ಮ್ಯಾಂಚೆಸ್ಟರ್: ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ಆರಂಭವಾಗಿದೆ. ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಪ್ರವಾಸಿ ಶ್ರೀಲಂಕಾ 236 ರನ್ ಗಳಿಸಿದೆ. ಮೊದಲ ದಿನದಾಟದಲ್ಲಿ ಲಂಕಾ ನಾಯಕ ಧನಂಜಯ ಡಿಸಿಲ್ವಾ (Dhananjaya de Silva) ಮತ್ತು ಮಿಲಾನ್ ರತ್ನನಾಯಕೆ (Milan Rathnayake) ಅವರು ಬ್ಯಾಟಿಂಗ್ ನಲ್ಲಿ ಮಿಂಚಿದರು.
ಈ ಪಂದ್ಯದ ವೇಳೆ ಮಿಲಾನ್ ರತ್ನನಾಯಕೆ ಅವರು 41 ವರ್ಷಗಳ ಹಿಂದಿನ ಟೆಸ್ಟ್ ದಾಖಲೆಯೊಂದನ್ನು ಅಳಿಸಿ ಹಾಕಿದರು. 1983ರಲ್ಲಿ ಭಾರತೀಯ ಆಟಗಾರ ಬಲ್ವಿಂದರ್ ಸಂಧು ಅವರು ಬರೆದಿದ್ದ ದಾಖಲೆಯನ್ನು ಅಳಿಸಿದ ಮಿಲಾನ್ ರತ್ನನಾಯಕೆ ತಾನು ದಾಖಲೆ ಪುಟ ಸೇರಿದರು.
ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ರತ್ನನಾಯಕೆ, 9ನೇ ಕ್ರಮಾಂಕದಲ್ಲಿ ಆಡಲಿಳಿದು 72 ರನ್ ಗಳಿಸಿದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 9 ಅಥವಾ ಅದಕ್ಕಿಂತ ಕೆಳ ಕ್ರಮಾಂಕದ ಬ್ಯಾಟರ್ ಒಬ್ಬ ಗಳಿಸಿದ ಅತಿ ಹೆಚ್ಚಿನ ಸ್ಕೋರ್ ಇದಾಗಿದೆ. 1983ರಲ್ಲಿ ಭಾರತದ ಬಲ್ವಿಂದರ್ ಸಂಧು ಅವರು ಹೈದರಾಬಾದ್ ನಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ದ ಪಂದ್ಯದಲ್ಲಿ 71 ರನ್ ಗಳಿಸಿದ್ದರು. ಇದೀಗ 41 ವರ್ಷಗಳ ಬಳಿಕ ಈ ದಾಖಲೆಯನ್ನು ಮಿಲಾನ್ ರತ್ನನಾಯಕೆ ಮುರಿದಿದ್ದಾರೆ.
ಇಂಗ್ಲೆಂಡ್ ನ ಬಿಗು ಬೌಲಿಂಗ್ ದಾಳಿಗೆ ಬೆದರಿದ ಲಂಕಾ ಒಂದು ಹಂತದಲ್ಲಿ 113 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ರತ್ನನಾಯಕೆ ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದರು. ಧನಂಜಯ ಡಿಸಿಲ್ವಾ ಜತೆ 62 ರನ್ ಜತೆಯಾಟ, ವಿಶ್ವ ಫರ್ನಾಂಡೊ ಜತೆಗೆ 50 ರನ್ ಜೊತೆಯಾಟವಾಡಿದರು.
ಇಂಗ್ಲೆಂಡ್ ವೇಗಿಗಳಾದ ಕ್ರಿಸ್ ವೋಕ್ಸ್ (3/32) ಮತ್ತು ಗಸ್ ಅಟ್ಕಿನ್ಸನ್ (2/48) ಶ್ರೀಲಂಕಾದ ಅಗ್ರ ಕ್ರಮಾಂಕದ ಪತನದಲ್ಲಿ ಗಣನೀಯ ಪಾತ್ರವನ್ನು ವಹಿಸಿದರು.