ನವಿಮುಂಬಯಿ: ಮಹಾರಾಷ್ಟ್ರ ಸಾಧು- ಸಂತರ ನೆಲೆಬೀಡಾಗಿದೆ. ನಮ್ಮನ್ನು ಸಾಕು ಸಲಹಿದ ನಮ್ಮ ಚಿಕ್ಕಮ್ಮನ ಹಾಗೆ ಈ ಮಹಾರಾಷ್ಟ್ರ. ನಾವು ಈ ಕರ್ಮಭೂಮಿಯಲ್ಲೂ ಒಳ್ಳೆಯ ಕಾರ್ಯಗಳನ್ನು ಮಾಡಿ ಕೀರ್ತಿ ತರಬೇಕು. ನಮ್ಮ ದೇವಾಲಯ ಸ್ಥಾಪನೆಗೊಂಡು 45 ವರ್ಷವಾಗಿದೆ. ಹಿಂದೆ ವರ್ಷಕ್ಕೊಮ್ಮೆ ನವರಾತ್ರಿ ಉತ್ಸವ ಆಚರಿಸುತ್ತಿದ್ದು, ಒಂದು ದಿನ ಅನ್ನಸಂತರ್ಪಣೆ ನಡೆಯುತ್ತಿತ್ತು. ಈ ದೇವಾಲಯದಲ್ಲಿ ಅನ್ನದಾನ, ವಿದ್ಯಾದಾನ, ಯಕ್ಷಗಾನ ಪ್ರದರ್ಶನ ಇತ್ಯಾದಿಗಳು ನಿರಂತರವಾಗಿ ಪ್ರಸ್ತುತ ದಿನಗಳಲ್ಲಿ ನಡೆಯುತ್ತಿದೆ. ಅಲ್ಲದೆ ಪ್ರತಿಯೊಂದು ಹಬ್ಬವನ್ನೂ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ನಮ್ಮ ದೇವಾಲಯದ ನೂತನ ಕಟ್ಟಡ ನಿರ್ಮಿಸಿದ ಆನಂತರ ಪ್ರತೀ ಶುಕ್ರವಾರ ಅನ್ನದಾನ ನೀಡುವ ಯೋಜನೆಯಿದೆ. ನಮ್ಮ ಸಮಿತಿಯ ಪದಾಧಿಕಾರಿಗಳು ಪ್ರತಿಯೊಂದು ಕಾರ್ಯದಲ್ಲೂ ಒಳ್ಳೆಯ ಸಹಕಾರ ನೀಡುತ್ತಿದ್ದಾರೆ. ನಮ್ಮ ಮುಂದಿನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ತಾವೆಲ್ಲರೂ ಸಹಕರಿಸುವಿರೆಂಬ ಭರವಸೆ ನನಗಿದೆ. ನಿಮಗೆಲ್ಲರಿಗೂ ತಾಯಿ ಮೂಕಾಂಬಿಕೆಯು ಆಯು ರಾರೋಗ್ಯ ಭಾಗ್ಯವನ್ನು ನೀಡಿ ಸಲಹಲಿ ಎಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅಭಿಪ್ರಾಯಿಸಿದರು.
ಸೆ. 10ರಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಸಭಾಂಗಣದಲ್ಲಿ ನಡೆದ ಮಂದಿರದ ಆಡಳಿತ ಸಮಿತಿ ಶ್ರೀ ಸಂತೋಷಿ ಮಾತಾ ದೇವಾಲಯ ಟ್ರಸ್ಟಿನ 27 ನೇ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂದಿರದ ಅಭಿವೃದ್ಧಿಗೆ ಎಲ್ಲರ ಸಹಕಾರ ಬಯಸಿದರು.
ಸಮಿತಿಯ ಪದಾಧಿಕಾರಿಗಳು ದೀಪಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು. ಮಹಿಳಾ ವಿಭಾಗದ ಸದಸ್ಯೆಯರು ಪ್ರಾರ್ಥನೆಗೈದರು. ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್. ಕೋಟ್ಯಾನ್ ಅವರು ಸ್ವಾಗತಿಸಿ, ಗತ ಸಭೆಯ ವರದಿ ಹಾಗೂ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಶೇಖರ್ ವಿ. ದೇವಾಡಿಗ ಅವರು 2016-2017 ನೇ ವಾರ್ಷಿಕ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟು ಮಂಜೂರು ಮಾಡಿಸಿಕೊಂಡರು. ಮೆಸಸ್ ಪಂಕಜ್ ಚಾಲಿಸಲ್ಗೆ ಆ್ಯಂಡ್ ಕಂಪೆನಿಯನ್ನು ಲೆಕ್ಕಪರಿಶೋಧಕರನ್ನಾಗಿ 2017-2018 ನೇ ಸಾಲಿಗೆ ನೇಮಿಸಲಾಯಿತು.
