Advertisement

ತ್ರಿಕೋನ ಟಿ20 ಸರಣಿ: ಬಾಂಗ್ಲಾದೆದುರು ಪ್ರಾಬಲ್ಯ: ಲಂಕಾ ಗುರಿ

07:30 AM Mar 10, 2018 | |

ಕೊಲಂಬೊ: ಆತಿಥೇಯ ಶ್ರೀಲಂಕಾ ತಂಡವು ನಿದಹಾಸ್‌ ಟ್ವೆಂಟಿ20 ಟ್ರೋಫಿ ತ್ರಿಕೋನ ಸರಣಿಯ ಶನಿವಾರದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದ್ದು ಗೆಲುವಿನ ಗುರಿ ಇಟ್ಟುಕೊಂಡಿದೆ. 

Advertisement

ಕೂಟದ ಆರಂಭಿಕ ಪಂದ್ಯದಲ್ಲಿ ಬಲಿಷ್ಠ ಭಾರತವನ್ನು ಸೋಲಿಸಿ ಅಚ್ಚರಿಗೊಳಿಸಿದ್ದ ಶ್ರೀಲಂಕಾ ತಂಡವು ಬಾಂಗ್ಲಾ ವಿರುದ್ಧವೂ ಗೆಲುವಿನ ಫೇವರಿಟ್‌ ತಂಡವಾಗಿದೆ. ಆದರೆ ಬಾಂಗ್ಲಾ ಗುರುವಾರ ನಡೆದ ಪಂದ್ಯದಲ್ಲಿ ಭಾರತಕ್ಕೆ ಶರಣಾಗಿತ್ತು. ಹಾಗಾಗಿ ಬಾಂಗ್ಲಾ ಕೂಡ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸುವ ಸಾಧ್ಯತೆಯಿದೆ.

ಬಾಂಗ್ಲಾದೇಶ ವಿರುದ್ಧದ ಶ್ರೀಲಂಕಾದ ಇತ್ತೀಚೆಗಿನ ದಾಖಲೆ ಅತ್ಯುತ್ತಮವಾಗಿದೆ. ವಿದೇಶದಲ್ಲಿ ನಡೆದ ಟೆಸ್ಟ್‌ ಮತ್ತು ಟಿ20 ಸರಣಿಯಲ್ಲಿ ಬಾಂಗ್ಲಾವನ್ನು ಸೋಲಿಸಿದ್ದ ಶ್ರೀಲಂಕಾ ತಂಡವು ಜಿಂಬಾಬ್ವೆ ಒಳಗೊಂಡ ತ್ರಿಕೋನ ಸರಣಿಯ ಫೈನಲ್‌ನಲ್ಲೂ ಬಾಂಗ್ಲಾವನ್ನು ಮಣಿಸಿತ್ತು. ಇದೇ ಪ್ರಾಬಲ್ಯವನ್ನು ನಿದಹಾಸ್‌ ಸರಣಿಯಲ್ಲೂ ಮುಂದುವರಿಸುವ ಆತ್ಮವಿಶ್ವಾಸವನ್ನು ಶ್ರೀಲಂಕಾ ತಂಡ ಹೊಂದಿದೆ.

ಭಾರತ ವಿರುದ್ಧ ಶ್ರೀಲಂಕಾದ ಆಟಗಾರರು ಭರ್ಜರಿ ಆಟದ ಪ್ರದರ್ಶನ ನೀಡಿದ್ದರು. ಕುಸಲ್‌ ಪೆರೆರ ಅವರ ಅಮೋಘ ಆಟದಿಂದಾಗಿ ಶ್ರೀಲಂಕಾ ತಂಡವು ಗೆಲುವಿನ 175 ರನ್‌ ಗುರಿಯನ್ನು ಸುಲಭವಾಗಿ ತಲುಪಿತ್ತು. ತಂಡದ ಬೌಲಿಂಗ್‌ ಕೂಡ ಉತ್ತಮವಾಗಿತ್ತು. ದುಷ್ಯಂತ ಚಮೀರ ಮತ್ತು ಜೀವನ್‌ ಮೆಂಡಿಸ್‌ ದಾಳಿಯನ್ನು ನಿಭಾಯಿಸಲು ಭಾರತೀಯ ಆಟಗಾರರು ಒದ್ದಾಡಿದರು.

ಭಾರತ ವಿರುದ್ಧದ ಪಂದ್ಯದಲ್ಲಿ ಆರಂಭಿಕರಾದ ಕುಸಲ್‌ ಮೆಂಡಿಸ್‌ ಮತ್ತು ದನುಷ್ಕ ಗುಣತಿಲಕ ಸ್ವಲ್ಪಮಟ್ಟಿಗೆ ಒದ್ದಾಡಿದರು. ಆದರೆ ಬಾಂಗ್ಲಾ ವಿರುದ್ಧ ಅವರಿಂದ ಉತ್ತಮ ಜತೆಯಾಟವನ್ನು ನಿರೀಕ್ಷಿಸಲಾಗಿದೆ. 

