Advertisement

ಶೀರೂರು ಶ್ರೀ ಸಾವು: ತನಿಖೆಯಿಂದ ಸತ್ಯಾಂಶ ಬಹಿರಂಗ: ಪೇಜಾವರ ಶ್ರೀ

06:00 AM Aug 30, 2018 | Team Udayavani |

ಬೆಂಗಳೂರು: ಶಿರೂರು ಶ್ರೀಗಳ ವಿಚಾರದಲ್ಲಿ ನನಗೆ ಯಾವುದೇ ವಯಕ್ತಿಕ ದ್ವೇಷವಿಲ್ಲ, ಅವರ ಸನ್ಯಾಸ ತತ್ವನಿಷ್ಠೆ ವಿಚಾರದಲ್ಲಿ ಮಾತ್ರ ಒಂದಿಷ್ಟು ಬೇಸರವಿತ್ತು. ಆದರೆ ಕೆಲವರು ಅವರ ಸಾವಿನ ವಿಚಾರದಲ್ಲಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಸದ್ಯದಲ್ಲೆ ತನಿಖೆಯ ಮೂಲಕ ಸತ್ಯ ಹೊರಬೀಳಲಿದೆ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

Advertisement

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರೂರು ಶ್ರೀಗಳು ಮದ್ಯ, ಮಾನಿನಿಯರ ವ್ಯಸನಿ ಆಗಿದ್ದರು. ಈ ಕಾರಣದಿಂದ ಅವರಿಗೆ ಪಟ್ಟದ ದೇವರು ನೀಡಿರಲಿಲ್ಲ. ಇನ್ನು ಅವರು ತೀರಿಕೊಂಡಾಗ ನಾನು ಟೀಕಿಸಿದೆ ಎಂದು ಹಲವರು ಆಕ್ಷೇಪಿಸಿದ್ದಾರೆ. ಆದರೆ, ಅಂದು ಮಾಧ್ಯಮಗಳ ಪ್ರಶ್ನೆಗೆ ನೇರವಾಗಿ ಸತ್ಯವನ್ನು ಹೇಳಿದ್ದೇನೆ ಹೊರತು ನಾನಾಗಿ ಯಾವತ್ತು ಸಾರ್ವಜನಿಕವಾಗಿ ಅವರನ್ನು ಟೀಕಿಸಿಲ್ಲ, ನನಗೂ ಅವರಿಗೂ ಯಾವುದೇ ವಯಕ್ತಿಕ ದ್ವೇಷವಿಲ್ಲ. ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಪೊಲೀಸರ ವಿಚಾರವಾಗಿ ಅವರು ತೊಂದರೆಯಲ್ಲಿ ಇದ್ದಾಗ ನಾನೇ ಖುದ್ದು ಸಹಾಯ ಮಾಡಿದ್ದೇನೆ ಎಂದರು.

ಶಿರೂರು ಶ್ರೀಗಳ ವಿಚಾರದಲ್ಲಿ ನೇರವಾಗಿ ಮಾತನಾಡಿದೆ ಎಂಬ ಕಾರಣಕ್ಕೆ ನನ್ನ ಮೇಲೆ ಅನೇಕರು ಅನೈತಿಕ ಸಂಬಂಧ ಆರೋಪ ಮಾಡಿದ್ದಾರೆ. ನನ್ನ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಇಲ್ಲ, ನಾನು ಏನು ಎಂಬುದು ಜಗತ್ತಿಗೆ ಗೊತ್ತಿದೆ. ಇನ್ನು ಶಿರೂರು ಶ್ರೀಗಳ ಸಾವಿಗೆ ಅನಾರೋಗ್ಯ ಕಾರಣವೋ ಅಥವಾ ವಿಷಪ್ರಾಶನ ಕಾರಣವೇ ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ಎಲ್ಲರಿಗೂ ತಿಳಿಯಲಿದೆ ಎಂದರು.

ರಾಜ್ಯ ರಾಜಕೀಯ
ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿ ಸಾಕಷ್ಟು ಗೊಂದಲಮಯವಾಗಿದ್ದು, ಪರಸ್ಪರರು ಟೀಕೆ, ವೈಯಕ್ತಿಕ ದ್ವೇಷದಲ್ಲಿ ತೊಡಗಿದ್ದಾರೆ. ಮೂರು ಪಕ್ಷಗಳ ನಾಯಕರು ಜನಹಿತಾಸಕ್ತಿ ಮರೆತು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಈ ವಿದ್ಯಮಾನಗಳು ನನಗೆ ತುಂಬ ಬೇಸರ ತರಿಸಿದೆ. ರಾಜಕೀಯ ನಾಯಕರ ನಡುವೆ ಯಾವುದೇ ಭಿನ್ನಾಭಿಪ್ರಾಯ, ಮನಸ್ತಾಪ ಇದ್ದರೂ ಜನತೆಯ ಹಿತದೃಷ್ಟಿಯಿಂದ ಅವುಗಳನ್ನು ಬಿಟ್ಟುಬಿಡಬೇಕು. ಮುಂದಿನ ದಿನಗಳಲ್ಲಾದರೂ ಮೂರೂ ಪಕ್ಷಗಳು ಒಂದುಗೂಡಿ ಪಕ್ಷ ಭೇದ ಮರೆತು ಸುಭದ್ರ ಆಡಳಿತ ನೀಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ವೈಜ್ಞಾನಿಕ ದೃಷ್ಟಿಕೋನ ಅವಶ್ಯಕ
ನದಿ ಜೋಡಣೆ ಹಾಗೂ ನೀರು ಹಂಚಿಕ ಕುರಿತು ವಿಜ್ಞಾನಿ ಮತ್ತು ಜನಪ್ರತಿನಿಧಿಗಳು ಒಗ್ಗೂಡಿ ವೈಜ್ಞಾನಿಕ ದೃಷ್ಟಿಕೋನದಲ್ಲಿ ಪರಿಹಾರ ಕಂಡುಕೊಳ್ಳಬೇಕು. ಎತ್ತಿನಹೊಳೆ ಯೋಜನೆ ಕುರಿತು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ರಾಜಕೀಯ ಪಕ್ಷಗಳು ಇದನ್ನು ಸ್ವಹಿತಾಸಕ್ತಿಗೆ ಬಳಸಿಕೊಳ್ಳುತ್ತಿವೆ. ಸಂಸದ ವೀರಪ್ಪ ಮೊಯ್ಲಿ ಯೋಜನೆ ಜಾರಿಯಾಗಬೇಕೆಂದು ಹೇಳುತ್ತಿದ್ದರೆ, ಕರಾವಳಿ ಭಾಗದವರು ಬೇಡ ಎನ್ನುತ್ತಿದ್ದಾರೆ. ಹೀಗಾಗಿ, ಇಂತಹ ವಿಚಾರವಾಗಿ ರಾಜಕೀಯ ಹಿತಾಸಕ್ತಿ ಬಿಟ್ಟು ಜನಪರವಾದ ಕಾಳಜಿಯಿಂದ ಯೋಜನೆ ಅನುಷ್ಠಾನದ ಸಾಧಕ ಭಾದಕಗಳನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿಯೇ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.

