ಉತ್ತರಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಹೆಗಡೆ ಗ್ರಾಮದಲ್ಲಿ ಶ್ರೀ ಶಾಂತಿಕಾಂಬಾ ಎಂಬ ಅತ್ಯಂತ ಪ್ರಾಚೀನ ದೇವಾಲಯವಿದೆ. ಕುಮಟಾ ನಗರದಿಂದ ಹೆಗಡೆ, ಕಾಗಾಲ ರಸ್ತೆಯಲ್ಲಿರುವ ಈ ದೇಗುಲದ ಕಾಂತಿಕಾ ಪರಮೇಶ್ವರಿ ಹಲವು ಕುಟುಂಬಗಳ ಪಾರಂಪರಿಕ ಆರಾಧ್ಯ ದೈವ.
ಸುಮಾರು 800 ವರ್ಷಗಳ ಇತಿಹಾಸವಿರುವ ಈ ದೇವಾಲಯದ ಬಲಭಾಗದಲ್ಲಿ ಇತ್ತೀಚೆಗೆ ಶಾಸನವೊಂದು ದೊರೆತಿದೆ. ಇದನ್ನು ದತ್ತಿ ಶಾಸನವೆಂದು ಅಂದಾಜಿಸಲಾಗಿದೆ.
ಪ್ರಾಚೀನ ಕಾಲದಲ್ಲಿ ಈ ಸ್ಥಳ ಕಾಡು ಪ್ರದೇಶದಿಂದ ಕೂಡಿತ್ತು. ಮಹಾ ತಪಸ್ವಿಯೊಬ್ಬರು ಇಲ್ಲಿ ತಪಸ್ಸು ನಡೆಸುತ್ತಿದ್ದರು ಎನ್ನಲಾಗಿದೆ. ಇದೇ ಸ್ಥಳದ ಸ್ವಲ್ಪ ಅಂತರದಲ್ಲಿ ಚಿಕ್ಕ ಹುತ್ತವೊಂದಿತ್ತು. ಅಲ್ಲಿ ನಿತ್ಯ ಸಂಜೆ ಘಂಟಾನಾದ ಮತ್ತು ಜ್ಯೋತಿ ಬೆಳಗುತ್ತಿತ್ತು. ತಪೋನಿರತ ಮುನಿಗಳು ಈ ಬಗ್ಗೆ ಪರಿಶೀಲಿಸಿದಾಗ ಹುತ್ತದೊಳಗೆ ದೇವಿಯ ಶಿಲಾ ಮೂರ್ತಿ ಇರುವುದು ಗೋಚರವಾಯಿತು. ತನ್ನನ್ನು ಆರಾಧಿಸಿದರೆ ವಿಶಿಷ್ಟ ಶಕ್ತಿ ಪ್ರಾಪ್ತವಾಗುತ್ತದೆ ಎಂದು ಮುನಿಗಳಿಗೆ ಪ್ರೇರಣೆ ದೊರೆಯಿತಂತೆ. ಅದರಂತೆ ಮುನಿಗಳು ಹುತ್ತವನ್ನು ಬಿಡಿಸಿ ದೇವರ ಮೂರ್ತಿಯನ್ನು ನಿತ್ಯ ಪೂಜಿಸಲಾರಂಭಿಸಿದರು. ದೇವರ ಮೂರ್ತಿಯ ಲಕ್ಷಣಗಳನ್ನು ಆಧರಿಸಿ ಇದು ಶ್ರೀಶಾಂತಿಕಾ ಪರಮೇಶ್ವರಿ ದೇವಿ ಎಂದು ಮುನಿಗಳು ಗುರುತಿಸಿದರು. ಅಲ್ಲಿಂದ ಆರಂಭಗೊಂಡು ಈ ಸ್ಥಳವು ಕ್ರಮೇಣ ಸ್ಥಳೀಯ ಭಕ್ತರಿಂದ ಪೂಜೆಗೊಳ್ಳುತ್ತಾ ಚಿಕ್ಕ ಗುಡಿಯ ರೂಪ ಪಡೆಯಿತು. ಇಲ್ಲಿ ಪ್ರತಿ ವರ್ಷ ಫೆಬ್ರವರಿ 2 ನೇ ವಾರ ವೈಭವದ ರಥೋತ್ಸವ ನಡೆಯುತ್ತದೆ. ಇದು ಸುಮಾರು 250 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪದ್ಧತಿ.
1968 ರಿಂದ ಈ ವರೆಗೂ ಅಂದರೆ 49 ವರ್ಷಗಳಿಂದ ನಾಗೇಶ ಶಾನಭಾಗ ಈ ದೇವಾಲಯದ ಮೊಕ್ತೇಸರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1993 ರಲ್ಲಿ ದೇವಾಲಯದ ಕಟ್ಟಡ ನವೀಕರಿಸಿ ಶಿಖರ ಕಲಾ ಉತ್ಸವ ನಡೆಸಲಾಯಿತು. 2013 ರಲ್ಲಿ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳ ಸಾನಿಧ್ಯದಲ್ಲಿ ಪಾಣಿ ಪೀಠ ದುರಸ್ತಿ ಮತ್ತು 2014 ರಲ್ಲಿ ಏಪ್ರಿಲ್ 17 ರಿಂದ 21 ರ ವರೆಗೆ 5 ದಿನಗಳ ಕಾಲ ಪುನರ್ ಪ್ರತಿಷ್ಠಾಪನಾ ಮಹೋತ್ಸವ ನಡೆಸಲಾಯಿತು.
ಶ್ರಾವಣ ಮಾಸದಲ್ಲಿ ನಿತ್ಯ ಬೆಳಗ್ಗೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಮತ್ತು ಮಹಾ ಪೂಜೆ ನಡೆಸಲಾಗುತ್ತದೆ. ಆಶ್ವಿಜ ಮಾಸದಲ್ಲಿ ಪಾಡ್ಯದಿಂದ ನವಮಿಯ ವರೆಗೆ 9 ದಿನಗಳ ಕಾಲ ವೈಭವದ ನವರಾತ್ರಿ ಉತ್ಸವ, ನಿತ್ಯ ಭಜನೆ, ಮಹಾ ಪೂಜೆ ನಡೆಸಲಾಗುತ್ತದೆ. ವಿಜಯದಶಮಿಯಂದು ಪಲ್ಲಕ್ಕಿ ಉತ್ಸವ ಸೀಮೋಲ್ಲಂಘನ ,ಬನ್ನಿ ಉತ್ಸವ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ನಿತ್ಯ ಸಂಜೆ ಭಕ್ತರಿಂದ ಸರದಿ ಪ್ರಕಾರ ದೀಪೋತ್ಸವ ಕೊನೆಯ ದಿನ ಅಮಾವಾಸ್ಯೆಯಂದು ದೇವರಿಗೆ ವನಭೋಜನ ಉತ್ಸವ ನಡೆಸಲಾಗುತ್ತದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ವಿಶೇಷ ಪೂಜೆ ನಡೆಯುತ್ತದೆ.
ಎನ್.ಡಿ.ಹೆಗಡೆ ಆನಂದಪುರಂ