Advertisement
ಚೈತ್ರ ಮಾಸ ಮಂಗಳವಾರ ಬೆಳಗ್ಗೆ ಮೀನ ಲಗ್ನದಲ್ಲಿ ನಂಜುಂಡೇಶ್ವರನನ್ನು ಲಲಿತಾ ಚಂದ್ರಶೇಖರ ನಾಮಧೇಯದೊಂದಿಗೆ ರಥಾರೂಢನಾಗಿಸಿದ ಭಕ್ತರು 110 ಟನ್ ಭಾರದ 76 ಅಡಿ ಎತ್ತರದ ಭವ್ಯ ರಥವನ್ನು ಸಾವಧಾನವಾಗಿ ಎಳೆದು ರಥದಲ್ಲಿ ಪವಡಿಸಿದ ಭವರೋಗ ವೈದ್ಯನಿಗೆ ಹಣ್ಣು-ಜವನ ಎಸೆದು ಭಕ್ತಿ ಮೆರೆದರು.
Related Articles
Advertisement
2 ಗಂಟೆಗಳ ಕಾಲ ರಥ ಸ್ತಬ್ಧ: ಹಗ್ಗ ತುಂಡಾದಾಗ ಹೊಸ ಹಗ್ಗ ಕಟ್ಟಲು ಶ್ರಮ ಪಡಬೇಕಾಯಿತು. ಅಂತು ಹಗ್ಗ ಕಟ್ಟಿ ಎಳೆದಾಗ ಅದೂ ತುಂಡಾಯಿತು. ಹಗ್ಗ ಕಟ್ಟುವುದು ಅದು ತುಂಡಾಗುವುದು ಪದೇ ಪದೆ ನಡೆದು ಇತ್ತು ಏಳು ಗಂಟೆಗೆರಥ ಏರಿದ ಶ್ರೀಕಂಠೇಶ್ವರ ಕೊನೆಗೆ ಅಲ್ಲಿಂದ ಚಲಿಸಿದ್ದು 9.45 ಕ್ಕೆ ನಂತರ ದೇವಾಲಯದ ಬಲಭಾಗಕ್ಕೆ ಬಂದ ರಥ ಮತ್ತೆ ಮೊಂಡಾಟ ನಡೆಸಿ ಮುಂದೆ ಸಾಗಿ 11.5 ಕ್ಕೆ ಸರಿಯಾಗಿ ದೇವಾಲಯದ ಎಡಭಾಗದ ಸ್ವಸ್ಥಾನ ಸೇರಿತು.
ಬೆಳಗ್ಗೆ 6.45 ಗಂಟೆಗೆ ಆಗಮಿಕ ನಾಗಚಂದ್ರ ದೀಕ್ಷಿತರು ಸ್ಥಳ ಪುರೋಹಿತ ಸಪ್ತರ್ಷಿ ಜೋಯಿಸರ ನೇತೃತ್ವದಲ್ಲಿ ನಡೆದ ವೇದಘೋಷ ಹಾಗೂ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ರಥಾರೂಢನಾಗಿರುವ ಶ್ರೀಕಂಠೇಶ್ವರನ ಗೌತಮ ರಥಕ್ಕೆ ಉಪವಿಭಾಗಾಧಿಕಾರಿ ಶಿವೇಗೌಡ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ ಹಾಗೂ ಗಂಗಯ್ಯನವರ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಈಡುಗಾಯಿ ಒಡೆದು ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಶಾಸಕ ಹರ್ಷವರ್ಧನ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಈ ಬಾರಿ ಅರವಟ್ಟಿಗೆ ಹಾಗೂ ಪ್ರಸಾದ ವಿತರಣೆಗೆ ಜಿಲ್ಲಾಡಳಿತ ಸಾಕಷ್ಟು ನಿಬಂಧನೆಗಳನ್ನು ವಿಧಿಸಿದ್ದರೂ ಭಕ್ತರು ಅದನ್ನು ಗಣನೆಗೆ ತೆಗೆದುಕೊಳ್ಳದೇ ಮಾರು ಮಾರಿಗೆ ನೀರು, ಮಜ್ಜಿಗೆ, ಉಪಾಹಾರ, ಹಣ್ಣು ಹಂಪಲುಗಳ ಸಮೇತ ಪ್ರಸಾದ ವಿತರಿಸಿದರು.
ಜೆಸಿಬಿ, ಕ್ರೇನ್ ನೆರವು: ರಥ ಮೇಲೇಳದೆ ಮೊಡಾಟ ಮಾಡಿದಾಗ ಗೌತುಮ ರಥವನ್ನು ಮೇಲೆತ್ತಲು ಜೆಸಿಬಿ ಹಾಗೂ ಕ್ರೇನ್ ಬಳಸಿದಾಗ ರಥ ಮೇಲೇಳುವ ಬದಲು ರಥದ ಒಂದು ಭಾಗಗಕ್ಕೆ ಜೆಸಿಬಿ ಯಿಂದ ಸ್ವಲ್ಪ ಹಾನಿಯೂ ಆದ ಘಟನೆಯೂ ನಡೆಯಿತು. ಬಿಸಿಲೇರುವ ಮೊದಲೇ ಗಣಪತಿ ರಥ ಹೊರಟು ಕೆಲವೇ ನಿಮಷಗಳಲ್ಲಿ ಸ್ವಸ್ಥಾನಕ್ಕೆ ಬಂದರೂ ಅಪ್ಪ ನಂಜುಂಡಪ್ಪ ಮಾತ್ರ ಸ್ಥಳ ಕದಲಲೇ ಇತರಲಿಲ್ಲ.
ಕಡೆಗೂ ಗೌತಮ ರಥದ ಚಲನೆ ಆರಂಭಗೊಂಡ ನಂತರ ಒಂದೊಂದಗಾಗಿ ಚಂಡಿಕೇಶ್ವರ, ಷಣ್ಮುಖ, ಪಾರ್ವತಿಯರು ಪವಡಿಸಿದ ಐದೂ ರಥಗಳನ್ನು ಲಕ್ಷಕ್ಕೂ ಹೆಚ್ಚು ಭಕ್ತರ ಸಮ್ಮುಖದಲ್ಲಿ ಎಳೆದ ಭಕ್ತರು ಪುನೀತರಾದರು. ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಡಿವೈಎಸ್ಪಿ ಜಯವಂತ , ಎಸ್‌ಐಗಳಾದ ಆನಂದ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.
ಸಂಘಟನೆಗಳಿಂದ ಪ್ರಸಾದ ವ್ಯವಸ್ಥೆ: ಶ್ರೀಕಂಠೇಶ್ವರ ಸೇವಾ ಸಂಘ ಬೆಂಗಳೂರು, ನಂಜುಂಡೇಶ್ವರ ಸೇವಾ ಸಂಘ ದೊಡ್ಡಬಳ್ಳಾಪುರ, ಓಂ ಯುವಕರ ಸಂಘ ಬೆಂಗಳೂರು, ಶ್ರೀಕಂಠೇಶ್ವರ ಟೀವಿ ಸೆಂಟರ್ ನಂಜನಗೂಡು. ನೇಸ್ಲೆ ಗೆಳಯರ ಬಳಗ , ನಂಜನಗೂಡು, ಗ್ರಾಮಲೆಕ್ಕಾಧಿಕಾರಿಗಳ ಸಂಘ, ಬ್ರಾಹ್ಮಣ ಯುವಕರ ಸಂಘ, ವೀರಶೈವ ಯುವಕರ ಸಂಘ, ಆರ್ಯವೈಶ್ಯ ಯುವಕರ ಸಂಘ, ಜೈನ ಸಂಘ ಸೇರಿದಂತೆ ನೂರಾರು ಸಂಘ ಸಂಸ್ಥೆಗಳು ಜಾತ್ರೆಗೆ ಆಗಮಿಸಿದ ಭಕ್ತಾದಿಗಳಿಗೆ ಪುಳಿಯೋಗರೆ, ಚಿತ್ರಾನ್ನ, ಮೊಸರನ್ನದ ಪ್ರಸಾದ ವಿತರಿಸಿದರು.
ಬೆಂಗಳೂರಿನ ರಾಂಕುಮಾರ ಎಂಬುವವರು 25 ಲೀಟರ್‌ನ 2.500 ಕ್ಯಾನ್ ಶುದ್ಧ ಕುಡಿಯುವ ನೀರನ್ನು ವಿತರಿಸಿದರೆ, ಬೆಂಗಳೂರಿನ ಶ್ರೀಕಂಠೇಶ್ವರ ಸೇವಾ ಸಂಸ್ಥೆಯವರು ಶುದ್ಧ ತುಪ್ಪದಿಂದ ತಯಾರಿಸಲಾದ ಲಕ್ಷಕ್ಕೂ ಹೆಚ್ಚು ಲಡ್ಡುಗಳನ್ನು ಭಕ್ತರಿಗೆ ನೀಡಿದರು. ಬೆಂಗಳೂರಿನ ಅಣಂತಸ್ವಾಮಿ ಅವರು ಶ್ರೀಕಂಠೇಶ್ವರನ ರಥದ ಹೂವಿನ ಪೂರ್ಣ ಅಂಲಕಾರದ ಸೇವೆ ಸಲ್ಲಿಸಿದರು.