Advertisement

Visa 7 ರಾಷ್ಟ್ರಗಳಿಗೆ ಶ್ರೀಲಂಕಾ ಉಚಿತ ವೀಸಾ:ಪ್ರವಾಸೋದ್ಯಮಕ್ಕೆ ಜೀವಕಳೆ ತುಂಬಲು ಕಾರ್ಯತಂತ್ರ

12:20 AM Nov 05, 2023 | Team Udayavani |

ದ್ವೀಪರಾಷ್ಟ್ರ ಶ್ರೀಲಂಕಾ ಸದ್ಯದ ಆರ್ಥಿಕ ಸಂಕಷ್ಟದಿಂದ ಹೊರಬರಲು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಕೊರೊನಾ ಸಾಂಕ್ರಾಮಿಕದ ವೇಳೆ ಆರ್ಥಿಕವಾಗಿ ತೀವ್ರ ಹೊಡೆತ ಅನುಭವಿಸಿದ್ದ ಶ್ರೀಲಂಕಾ ವರ್ಷದ ಹಿಂದೆ ದಿವಾಳಿ ಹಂತಕ್ಕೆ ಬಂದು ತಲುಪಿತ್ತು. ಇದರ ಜತೆಯಲ್ಲಿ ದೇಶದಲ್ಲಿನ ರಾಜಕೀಯ ಅಸ್ಥಿರತೆ, ಸಾಲಕ್ಕಾಗಿ ಚೀನವನ್ನು ಮಿತಿಮೀರಿ ಅವಲಂಬಿಸಿದುದರ ಪರಿಣಾಮ ಶ್ರೀಲಂಕಾ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುವಂತಾಗಿತ್ತು. ಈಗ ನಿಧಾನಗತಿಯಲ್ಲಿ ಚೇತರಿಕೆಯ ಹಾದಿ ಹಿಡಿದಿರುವ ಶ್ರೀಲಂಕಾ ತನ್ನ ಆರ್ಥಿಕತೆಯ ಮೂಲಾಧಾರವಾದ ಪ್ರವಾಸೋದ್ಯಮಕ್ಕೆ ಮರುಜೀವ ತುಂಬಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದರ ಭಾಗವಾಗಿಯೇ ಶ್ರೀಲಂಕಾ ಭಾರತ ಸಹಿತ ವಿಶ್ವದ ಏಳು ರಾಷ್ಟ್ರಗಳಿಗೆ ಉಚಿತ ವೀಸಾ ನೀಡುವ ಯೋಜನೆಯನ್ನು ಘೋಷಿಸಿದೆ. ಈ ಮೂಲಕ ಈ ದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಪ್ರಯತ್ನ ನಡೆಸಿದೆ.

