ಮಂಗಳೂರು: ಆಧ್ಯಾತ್ಮಿಕ ಲೋಕದ ಧಾರ್ಮಿಕ ಸಂತರಾದ ಶ್ರೀಮತ್ ಸುಕೃತೀಂದ್ರತೀರ್ಥ ಸ್ವಾಮೀಜಿ ಅವರು ಪ್ರಾತಃಸ್ಮರಣೀಯರು. ಅವರ ಹೆಸರಿನಲ್ಲಿ ಅಂಚೆ ಲಕೋಟೆ ಬಿಡುಗಡೆಗೊಳಿಸುತ್ತಿರುವುದು ವಿಶೇಷ ಗೌರವ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಶ್ರೀ ಕಾಶೀ ಮಠದ 19ನೇ ಪೀಠಾಧಿಪತಿಗಳಾಗಿದ್ದ ಶ್ರೀಮತ್ ಸುಕೃತೀಂದ್ರತೀರ್ಥರ 75ನೇ ಪುಣ್ಯತಿಥಿಯ ಅಮೃತ ಮಹೋತ್ಸವದ ಅಂಗವಾಗಿ ಶ್ರೀಮತ್ ಸುಕೃತೀಂದ್ರ ತೀರ್ಥ ಸ್ವಾಮೀಜಿ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ಅಂಚೆ ಇಲಾಖೆ ಮಂಗಳೂರು ಹೊರತಂದಿರುವ ವಿಶೇಷ ಅಂಚೆ ಲಕೋಟೆಯನ್ನು ಪ್ರಧಾನ ಅಂಚೆ ಕಚೇರಿಯಲ್ಲಿ ಬುಧವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜಿಲ್ಲೆಯ ವಿವಿಧ ಕಲೆ, ಸಂಸ್ಕೃತಿಯ ಮಹತ್ವ ಸಾರುವ ಹಲವು ವಿಶೇಷ ಅಂಚೆ ಲಕೋಟೆಗಳನ್ನು ಅಂಚೆ ಇಲಾಖೆ ಈಗಾಗಲೇ ಬಿಡುಗಡೆಗೊಳಿಸಿದೆ ಎಂದು ಹೇಳಿದರು.
ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಶ್ರೀಮತ್ ಸುಕೃತೀಂದ್ರ ತೀರ್ಥ ಸ್ವಾಮಿಗಳು ಹಾಕಿಕೊಟ್ಟ ದಾರಿ ನಮಗೆಲ್ಲಾ ಪ್ರೇರಣದಾಯಿ. ಬಳಿಕ ಶ್ರೀ ಸುಧೀಂದ್ರತೀರ್ಥ ಸ್ವಾಮಿಗಳು ಜಿಎಸ್‌ಬಿ ಸಮುದಾಯಕ್ಕೆ ಬಹಳಷ್ಟು ಕೊಡುಗೆ ನೀಡಿದ್ದರು. ಇದೀಗ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಸಮಾಜದಲ್ಲಿ ಹಲವು ಕಾರ್ಯಗಳು ನಡೆಯುತ್ತಿವೆ. ಭಾರತೀಯ ಅಜಾದೀಕಾ ಅಮೃತ ಮಹೋತ್ಸವ ಸಂದರ್ಭ ದಲ್ಲೇ ಸುಕೃತೀಂದ್ರತೀರ್ಥರ ಪುಣ್ಯತಿಥಿಯ ಅಮೃತ ಮಹೋತ್ಸವ ನಡೆಯುತ್ತಿದೆ ಎಂದು ತಿಳಿಸಿದರು.
ದೇಶ ಕಂಡ ಮಹಾನ್ ತಪಸ್ವಿಗಳು, ಆಧ್ಯಾತ್ಮಿಕ ಕೊಡುಗೆ ನೀಡಿದ ವ್ಯಕ್ತಿಗಳ ಅಂಚೆ ಲಕೋಟೆ ಬಿಡುಗಡೆ ಮಾಡುವ ಮೂಲಕ ಅಂಚೆ ಇಲಾಖೆ ಹೊಸತನಕ್ಕೆ ಹೊಂದಿಕೊಳ್ಳುತ್ತಿದೆ ಎಂದರು.
ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಎಂ. ಜಗನ್ನಾಥ್ ಕಾಮತ್ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಹಿರಿಯ ಅಂಚೆ ಅಧೀಕ್ಷಕ ಎಂ. ಸುಧಾಕರ್ ಮಲ್ಯ ಪ್ರಸ್ತಾವನೆಗೈದರು. ಉಪ ಅಂಚೆ ಅಧೀಕ್ಷಕ ದಿನೇಶ್ ಪಿ. ಸ್ವಾಗತಿಸಿ, ಹಿರಿಯ ಅಂಚೆ ಪಾಲಕ ಶ್ರೀನಾಥ್ ಎನ್.ಬಿ. ವಂದಿಸಿ ದರು. ಪೂರ್ಣಿಮಾ ಹಾಗೂ ಅಕ್ಷತಾ ನಿರೂಪಿಸಿದರು.