣ್ಣ ಮತ್ತು ಅತಿ ಸಣ್ಣ ಬೆಳೆಗಾರರೇ ಹೆಚ್ಚಾಗಿದ್ದು, ರೊಬಾಸ್ಟ್‌ ಕಾಫಿ ಮಾತ್ರ ಬೆಳೆಯಲಾಗುತ್ತಿದೆ. ಮಳೆಗೆ ಕಾಫಿ ಮೊಗ್ಗುಗಳು ಮುಂದೆ ಬಂದಿದ್ದರೂ, ಅಗತ್ಯಕ್ಕೆ ತಕ್ಕಷ್ಟು ಮಳೆಯಾಗದಿರುವುದು ಮುಂದಿನ ಫಸಲಿಗೆ ತೊಂದರೆಯಾಗಲಿದೆ.

ಮಾರ್ಚ್ ನಲ್ಲಿ ಮಳೆಯಾದಲ್ಲಿ ಕಾಫಿ ಫಸಲಿಗೆ ಸೂಕ್ತ ವಾತಾವರಣವಾಗುತ್ತಿತ್ತು. ಆದರೆ ಅವಧಿಗೂ ಮುನ್ನ ಅಲ್ಪ ಸ್ವಲ್ಪ ಮಳೆಯಾಗಿದ್ದು, ಅದೀಗ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಉತ್ತಮವಾಗಿ ಮಳೆ ಸುರಿದಿದ್ದರಿಂದ ಕಾಫಿ ಹೂವು ಅರಳಿ, ಕಾಫಿ ಫಸಲು ಉತ್ತಮವಾಗಿತ್ತು. ನಂತರ ಆಗಸ್ಟ್‌ನಲ್ಲಿ ಸುರಿದ ಅತಿಯಾದ ಮಳೆಗೆ ಕೊಳೆ ರೋಗ ಕಾಣಿಸಿಕೊಂಡು ಕಾಫಿ ಉದುರಿ ಫಸಲು ನಷ್ಟವಾಗಿತ್ತು. ಈ ವರ್ಷ ಅಲ್ಪ ಪ್ರಮಾಣದ ಮಳೆಯಾಗಿದ್ದರಿಂದ ಕಾಫಿ ಗಿಡಗಳೇ ಒಣಗುತ್ತಿದ್ದು, ಬೆಳೆಯೂ ನಷ್ಟವಾಗುವ ಭೀತಿ ಉಂಟಾಗಿದೆ.

ಅಡಕೆ ರೋಗ ಬಂದ ನಂತರ ಕಾಫಿ ಬೆಳೆಯನ್ನೇ ನಂಬಿಕೊಂಡು ಬದುಕುತ್ತಿರುವ ರೈತರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ತಾಲೂಕಿನ ಬಹುತೇಕ ತೋಟಗಳು ಮಳೆಯಾಶ್ರಿತವಾಗಿದ್ದು, ನೀರಾವರಿ ತೋಟಗಳಿಗೂ ಅಕಾಲಿಕ ಮಳೆ ತೊಂದರೆ ಉಂಟು ಮಾಡಿದೆ. ಮೋಟಾರ್‌ ಮೂಲಕ ಸ್ಪಿಂಕ್ಲರ್‌ ಮಾಡಲಾಗುತ್ತಿದ್ದು,ನೀರಿದ್ದರೂ ವಿದ್ಯುತ್‌ ನಿಲುಗಡೆಯಿಂದ ಸ್ಪಿಂಕ್ಲರ್‌ ಮಾಡಲು ಸಾಧ್ಯವಾಗುತ್ತಿಲ್ಲ.

ತೀವ್ರ ವೋಲ್ಟೇಜ್‌ ಕುಸಿತದಿಂದ ಮೋಟಾರ್‌ಗಳು ಹಾಳಾಗುತ್ತಿದ್ದು, ಮೋಟಾರ್‌ ದುರಸ್ತಿ ಮಾಡಲು ವಿದ್ಯುತ್‌ ನಿಲುಗಡೆ ಅಡ್ಡಿಯಾಗುತ್ತಿದೆ. ಅನಿಯಮಿತ ವಿದ್ಯುತ್‌ ಕಡಿತವೂ ಇದ್ದು, ಮೆಸ್ಕಾಂ ಗ್ರಾಮೀಣ ಪ್ರದೇಶದಲ್ಲಿ ಹಗಲು ಕನಿಷ್ಠ 8 ಗಂಟೆ, ರಾತ್ರಿ 3 ಗಂಟೆ ವಿದ್ಯುತ್‌ ಕಡಿತ ಮಾಡುತ್ತಿದೆ. ಬಹುತೇಕ ರೈತರು ವಿದ್ಯುತ್‌ ಮೋಟಾರ್‌ ಗೆ ಅವಲಂಬಿತರಾಗಿದ್ದು, ತೋಟಕ್ಕೆ ನೀರು ಪೂರೈಕೆ ಸವಾಲಾಗಿದೆ. ಅಡಕೆ, ಕಾಳುಮೆಣಸು ರೋಗದಿಂದ ತತ್ತರಿಸಿದ್ದು, ಇತ್ತ ಕಾಫಿಗೆ ಮಳೆ ಸಮರ್ಪಕವಾಗದೇ, ಮೊಗ್ಗು ಕರಟಿರುವುದರಿಂದ ಫಸಲಿನ ಮೇಲೆ ಹೆಚ್ಚು ಹಾನಿ ಮಾಡುತ್ತದೆ.