Advertisement

ಕೊಡಗಿಗೆ ನೆರವು
ಅವೈಜ್ಞಾನಿಕ ಯೋಜನೆಗಳ ಜಾರಿ ಮತ್ತು ಅರಣ್ಯನಾಶದಿಂದ ಕೊಡಗು, ದಕ್ಷಿಣ ಕನ್ನಡ ಮತ್ತು ಕೇರಳದಲ್ಲಿ ಪ್ರಕೃತಿ ವಿಕೋಪ ಉಂಟಾಗಿದೆ. ಚಾತುರ್ಮಾಸ್ಯ ಮುಗಿದ ನಂತರ ಕೊಡಗಿಗೆ ಭೇಟಿ ನೀಡುತ್ತೇನೆ. ಮಠದ ಟ್ರಸ್ಟ್‌ ವತಿಯಿಂದ ಪರಿಹಾರ ನಿಧಿಗೆ 20 ಲಕ್ಷ ರೂ. ನೀಡಲಾಗುವುದು ಎಂದರು.

ಕಸ್ತೂರಿರಂಗನ್‌ ವರದಿ ಜಾರಿ ಕುರಿತು ಪರ- ವಿರೋಧ ಕೇಳಿಬರುತ್ತಿವೆ. ಪರಿಸರ ಸಂರಕ್ಷಣೆ ಆಗದೆ ಇದ್ದರೆ ಭವಿಷ್ಯದ ಪೀಳಿಗೆ ತೀವ್ರ ಆತಂಕದ ದಿನಗಳನ್ನು ಎದುರಿಸಲಿದೆ. ಹೀಗಾಗಿ, ವರದಿ ಜಾರಿ ಬಗ್ಗೆ ಸರ್ಕಾರ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರವೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ವಿವಿಧ ಯೋಜನೆ ಆರಂಭ
ಉಡುಪಿಯ ಪೇಜಾವರಮಠದಿಂದ ರಾಜ್ಯದ ನಾಲ್ಕೂ ಭಾಗಗಳಲ್ಲಿ ಶಿಕ್ಷಣ, ವೈದ್ಯಕೀಯ ಸೇವೆಯನ್ನು ಒದಗಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಮಧ್ವಾಚಾರ್ಯರ ಅವತಾರಭೂಮಿ ಪಾಜಕ ಕ್ಷೇತ್ರದಲ್ಲಿ ಆನಂದತೀರ್ಥ ಮಹಾವಿದ್ಯಾಲಯ ಸ್ಥಾಪನೆ ಕಾರ್ಯ ನಡೆದಿದೆ. 40 ಎಕರೆ ಪ್ರದೇಶದಲ್ಲಿ ವಸತಿ ಸಹಿತ ಕಾಲೇಜು ನಿರ್ಮಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಹಿಂದು ಧರ್ಮದ ಕುರಿತು ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನ ಮಾರತಹಳ್ಳಿಯಲ್ಲಿ ಸರ್ಕಾರ ನೀಡಿದ್ದ ಎರಡು ಎಕರೆ  ಜಾಗದಲ್ಲಿ 28 ಕೋಟಿ.ರೂ ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಈಗಾಗಲೇ 15 ಕೋಟಿ ವೆಚ್ಚ ಮಾಡಲಾಗಿದ್ದು, ಉಳಿದ ಹಣಕ್ಕೆ ದಾನಿಗಳ ನಿರೀಕ್ಷೆಯಲ್ಲಿದ್ದೇವೆ. ಹುಬ್ಬಳ್ಳಿಯಲ್ಲಿ ಸರ್ಕಾರ ನೀಡಿರುವ ಜಾಗದಲ್ಲಿ ಏಳು ಕೋಟಿ ವೆಚ್ಚದಲ್ಲಿ ಪದವಿ ಕಾಲೇಜು ಆರಂಭ, ಶಿವಮೊಗ್ಗದಲ್ಲಿ ಬಡವರು ಹಾಗೂ ಹಿಂದುಳಿದ ವರ್ಗಗಳ ವಿಧ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next