ದುಬಾೖ: ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ಭಾರತೀಯ ವನಿತೆಯರು ಬುಧವಾರ ನಡೆದ ವನಿತಾ ಟಿ20 ವಿಶ್ವಕಪ್ ಕ್ರಿಕೆಟ್ ಕೂಟದ ಮಹತ್ವದ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 82 ರನ್ನುಗಳಿಂದ ಸೋಲಿಸಿ ಸಂಭ್ರಮಿಸಿದೆ.
ಅಗ್ರ ಕ್ರಮಾಂಕದ ಆಟಗಾರ್ತಿಯರ ಅಮೋಘ ಆಟದಿಂದಾಗಿ ಭಾರತೀಯ ವನಿತೆಯರು ಮೂರು ವಿಕೆಟಿಗೆ 172 ರನ್ನುಗಳ ಉತ್ತಮ ಮೊತ್ತ ಪೇರಿಸಿದರೆ ಶ್ರೀಲಂಕಾ ಆಟಗಾರ್ತಿಯರು ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿ 19.5 ಓವರ್‌ಗಳಲ್ಲಿ ಕೇವಲ 90 ರನ್ನಿಗೆ ಆಲೌಟಾಗಿ ಸೋಲನ್ನು ಕಂಡಿತು.
ಈ ಗೆಲುವಿನಿಂದ ಭಾರತ ಆಡಿದ ಮೂರು ಪಂದ್ಯಗಳಿಂದ ನಾಲ್ಕು ಅಂಕ ಗಳಿಸಿ ಮುಂದಿನ ಸುತ್ತಿಗೇರುವ ಅವಕಾಶವನ್ನು ಹೆಚ್ಚಿಸಿಕೊಂಡಿತು. ಭಾರತ ಮುಂದಿನ ಪಂದ್ಯದಲ್ಲಿ ಅ. 13ರಂದು ಬಲಿಷ್ಠ ಆಸ್ಟ್ರೇಲಿಯವನ್ನು ಎದುರಿಸಲಿದೆ.
ಶ್ರೀಲಂಕಾದ ಆರಂಭ ಶೋಚನೀಯವಾಗಿತ್ತು. ಆರು ರನ್ ಗಳಿಸುವಷ್ಟರಲ್ಲಿ ಮೊದಲ 3 ವಿಕೆಟ್ ಉರುಳಿದ್ದವು. ಈ ಆಘಾತದಿಂದ ತಂಡ ಚೇತರಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟರೂ ಭಾರತೀಯ ಬೌಲರ್‌ಗಳು ಇದಕ್ಕೆ ಅವಕಾಶವನ್ನೇ ನೀಡಲಿಲ್ಲ. ಅಂತಿಮವಾಗಿ ತಂಡ 90 ರನ್ನಿಗೆ ತಂಡ ಆಲೌಟಾಗಿ ಶರಣಾಯಿತು. ಆರುಂಧತಿ ರೆಡ್ಡಿ ಮತ್ತು ಆಶಾ ಶೋಭಾನಾ ತಲಾ ಮೂರು ವಿಕೆಟ್ ಕಿತ್ತು ತಂಡದ ಗೆಲುವಿಗೆ ಉತ್ತಮ ಕೊಡುಗೆ ಸಲ್ಲಿಸಿದರು.
ಈ ಮೊದಲು ಇನ್ನಿಂಗ್ಸ್ ಆರಂಭಿಸಿದ ಶಫಾಲಿ ಶರ್ಮ ಮತ್ತು ಸ್ಮತಿ ಮಂಧನಾ ಬಿರುಸಿನ ಆಟವಾಡಿ ರನ್ ಪೇರಿಸತೊಡಗಿದರು. ಶ್ರೀಲಂಕಾ ದಾಳಿಯನ್ನು ಪುಡಿಗಟ್ಟಿದ ಅವರಿಬ್ಬರು ವೇಗವಾಗಿ ರನ್ ಗಳಿಸಿ ತಮ್ಮ ಉದ್ದೇಶ ಖಚಿತಪಡಿಸಿದರು. ಮೊದಲ ವಿಕೆಟಿಗೆ ಅವರಿಬ್ಬರು 98 ರನ್ನುಗಳ ಜತೆಯಾಟ ನಡೆಸಿದರು. ಈ ಹಂತದಲ್ಲಿ ಸ್ಮತಿ ಮಂಧನಾ ಔಟಾದರು. ಅವರು 38 ಎಸೆತ ಎದುರಿಸಿ ಸರಿಯಾಗಿ 50 ರನ್ ಹೊಡೆದರು. ಆದೇ ಮೊತ್ತಕ್ಕೆ ತಂಡ ಶಫಾಲಿ ಅವರನ್ನು ಕಳೆದುಕೊಂಡಾಗ ತಂಡ ಆಘಾತ ಅನುಭವಿಸಿತು. ಶಫಾಲಿ 40 ಎಸೆತಗಳಿಂದ 43 ರನ್ ಹೊಡೆದರು.
ಈ ಆಘಾತದ ನಡುವೆಯೂ ಹರ್ಮನ್‌ಪ್ರೀತ್ ಸ್ಫೋಟಕವಾಗಿ ಆಡಿದ್ದರಿಂದ ಭಾರತದ ಮೊತ್ತ 170ರ ತನಕ ಏರಿತು. ಕೌರ್ ಕೇವಲ 27 ಎಸೆತಗಳಿಂದ 52 ರನ್ ಗಳಿಸಿ ಅಜೇಯರಾಗಿ ಉಳಿದರು. ಎಂಟು ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದ್ದರು.
ಸಂಕ್ಷಿಪ್ತ ಸ್ಕೋರು: ಭಾರತ 3 ವಿಕೆಟಿಗೆ 172 (ಶಫಾಲಿ ಶರ್ಮ 43, ಸ್ಮತಿ ಮಂಧನಾ 50, ಹರ್ಮನ್‌ಪ್ರೀತ್ ಕೌರ್ 52 ಔಟಾಗದೆ); ಶ್ರೀಲಂಕಾ 19.5 ಓವರ್‌ಗಳಲ್ಲಿ 90 (ಕವಿಶಾ ದಿಲ್ಹರಿ 21, ಆರುಂಧತಿ ರೆಡ್ಡಿ 19ಕ್ಕೆ 3, ಆಶಾ ಶೋಭಾನಾ 19ಕ್ಕೆ 3).