Advertisement

ಕೊರೊನಾ ಸೃಷ್ಟಿಸಿದ ಅವಾಂತರ
ಜಗತ್ತನ್ನೇ ತನ್ನ ಆರ್ಭಟದಿಂದ ತಲ್ಲಣಗೊಳಿಸಿದ್ದ ಕೋವಿಡ್‌-19 ಜಾಗತಿಕ ಸಮುದಾಯಕ್ಕೆ ನೀಡಿದ ಹೊಡೆತದಿಂದ ಚೇತರಿಸಿಕೊಳ್ಳಲು ಜಗತ್ತಿನ ಇನ್ನೂ ಹಲವಾರು ರಾಷ್ಟ್ರಗಳು ಪರದಾಡುತ್ತಿವೆ. ಕೋವಿಡ್‌ ಸೃಷ್ಟಿಸಿದ ಆವಾಂತರದಿಂದಾಗಿ ಹಲವು ಸಣ್ಣಪುಟ್ಟ ಅದರಲ್ಲೂ ಬಡ ರಾಷ್ಟ್ರಗಳು ಆರ್ಥಿಕವಾಗಿ ಕಂಗೆಟ್ಟವು. ವಿಶ್ವದ ಬಲಾಡ್ಯ ದೇಶಗಳೇ ಆರ್ಥಿಕವಾಗಿ ನಲುಗಿ ಹೋದರೆ, ಬಡ ಮತ್ತು ಮಧ್ಯಮ ವರ್ಗಕ್ಕೆ ಸೇರಿದ ದೇಶಗಳು ದಿವಾಳಿ ಹಂತ ತಲುಪಿದವು. ಇದಕ್ಕೆ ನಮ್ಮ ನೆರೆಯ ಪಾಕಿಸ್ಥಾನ, ಶ್ರೀಲಂಕಾಗಳೇ ಸಾಕ್ಷಿ. ಒಂದೆಡೆಯಿಂದ ಈ ದೇಶಗಳನ್ನು ರಾಜಕೀಯ ಅಸ್ಥಿರತೆ ಕಾಡಿದರೆ ಮತ್ತೂಂದೆಡೆಯಿಂದ ಕೊರೊನಾ ಸೃಷ್ಟಿಸಿದ ಅವಾಂತರ, ಈ ದೇಶಗಳು ದಿವಾಳಿತನದಿಂದ ಪಾರಾಗಲು ಸಾಲಕ್ಕಾಗಿ ಚೀನದ ಮುಂದೆ ಕೈಚಾಚಿದುದು, ಇನ್ನೇನು ಆರ್ಥಿಕ ಬಿಕ್ಕಟ್ಟಿನಿಂದ ಪಾರಾದೆವು ಎನ್ನುವಷ್ಟರಲ್ಲಿ ಧುತ್ತನೆ ಎಂದು ಬಂದೆರಗಿದ ರಷ್ಯಾ-ಉಕ್ರೇನ್‌ ಸಮರ ಈ ದೇಶಗಳನ್ನು ಮತ್ತಷ್ಟು ಜರ್ಝರಿತಗೊಳಿಸಿತು. ಕಳೆದ ವರ್ಷದ ಎಪ್ರಿಲ್‌ನಲ್ಲಿ ದ್ವೀಪರಾಷ್ಟ್ರ ಶ್ರೀಲಂಕಾವಂತೂ ಸಂಪೂರ್ಣ ಅರಾಜಕತೆಗೆ ಸಿಲುಕಿ ಜನರು ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾದುದು ಈಗ ಇತಿಹಾಸ. ಆದರೆ ಈ ಬಿಕ್ಕಟ್ಟಿನಿಂದ ಶ್ರೀಲಂಕಾ ಇನ್ನೂ ಸಂಪೂರ್ಣವಾಗಿ ಹೊರಬಂದಿಲ್ಲವಾದರೂ ಚೇತರಿಕೆಯ ಹಾದಿಯಲ್ಲಿ ಹೆಜ್ಜೆ ಇರಿಸಿದೆ.

ಎಲ್ಲಿಯವರೆಗೆ?
ಮೇಲ್ನೋಟಕ್ಕೆ ಉಚಿತ ವೀಸಾ ಯೋಜನೆ ಅತ್ಯಂತ ಸರಳ ಯೋಜನೆ ಎಂದೆನಿಸಿದರೂ ಇದು ನಿಜಕ್ಕೂ ಒಂದು ಕ್ರಾಂತಿಕಾರಿ ಹೆಜ್ಜೆಯೇ. ಉಚಿತ ವೀಸಾ ನೀಡಿಕೆ ಸಂದರ್ಭದಲ್ಲಿ ದೇಶದ ಭದ್ರತೆಯ ಬಗೆಗೆ ಹೆಚ್ಚಿನ ಗಮನ ಹರಿಸುವುದು ಬಲುದೊಡ್ಡ ಸವಾಲಿನ ಕಾರ್ಯವಾಗಿದೆ. ಸದ್ಯ ಶ್ರೀಲಂಕಾ ಸರಕಾರ ಪ್ರಾಯೋಗಿಕ ನೆಲೆಯಲ್ಲಿ ಈ ಉಚಿತ ವೀಸಾ ಯೋಜನೆ ಘೋಷಣೆ ಮಾಡಿದ್ದು ನಿರ್ದಿಷ್ಟ ಅವಧಿಗೆ ಅಂದರೆ 2024 ರ ