ಶ್ರೀನಗರ : ಪುಲ್ವಾಮಾ ಆತ್ಮಾಹುತಿ ಬಾಂಬ್ ದಾಳಿಯಿಂದಾಗಿ ಕಳೆದ ವಾರ ಅಮಾನತುಗೊಂಡಿದ್ದ ಶ್ರೀನಗರ – ಮುಜಫರಾಬಾದ್ (ಪಾಕ್ ಆಕ್ರಮಿತ ಕಾಶ್ಮೀರ) ನಡುವಿನ ಕಾರವಾನ್ ಎ ಅಮನ್ (ಶಾಂತಿ ಕಾರವಾನ್) ಬಸ್ ಸೇವೆ ಇಂದು ಸೋಮವಾರ ಪುನರಾರಂಭಗೊಂಡಿತು.
ಹದಿಮೂರು ಪ್ರಯಾಣಿಕರನ್ನು ಒಳಗೊಂಡ ಶ್ರೀನಗರ – ಮುಜಫರಾಬಾದ್ ಬಸ್ ಸೇವೆ ಇಂದು ಗಡಿ ನಿಯಂತ್ರಣ ರೇಖೆ ದಾಟಿ ಮುಂದಕ್ಕೆ ಸಾಗಿತು ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ.
ಕಾಶ್ಮೀರದಲ್ಲಿನ ತಮ್ಮ ಬಂಧುಗಳ ಜತೆಗೆ ಕೆಲ ದಿನಗಳ ಕಾಲ ಇದ್ದ ಪಿಓಕೆ ನಿವಾಸಿಗಳು ತಮ್ಮ ಮನೆಗೆ ಮರಳಿದರು. ಈ ಸಾಪ್ತಾಹಿಕ ಬಸ್ ಸೇವೆಯಲ್ಲಿ ಯಾವನೇ ಒಬ್ಬ ಭಾರತೀಯ ಕೂಡ ಪಿಓಕೆಗೆ ಪ್ರಯಾಣಿಸಲಿಲ್ಲ ಎಂದು ಅಧಿಕಾರಿ ಹೇಳಿದರು.
ಮುಜಫರಾಬಾದ್ ನಿಂದ ಬಂದ ಬಸ್ಸಿನಲ್ಲಿ ಒಟ್ಟು ಎಂಟು ಪ್ರಯಾಣಿಕರಿದ್ದರು; ಇವರಲ್ಲಿ ಏಳು ಮಂದಿ ಭಾರತೀಯ ಪ್ರಜೆಗಳಾಗಿದ್ದು ಓರ್ವ ಮಾತ್ರವೇ ಹೊಸ ಅತಿಥಿಯಾಗಿದ್ದ ಎಂದವರು ತಿಳಿಸಿದರು.
ಶ್ರೀನಗರ – ಮುಜಫರಾಬಾದ್ ಬಸ್ ಸೇವೆಯನ್ನು 2005ರಲ್ಲಿ ಪಾಕ್ಷಿಕ ನೆಲೆಯಲ್ಲಿ, ಭಾರತ ಮತ್ತು ಪಾಕ್ ನಡುವೆ ವಿಶ್ವಾಸ-ವೃದ್ಧಿಯ ಉಪಕ್ರಮವಾಗಿ ಆರಂಭಿಸಲಾಗಿತ್ತು. ಆಗ ಉಭಯ ದೇಶಗಳ ನಡುವೆ ಮಾತುಕತೆ ಸಾಗಿತ್ತು.
ಕಳೆದ ಸೋಮವಾರ ಫೆ.18ರಂದು ಈ ಬಸ್ ಸೇವೆ ನಡೆದಿರಲಿಲ್ಲ. ಆದರೆ ಅದಕ್ಕೆ ಯಾವುದೇ ಅಧಿಕೃತ ಕಾರಣ ನೀಡಲಾಗಿರಲಿಲ್ಲ. ಹಾಗಿದ್ದರೂ ಪುಲ್ವಾಮಾದಲ್ಲಿ ನಡೆದಿದ್ದ ಜೈಶ್ ಉಗ್ರನ ಆತ್ಮಾಹುತಿ ಬಾಂಬ್ ದಾಳಿಯೇ ಈ ಬಸ್ ಸೇವೆ ಅಮಾನತಿಗೆ ಕಾರಣವೆಂದು ತಿಳಿಯಲಾಗಿತ್ತು.