ಸಭಿಕರ ಪರವಾಗಿ ಉದ್ಯಮಿ ಕೆ. ಡಿ. ಶೆಟ್ಟಿ ಅವರು ಮಾತನಾಡಿ, ಒಂದು ಸಂಸ್ಥೆ ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿಯ ಪಥದತ್ತ ಸಾಗುತ್ತಿದ್ದರೆ, ಅದಕ್ಕೆ ನಾವು ಸಲಹೆ ನೀಡುವ ಅಗತ್ಯವಿರುವುದಿಲ್ಲ. ಆದರೆ ವರ್ಷಕ್ಕೊಮ್ಮೆ ನಮಗೆ ಸಿಗುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಕಾರ್ಯದರ್ಶಿಯವರ ವಾರ್ಷಿಕ ವರದಿಯನ್ನು ನೋಡುವಾಗಲೇ ಗೊತ್ತಾಗುತ್ತದೆ ಇಲ್ಲಿ ಎಷ್ಟು ಒಳ್ಳೆಯ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು. ಅದಕ್ಕೆ ಕಾರಣ ಈ ಸಮಿತಿಯ ಸದಸ್ಯರ ಒಗ್ಗಟ್ಟು. ನನಗೂ ದೇವಿಯ ಸೇವೆ ಮಾಡುವ ಭಾಗ್ಯ ಸಿಕ್ಕಿದೆ. ದೇವಿಗೆ ಹೂವಿನ ಎಸಳುಗಳನ್ನು ನೀಡಿದ್ದೆ. ದೇವಿ ನನಗೆ ಹೂವನ್ನು ದಯಪಾಲಿಸಿದ್ದಾಳೆ. ಈ ಸಂಸ್ಥೆಯ ಮುಂದಿನ ಕಟ್ಟಡ ನಿರ್ಮಾಣ ಯೋಜನೆಗೆ ನಾವೆಲ್ಲರು ಸಹಕರಿಸಬೇಕು. ಆದಷ್ಟು ಬೇಗ ಕಟ್ಟಡ ನಿರ್ಮಾಣಗೊಂಡು ಮುಂದಿನ ದಿನಗಳಲ್ಲಿ ಮಹಾಸಭೆಯು ಹವಾನಿಯಂತ್ರಿತ ಸಭಾಂಗಣದಲ್ಲಿ ನಡೆಯುವಂತಾಗಲಿ ಎಂದು ನುಡಿದು ಶುಭಹಾರೈಸಿದರು.
ಸದಸ್ಯರುಗಳಾದ ಧೀರಾಜ್ ಶೆಟ್ಟಿ, ವಸಂತ್ ಕದಂ, ಮೋಹನ್ ಬಲ್ಯಾಯ, ವಿದ್ಯಾ ಅಂಚನ್, ರಾಧಾ ಎಸ್. ಪೂಜಾರಿ, ವಸಂತಿ ಶೆಟ್ಟಿ, ಜಗದೀಶ್ ಶೆಟ್ಟಿ ಮೊದಲಾದವರು ಮಾತನಾಡಿ ಸೂಕ್ತ ಸಲಹೆ ಸೂಚನೆ ನೀಡಿದರು. ಸುರೇಶ್ ಕೋಟ್ಯಾನ್ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಮಹಾಸಭೆಯ ಆನಂತರ ದೇವಾಲಯದ ಅಂಗಸಂಸ್ಥೆ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಮಂಡಳದ 14 ನೇ ವಾರ್ಷಿಕ ಮಹಾಸಭೆ ಜರಗಿತು.
ಆನಂತರ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಅಣ್ಣಿ ಸಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಉಪಾಧ್ಯಕ್ಷರುಗಳಾದ ನಂದಿಕೂರು ಜಗದೀಶ್ ಶೆಟ್ಟಿ, ಕೆ. ಎಂ. ಶೆಟ್ಟಿ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ್ ಶೆಟ್ಟಿ, ಸಮಿತಿಯ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಶ್ರೀ ಮೂಕಾಂಬಿಕಾ ಚಾರಿಟೆಬಲ್ ಮಂಡಳ, ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆ, ಉಸಮಿತಿ ಸದಸ್ಯರು, ಮಹಿಳಾ ಮಂಡಳಿಯ ಸದಸ್ಯೆಯರು ಪಾಲ್ಗೊಂಡು ಸಹಕರಿಸಿದರು.