Advertisement

T20 Cricket: ಬಾಂಗ್ಲಾದೇಶಕ್ಕೆ 86 ರನ್‌ ಸೋಲು… 2-0 ಮುನ್ನಡೆ; ಭಾರತಕ್ಕೆ ಟಿ20 ಸರಣಿ

08:24 AM Oct 10, 2024 | Team Udayavani |

ಹೊಸದಿಲ್ಲಿ: ಪ್ರವಾಸಿ ಬಾಂಗ್ಲಾದೇಶ ತಂಡದೆದುರಿನ ಎರಡನೇ ಟಿ20 ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ತನ್ನದಾಗಿಸಿಕೊಂಡಿದೆ. ಸರಣಿಯ ಮೂರನೇ ಪಂದ್ಯ ಹೈದರಾಬಾದ್‌ನಲ್ಲಿ ಅ. 12ರಂದು ನಡೆಯಲಿದೆ.

Advertisement

ಹೊಸದಿಲ್ಲಿಯಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಕಳಪೆ ಆಟದ ಬಳಿಕ ನಿತೀಶ್‌ ರೆಡ್ಡಿ, ರಿಂಕು ಸಿಂಗ್‌ ಅವರ ಉತ್ತಮ ಆಟದ ನೆರವಿನಿಂದ ಭಾರತ 9 ವಿಕೆಟಿಗೆ 221 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು. ಇದಕ್ಕುತ್ತರವಾಗಿ ಬಾಂಗ್ಲಾದೇಶವು ಭಾರತದ ಎಲ್ಲ ಬೌಲರ್‌ಗಳ ಬಿಗು ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 9 ವಿಕೆಟಿಗೆ 135 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲನ್ನು ಕಂಡಿತು. ಅನುಭವಿ ಮಹಮುದುಲ್ಲ ಮಾತ್ರ ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಿ 41 ರನ್‌ ಹೊಡೆದರು.

ಬ್ಯಾಟಿಂಗ್‌ನಲ್ಲಿ ಮಿಂಚಿದ ನಿತೀಶ್‌ ರೆಡ್ಡಿ ಬೌಲಿಂಗ್‌ನಲ್ಲಿ ಎರಡು ವಿಕೆಟ್‌ ಕಿತ್ತು ಗಮನ ಸೆಳೆದರು. ವರುಣ್‌ ಚಕ್ರವತಿ 19 ರನ್ನಿಗೆ 2 ವಿಕೆಟ್‌ ಪಡೆದರು
ಈ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ತಂಡವು ಆರಂಭದಲ್ಲಿ ನಿಧಾನಗತಿ ಯಲ್ಲಿ ಆಟವಾಡಿತು. ಆರಂಭಿಕರಾದ ಸಂಜು ಸ್ಯಾಮ್ಸನ್‌, ಅಭಿಷೇಕ್‌ ಶರ್ಮ ಮತ್ತು ನಾಯಕ ಸೂರ್ಯಕುಮಾರ್‌ ಯಾದವ್‌ ಉತ್ತಮವಾಗಿ ಆಡಲು ವಿಫ‌ಲರಾದರು. ಇದರಿಂದಾಗಿ ಮೊದಲ ಆರು ಓವರ್‌ಗಳ ಮುಕ್ತಾಯಕ್ಕೆ ಭಾರತ 41 ರನ್‌ ಗಳಿಸುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿ ಇತ್ತು.

ಆಬಳಿಕ ನಿತೀಶ್‌ ಕುಮಾರ್‌ ರೆಡ್ಡಿ, ರಿಂಕು ಸಿಂಗ್‌ ಭರ್ಜರಿಯಾಗಿ ಆಡಿದರು. ಭರ್ಜರಿಯಾಗಿ ಆಡಿದ ಅವರಿಬ್ಬರು ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. ಬಾಂಗ್ಲಾ ದಾಳಿಯನ್ನು ಪುಡಿಗಟ್ಟಿದ ಅವರಿಬ್ಬರು ನಾಲ್ಕನೇ ವಿಕೆಟಿಗೆ 108 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಈ ಹಂತದಲ್ಲಿ ತಂಡವು ನಿತೀಶ್‌ ರೆಡ್ಡಿ ಅವರನ್ನು ಕಳೆದುಕೊಂಡಿತು. 34 ಎಸೆತ ಎದುರಿಸಿದ ಅವರು 76 ರನ್‌ ಗಳಿಸಿದರು. ಆಬಳಿಕ ರಿಂಕು ಅವರನ್ನು ಸೇರಿಕೊಂಡ ಹಾರ್ದಿಕ್‌ ಪಾಂಡ್ಯ ಬಿರುಸಿನ ಆಟಕ್ಕೆ ಮುಂದಾದರು. ರಿಂಕು 29 ಎಸೆತಗಳಿಂದ 53 ರನ್‌ ಹೊಡೆದರೆ ಪಾಂಡ್ಯ 19 ಎಸೆತಗಳಿಂದ 32 ರನ್‌ ಹೊಡೆದರು.

ಸಂಕ್ಷಿಪ್ತ ಸ್ಕೋರು: ಭಾರತ 20 ಓವರ್‌ಗಳಲ್ಲಿ 9 ವಿಕೆಟಿಗೆ 221 (ನಿತೀಶ್‌ ರೆಡ್ಡಿ 76, ರಿಂಕು ಸಿಂಗ್‌ 53, ಹಾರ್ದಿಕ್‌ ಪಾಂಡ್ಯ 32); ಬಾಂಗ್ಲಾದೇಶ:9 ವಿಕೆಟಿಗೆ 135 (ಮಹಮುದುಲ್ಲ 41, ನಿತೀಶ್‌ ರೆಡ್ಡಿ 23ಕ್ಕೆ 2, ವರುಣ್‌ ಚಕ್ರವರ್ತಿ 19ಕ್ಕೆ 2).

Advertisement
Advertisement

Udayavani is now on Telegram. Click here to join our channel and stay updated with the latest news.