Advertisement

ಕಾಫಿಯನ್ನೇ ನಂಬಿ ಬದುಕುತ್ತಿರುವ ರೈತರ ಸ್ಥಿತಿ ಕಷ್ಟಕರವಾಗಲಿದೆ. ಅರೆಬಿಕಾ ಕಾಫಿ ದರ ಕೊಂಚ ಚೇತರಿಕೆ ಕಂಡರೂ ರೊಬಾಸ್ಟಾ ಕಾಫಿ ದರದಲ್ಲಿ ಏರಿಕೆಯಾಗುತ್ತಿಲ್ಲ. ಹಣ್ಣು ಕೊಯ್ಲು, ಕಸಿ ಕೂಲಿ, ಗೊಬ್ಬರ ದರ ಪ್ರತಿ ವರ್ಷ ಏರುತ್ತಿದ್ದರೆ, ಇತ್ತ ಕಾಫಿ ದರ ಕಳೆದ ನಾಲ್ಕು ವರ್ಷದ ಹಿಂದಿನ ದರ ರೈತರಿಗೆ ದೊರಕುತ್ತಿದೆ.

ಕಾಫಿ ಫಸಲಿಗೆ ಮಳೆ ಅಥವಾ ತುಂತುರು ನೀರಾವರಿ ಅಗತ್ಯ. ಕಾಫಿ ಹಣ್ಣು ಕೊಯ್ಲು ಮಾಡಿದ ನಂತರ ಗಿಡಗಳು ಬಾಡಿದ ನಂತರ ಮತ್ತೆ ನೀರು ಪೂರೈಸಿದಾಗ ಹೂವು ಅರಳಲು ಸಹಕಾರಿಯಾಗುತ್ತದೆ. ನೈಸರ್ಗಿಕವಾಗಿ ಮಳೆಯಾದಲ್ಲಿ ಉತ್ತಮ ಫಸಲು ನಿರೀಕ್ಷಿಸಬಹುದು. ಅಕಾಲಿಕ ಮಳೆಯಾದಾಗ ಕಾಫಿಗೆ ನೀರು ನೀಡಿದರೆ ಮಾತ್ರ ಫಸಲು ಉಳಿಸಿಕೊಳ್ಳಲು ಸಾಧ್ಯ. ಕನಿಷ್ಠ 25 ಮಿ.ಮೀ. ಮಳೆಯಾದಲ್ಲಿ ಮಾತ್ರ ಕಾಫಿ ಹೂವು ಅರಳಲು ಸಹಕಾರಿಯಾಗುತ್ತದೆ.
ಶ್ರೀ ಕೃಷ್ಣ, ಸಹಾಯಕ ತೋಟಗಾರಿಕೆ
ನಿರ್ದೇಶಕರು, ಶೃಂಗೇರಿ

ಕಳೆದ ಎರಡು ವರ್ಷ ಬೇಸಿಗೆಯಲ್ಲಿ ಉತ್ತಮ ಮಳೆಯಾಗಿ ಕಾಫಿ ಫಸಲು ಚೆನ್ನಾಗಿದ್ದರೂ, ನಂತರ ಅತಿವೃಷ್ಟಿಯಿಂದ ಎರಡು ವರ್ಷ ಕೊಳೆ ವ್ಯಾಪಕವಾಗಿತ್ತು. ಈ ವರ್ಷ ಅಕಾಲಿಕ ಮಳೆಯಿಂದ ಕಾಫಿ ಮೊಗ್ಗು ಹಾಳಾಗುತ್ತಿದ್ದು, ಗಿಡಗಳು ಬಾಡುತ್ತಿದೆ. ನಾವು ಕಾಫಿಗೆ ಎಲ್ಲಾ ಕೆಲಸ ಮಾಡಲೇಬೇಕಾಗಿದ್ದು, ಅಕಾಲಿಕ ಮಳೆ ಫಸಲನ್ನು ಕಸಿದುಕೊಂಡಿದೆ. ಕಾಫಿ ಫಸಲನ್ನೇ ನಂಬಿ ಬದುಕುತ್ತಿರುವ ಅನೇಕ ರೈತರಿಗೆ ಕಾಫಿ ಇಳುವರಿ ತೀವ್ರ ಕುಸಿತವಾಗಲಿದೆ.
ಕಲ್ಕುಳಿ ಮಂಜುನಾಥ್‌,
ಶೃಂಗೇರಿ

„ರಮೇಶ್‌ ಕರುವಾನೆ

Advertisement

Udayavani is now on Telegram. Click here to join our channel and stay updated with the latest news.

Next