ಧಾರವಾಡ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಆ. 14 ರಂದು ವಿಜೃಂಭಣೆಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲು ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾ ಧಿಕಾರಿ ಇಬ್ರಾಹಿಂ ಮೈಗೂರ ಮಾತನಾಡಿ, 14ರಂದು ಬೆಳಗ್ಗೆ 9:00 ಗಂಟೆಗೆ ಕಲಾಭವನದಿಂದ ಜನಪದ ಕಲಾತಂಡಗಳೊಂದಿಗೆ ಶ್ರೀಕೃಷ್ಣ ಭಾವಚಿತ್ರದ ಮೆರವಣಿಗೆ ಆರಂಭವಾಗುವುದು. ಮೆರವಣಿಗೆಯು ಸುಭಾಸ್ ರಸ್ತೆಯಲ್ಲಿ ಸಂಚರಿಸಿ ಆಲೂರು ವೆಂಕಟರಾವ್ ಸಭಾಭವನ ತಲುಪಲಿದೆ.
ಅಲ್ಲಿ ಬೆಳಗ್ಗೆ 11:00 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ವಿಷಯ ತಜ್ಞರೊಬ್ಬರಿಂದ ಉಪನ್ಯಾಸ ಏರ್ಪಡಿಸಲಾಗುವುದು ಎಂದರು. ಸಮಾಜ ಬಾಂಧವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು.
ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸ್ಥಳೀಯ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸಿ, ದಿನಾಂಕ ನಿಗದಿಪಡಿಸಿ ಅರ್ಥಪೂರ್ಣವಾಗಿ ಆಚರಿಸೋಣ ಎಂದರು. ಶ್ರೀಕೃಷ್ಣ ಜಯಂತಿ ಅಂಗವಾಗಿ ಯಾದವ ಸಂಘದಿಂದ ರಕ್ತದಾನ ಶಿಬಿರ, ಗಡಿಗೆ ಒಡೆಯುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಗಳ ಮುಖಂಡರು ಹೇಳಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಕೋನರಡ್ಡಿ, ತೋಟಗಾರಿಕೆ ಉಪನಿರ್ದೇಶಕ ಎಸ್.ಬಿ. ದಿಡ್ಡಿಮನಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ. ರಂಗಣ್ಣವರ್, ಮುಖಂಡರಾದ ಮಹದೇವಪ್ಪ ದಂಡಿನ, ಪುಂಡಲೀಕಪ್ಪ ಕಡಬಿ, ಗುರುನಾಥ ಹುಲಗೂರ, ಮಂಜುನಾಥ ಹಣಬರ್, ಬೂರನ್ ಗೌಳಿ ಸಭೆಯಲ್ಲಿ ಇದ್ದರು.