Advertisement
ವಿಷ್ಣುನ ಏಳನೆಯ ಅವತಾರವೇ ಶ್ರೀರಾಮ. “ರಮಯತಿ ಇತಿ ರಾಮಃ’ ಎಂದರೆ ದರ್ಶನಮಾತ್ರದಿಂದಲೇ ಮನಸ್ಸಿಗೆ ಸಂತೋಷ ಉಂಟುಮಾಡುವವನು ಎಂದರ್ಥ.
Related Articles
Advertisement
ರಾಮವಾಕ್ಯ, ರಾಮಬಾಣ, ರಾಮರಾಜ್ಯ ಎಂಬ ಪದಗಳು ನಮ್ಮ ದಿನಬಳಕೆಯ ಭಾವಕೋಶದ ಮಾತುಗಳಾಗಿವೆ. ಕೊಟ್ಟ ಮಾತನ್ನು ಉಳಿಕೊಳ್ಳುವುದು ರಾಮವಾಕ್ಯ, ತೊಟ್ಟ ಬಾಣ ಹುಸಿ ಹೋಗದಿರುವುದು ರಾಮಬಾಣ, ಎಲ್ಲರೂ ಎಲ್ಲ ರೀತಿಯಲ್ಲೂ ಸುಖೀಗಳಾಗಿರುವ ಪ್ರದೇಶವೇ ರಾಮರಾಜ್ಯ. ಮಹಾತ್ಮಾ ಗಾಂಧೀಜಿಯವರು ಕೂಡ ನಮ್ಮ ದೇಶ ರಾಮರಾಜ್ಯವಾಗಬೇಕೆಂದು ಬಯಸಿದ್ದುದು ಇತಿಹಾಸಪ್ರಸಿದ್ಧ. ಹೀಗೆ ಮಾನವವಾಗಿದ್ದೂ ದೇವನಾದ, ಮೌಲ್ಯಗಳ ಖನಿಯಾದ ಶ್ರೀರಾಮಚಂದ್ರ ಇಡೀ ಭರತಖಂಡದ ಆರಾಧ್ಯದೈವವಾದದ್ದು ಅಚ್ಚರಿಯಲ್ಲ.
ದಶರಥನ ರಾಮ, ಕೌಸಲ್ಯೆಯ ಮುದ್ದಿನ ರಾಮಭದ್ರ, ಕೈಕೇಯಿಗೆ ಅತ್ಯಂತ ಪ್ರೀತಿಪಾತ್ರನಾಗಿದ್ದ ರಾಮಚಂದ್ರ, ಕುಲಗುರು ವಸಿಷ್ಠರಿಗೆ ಬ್ರಹ್ಮತತ್ತ್ವ ಸ್ವರೂಪಿಯಾದ ವೇಧಸ್, ಪುರಜನರ ಪಾಲಿನ ರಘುನಾಥ, ಸೀತೆಯ ಪಾಲಿಗೆ ನಾಥ, ಮಿಥಿಲಾನಗರಿಯವರಿಗೆ ಸೀತಾಪತಿ – ಹೀಗೆ ವಿವಿಧ ರೀತಿ ಯಲ್ಲಿ ಶ್ರೀರಾಮಚಂದ್ರನು ಜನರಿಗೆ ಗೋಚರಿಸುತ್ತಿದ್ದ ಎಂಬ ಚಮತ್ಕಾರಿಕ ಸಂಸ್ಕೃತ ಶ್ಲೋಕವೊಂದು ಸುಪ್ರಸಿದ್ಧವಾಗಿದೆ.
ರಾಮ ಒಳ್ಳೆಯ ಮಗ, ಒಳ್ಳೆಯ ಅಣ್ಣ, ಒಳ್ಳೆಯ ಸ್ನೇಹಿತ, ಒಳ್ಳೆಯ ಪ್ರಭು, ಒಳ್ಳೆಯ ಶಿಷ್ಯ – ಒಳ್ಳೆಯದೆಂಬ ಯಾವ ಯಾವ ಗುಣಗಳಿವೆಯೋ ಆ ಎಲ್ಲದರ ರತ್ನಾಕರ! ಒಳ್ಳೆಯ ಶತ್ರು ಕೂಡ – ರಾವಣನ ವಧೆಯ ಸಂದರ್ಭದಲ್ಲಿ, ರಾವಣನಿಗೆ ಇನ್ನೂ ಪ್ರಾಣವಿರುವಾಗಲೇ, ಲಕ್ಷ್ಮಣನನ್ನು ಕರೆದು ಅವನಿಂದ ಧರ್ಮೋಪದೇಶ ಪಡೆಯುವಂತೆ ಆದೇಶಿಸುತ್ತಾನೆ; “ಮರಣಾಂತಾನಿ ವೈರಾಣಿ’ ಎಂಬ ಅವನ ಆಗಿನ ಮಾತು ಎಲ್ಲ ಕಾಲಕ್ಕೂ ಆದರ್ಶ. ವಿಭೀಷಣನಿಗೆ ಅಣ್ಣನ ಅಪರಕರ್ಮಗಳನ್ನು ಶ್ರದ್ಧೆಯಿಂದ ಮಾಡುವಂತೆ ಸೂಚಿಸುತ್ತಾನೆ ಕೂಡ.
ರಾಮನ ವಿಷಯದಲ್ಲಿ ನಮಗೆ ಇಂಡೋನೇಷ್ಯಾದ ಸೋದರರು ಬಹುಪಾಲು ಆದರ್ಶವಾದಾರು! ಬೃಹದ್ಭಾರತದ ಭಾಗವಾಗಿದ್ದ ಆ ದೇಶ ಕಾಲಾಂತರದಲ್ಲಿ ಇಸ್ಲಾಂ ರಾಷ್ಟ್ರವಾಯಿತು; ಆದರೆ ಅದರ ಸಾಂಸ್ಕೃತಿಕ ಅಸ್ಮಿತೆಯಲ್ಲಿ ಇನ್ನೂ ಹಿಂದೂ ದೇವರುಗಳು, ಪುರಾಣೇತಿಹಾಸಗಳು ಬದುಕಿವೆ. ಇಂಥದೊಂದು ಮನಃಸ್ಥಿತಿ ಸಾಧ್ಯವಾದಾಗ ಎಲ್ಲರ ಪಾಲಿನ ರಾಮರಾಜ್ಯ ಉದಯಿಸಬಲ್ಲುದು.
ತಡವಾಗಿಯಾದರೂ ಸರಿಯೆ, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗಿರುವುದು ಭಾರತೀಯ ರೆಲ್ಲರಿಗೂ ಅತ್ಯಂತ ಅಭಿಮಾನದ, ಸಂತೋಷದ ಸಂಗತಿ. ಶ್ರೀರಾಮನಾದರೂ ತನ್ನ ಜೀವಿತಕಾಲದಲ್ಲಿ ಹದಿನಾಲ್ಕು ವರ್ಷ ಕಾಲ ವನವಾಸಕ್ಕೆ ಹೋಗಬೇಕಾಯಿತು. ಹಾಗೆಯೇ, ಶತಶತ ಮಾನಗಳ ಹಿಂದೆಯೇ ಆಗಬೇಕಾಗಿದ್ದ ರಾಮಮಂದಿರ ನಿರ್ಮಾಣಕಾರ್ಯ ಈಗಲಾದರೂ ಸಾಕಾರಗೊಂಡಿರುವುದು ಎಲ್ಲರಿಗೂ ಹರ್ಷವನ್ನು ಉಂಟುಮಾಡಿದೆ.
ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು , ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ ಸುತ್ತೂರು ಮಠ, ಮೈಸೂರು