Advertisement

ಶ್ರೀಗಳೇ ದಾರಿ ತೋರುತ್ತಾರೆ

12:30 AM Jan 27, 2019 | Team Udayavani |

ಸಿದ್ಧಗಂಗಾ ಕ್ಷೇತ್ರದ ಹಿರಿಯ ಶ್ರೀಗಳು ಶಿವೈಕ್ಯರಾದ ಹಿನ್ನೆಲೆಯಲ್ಲಿ ಮಠದ ಭಕ್ತರಲ್ಲಿ ದುಃಖ ಮಡುಗಟ್ಟಿದೆ. ಅವರ ಅನುಪಸ್ಥಿತಿಯಲ್ಲಿ ಮಠವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಮಠದ ಮಠಾಧ್ಯಕ್ಷರಾಗಿ ಕಾರ್ಯಾರಂಭ ಮಾಡಿರುವ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮೇಲಿದೆ. ಮಠದ ಮುಂದಿನ ನಿರ್ವಹಣೆ ಕುರಿತು ಶ್ರೀಗಳು “ಉದಯವಾಣಿ’ಜತೆ ಹಂಚಿಕೊಂಡ ಮನದಾಳದ ಮಾತುಗಳಿವು.

Advertisement

ಶ್ರೀಗಳಿಲ್ಲದ ಮಠದಲ್ಲಿ ಪೂಜಾ ಕಾರ್ಯಗಳು ಹೇಗೆ ನಡೆಯುತ್ತಿವೆ?
– ಸಿದ್ಧಗಂಗಾ ಮಠದಲ್ಲಿ ಹಿರಿಯ ಶ್ರೀಗಳು ಇದ್ದಾಗ ನಡೆಯುತ್ತಿದ್ದ ಪೂಜಾ ಕೈಂಕರ್ಯಗಳು, ಧಾರ್ಮಿಕ ಕಾರ್ಯಗಳು ನಿಲ್ಲುವುದಿಲ್ಲ. ಶ್ರೀಗಳಿಲ್ಲದ ಮಠದಲ್ಲಿ ನಾವು ಇರುವಾಗ ಅವರ ನೆನಪು ಹೆಚ್ಚು ಬರುತ್ತದೆ. ಅವರ ಜತೆ ಪೂಜಾ ಕಾರ್ಯಗಳಲ್ಲಿ ಭಾಗವಹಿಸಿದ್ದು, ಅವರು ಹೇಳಿದ ಮಾತುಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಶ್ರೀಗಳ ಶಕ್ತಿ ನಮ್ಮ ಜತೆಗಿದೆ. ಮಠವನ್ನು ಮುನ್ನಡೆಸುವ ದಾರಿಯನ್ನು ಶ್ರೀಗಳೇ ತೋರುತ್ತಾರೆ. ಅವರು ತೋರಿದ ಹಾದಿಯಲ್ಲಿ ಮಠವನ್ನು ಮುನ್ನಡೆಸುತ್ತೇನೆ. ಭಕ್ತ ಸಮೂಹದ ಸಹಕಾರ, ಮಠದ ಎಲ್ಲ ವರ್ಗದವರ ಸಹಕಾರದಿಂದ ಮಠವನ್ನು ಮುನ್ನಡೆಸುತ್ತೇನೆ.

 ಮಠದ ಅಭಿವೃದ್ಧಿಗೆ ಏನೆಲ್ಲಾ ಕಾರ್ಯ ಯೋಜನೆಗಳನ್ನು ಹಾಕಿಕೊಂಡಿದ್ದೀರಿ?
– ಯಾವುದೇ ಹೊಸ ಯೋಜನೆಗಳ ಆಲೋಚನೆಯಿಲ್ಲ. ಮಠದಲ್ಲಿ ಈಗ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕಡೆ ಪ್ರಥಮ ಆದ್ಯತೆ ನೀಡಲಾಗುವುದು. ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪನವರು ಶಿವಕುಮಾರ ಸ್ವಾಮೀಜಿಯವರ ಕಂಚಿನ ಪುತ್ಥಳಿಯನ್ನು ಮಠಕ್ಕೆ ನೀಡಿದ್ದಾರೆ. ಅದನ್ನು ವಸ್ತು ಪ್ರದರ್ಶನ ಆವರಣದಲ್ಲಿನ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ ಪ್ರತಿಷ್ಠಾಪಿಸಲಾಗುವುದು. ಹೀಗೆ ಇನ್ನಿತರ ಹಲವು ಕಾರ್ಯ ಯೋಜನೆಗಳನ್ನು ಮಾಡುವ ಗುರಿ ಹೊಂದಿದ್ದೇನೆ.

ಶ್ರೀಗಳು ಉಪಯೋಗಿಸುತ್ತಿದ್ದ ವಸ್ತುಗಳನ್ನು ಏನು ಮಾಡುತ್ತಿರಿ?
– ಶ್ರೀಗಳ ಆಶೀರ್ವಾದ ಪ್ರತಿಯೊಬ್ಬರಿಗೂ ದೊರಕಬೇಕು. ಹೀಗಾಗಿ, ಶ್ರೀಗಳು ತಮ್ಮ ಬದುಕಿನಲ್ಲಿ ಉಪಯೋಗಿಸುತ್ತಿದ್ದ ಎಲ್ಲ ವಸ್ತುಗಳನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು.

ಶ್ರೀಗಳ ಗದ್ದುಗೆಯನ್ನು ಯಾವ ರೀತಿ ನಿರ್ಮಾಣ ಮಾಡಬೇಕೆಂಬ ಉದ್ದೇಶ ಹೊಂದಿದ್ದೀರಿ?
– ಶ್ರೀಗಳ ಶಿವೈಕ್ಯ ಗದ್ದುಗೆಗೆ ಪ್ರತಿನಿತ್ಯ ಅಭಿಷೇಕ, ಪೂಜಾದಿಗಳು ನಡೆಯುತ್ತಿವೆ. ಭಕ್ತರಿಗೆ ಬೆಳಗಿನಿಂದ ಸಂಜೆಯವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಶ್ರೀಗಳ ಗದ್ದುಗೆ ನಿರ್ಮಾಣ ಮಾಡುವ ಕುರಿತು ಈಗಾಗಲೇ ಚರ್ಚಿಸಲಾಗಿದೆ. ವಿವಿಧ ಕಡೆ ಭೇಟಿ ನೀಡಿ, ಗದ್ದುಗೆ ವಿನ್ಯಾಸ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಮುಂದೆ ಆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ.

Advertisement

ಶ್ರೀಗಳ ಸ್ಮಾರಕ ನಿರ್ಮಾಣ ಮಾಡುವ ಉದ್ದೇಶವಿದೆಯೇ?
– ಶ್ರೀಗಳ ಸ್ಮಾರಕ ನಿರ್ಮಾಣ ಕುರಿತಂತೆ ಭಕ್ತರು ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಬಗ್ಗೆ ನಾನು ಏನೂ ಹೇಳುವುದಿಲ್ಲ. ಭಕ್ತರ ಅಭಿಪ್ರಾಯಕ್ಕೆ ನಮ್ಮ ಮನ್ನಣೆ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next