Advertisement

ಭಾರತ ವಿರುದ್ಧ ಗೆಲುವು ಸಾಧಿಸಿದ್ದರಿಂದ ಆಟಗಾರರಲ್ಲಿ ಹೊಸ ಚೈತನ್ಯ ಮೂಡಿದೆ. ಕೋಚ್‌ ಚಂದಿಕಾ ಹತುರಸಿಂಘ ಅವರ ಮಾರ್ಗದರ್ಶನದಿಂದ ಆಟಗಾರರು ಉತ್ತಮ ನಿರ್ವಹಣೆ ನೀಡುವಂತಾಗಿದೆ ಎಂದು ಭಾರತ ವಿರುದ್ಧ ಗೆಲುವು ಸಾಧಿಸಿದ ಬಳಿಕ ನಾಯಕ ದಿನೇಶ್‌ ಚಂಡಿಮಾಲ್‌ ಪ್ರತಿಕ್ರಿಯೆ ನೀಡಿದ್ದರು. 

ಸತತ ಸೋಲಿನಿಂದಾಗಿ ಕಂಗೆಟ್ಟಿರುವ ಬಾಂಗ್ಲಾದೇಶ ಗೆಲುವಿನ ಹಸಿವಿನಲ್ಲಿದೆ. ಆಟಗಾರರು ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಲು ಒದ್ದಾಡುತ್ತಿದ್ದಾರೆ ಇದರಿಂದಾಗಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಗುತ್ತಿಲ್ಲ. ತಂಡದ ಪ್ರಮುಖ ತಾರೆ ಮತ್ತು ನಾಯಕ ಶಕಿಬ್‌ ಅಲ್‌ ಹಸನ್‌ ಅವರ ಅನುಪಸ್ಥಿತಿ ಬಾಂಗ್ಲಾ ತಂಡಕ್ಕೆ ದೊಡ್ಡ ಪೆಟ್ಟಾಗಿದೆ. 

ನಾವು ಇನ್ನಷ್ಟು ರನ್‌ ಗಳಿಸಬೇಕಾಗಿತ್ತು. ಸುಮಾರು 30 ರನ್‌ ಹೆಚ್ಚಿಗೆ ಗಳಿಸಿದ್ದರೆ ಒತ್ತಡ ಹೇರಬಹುದಿತ್ತು. ಅವರು (ಭಾರತ) ತಮ್ಮ ಯೋಜನೆಯನ್ನು ಚೆನ್ನಾಗಿ ಕಾರ್ಯಗತಗೊಳಿಸಿದ್ದಾರೆ ಎಂದು ಬಾಂಗ್ಲಾ  ನಾಯಕ ಮಹಮುದುಲ್ಲ ಹೇಳಿದ್ದಾರೆ.

ಶ್ರೀಲಂಕಾ: ದಿನೇಶ್‌ ಚಂಡಿಮಾಲ್‌ (ನಾಯಕ), ಸುರಂಗ ಲಕ್ಮಲ್‌, ಉಪುಲ್‌ ತರಂಗ, ದನುಷ್ಕ ಗುಣತಿಲಕ, ಕುಸಲ್‌ ಮೆಂಡಿಸ್‌, ದಸುನ್‌ ಶಣಕ, ಕುಸಲ್‌ ಜನಿತ್‌ ಪೆರೆರ, ತಿಸರ ಪೆರೆರ, ಜೀವನ್‌ ಮೆಂಡಿಸ್‌, ಐಸುರು ಉದಾನ, ಅಖೀಲ ಧನಂಜಯ, ಅಮಿಲ ಅಪೊನ್ಸೊ, ನುವಾನ್‌ ಪ್ರದೀಪ್‌, ದುಷ್ಯಂತ ಚಮೀರ, ಧನಂಜಯ ಡಿ’ಸಿಲ್ವ.

ಬಾಂಗ್ಲಾದೇಶ: ಮಹಮುದುಲ್ಲ (ನಾಯಕ), ತಮಿಮ್‌ ಇಕ್ಬಾಲ್‌, ಸೌಮ್ಯ ಸರ್ಕಾರ್‌, ಇಮ್ರುಲ್‌ ಕಯಿಸ್‌, ಮುಶ್ಫಿಕರ್‌ ರಹಿಂ, ಶಬ್ಬಿರ್‌ ರೆಹಮಾನ್‌, ಮುಸ್ತಾಫಿಜುರ್‌ ರೆಹಮಾನ್‌, ರುಬೆಲ್‌ ಹೊಸೈನ್‌, ಟಸ್ಕಿನ್‌ ಅಹ್ಮದ್‌, ಅಬು ಹೈದರ್‌, ಅಬು ಜಾಯೇದ್‌, ಅರಿಫ‌ುಲ್‌ ಹಕ್‌, ನಜ್ಮುಲ್‌ ಇಸ್ಲಾಂ, ನುರುಲ್‌ ಹಸನ್‌, ಮೆಹಿದಿ ಹಸನ್‌, ಲಿಟನ್‌ ದಾಸ್‌.

ಪಂದ್ಯ ಆರಂಭ: ರಾತ್ರಿ 7 ಗಂಟೆ (ಭಾರತೀಯ ಕಾಲಮಾನ)

Advertisement

Udayavani is now on Telegram. Click here to join our channel and stay updated with the latest news.

Next