ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಹತ್ತು ದಿನಗಳಿಂದ ದಾಖಲೆ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಮೇ 13ರಂದು ಕೂಡ ಭಾರೀ ಭಕ್ತಸಾಗರ ಕಂಡುಬಂತು.
ಕರ್ನಾಟಕ ಮತ್ತು ನೆರೆಯ ರಾಜ್ಯಗಳಿಂದ 15 ಸಾವಿರಕ್ಕೂ ಮಿಕ್ಕಿ ಭಕ್ತರು ಶುಕ್ರವಾರ ಶ್ರೀದೇವಿಯ ದರ್ಶನಕ್ಕೆ ಆಗಮಿಸಿದ್ದಾರೆ.
ಮುಖ್ಯ ರಸ್ತೆ ದಾಟಿದ ಸರತಿ ಸಾಲು ಶುಕ್ರವಾರ ಬೆಳಗ್ಗಿನಿಂದ ಸಂಜೆ ತನಕವೂ ದರ್ಶನಕ್ಕೆ ಉದ್ದನೆಯ ಸರತಿಯ ಸಾಲು ಕಂಡುಬಂದಿತ್ತು. ಭಕ್ತರ ಸರತಿ ಸಾಲು ಪೇಟೆಯ ಮುಖ್ಯ ರಸ್ತೆಯನ್ನು ದಾಟಿತ್ತು. ನೂಕುನುಗ್ಗಲು ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿತ್ತು.
ಬಿಗಿ ಭದ್ರತೆ
ಈ ನಡುವೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಿಂಗಾಪುರದ ಗೃಹ ಸಚಿವ ಕಾಶಿ ವಿಶ್ವನಾಥನ್ ಮುರುಗನ್ ಅವರು ಮೇ 14ರಂದು ಬೆಳಗ್ಗೆ 9.15ಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನಕ್ಕೆ ಆಗಮಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ದೇಗುಲ ಸಹಿತ ಸುತ್ತಮುತ್ತ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಚಿವರ ಆಗಮನ ಮತ್ತು ನಿರ್ಗಮನದ ವರೆಗೆ ವಾಹನ ಸಂಚಾರ, ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.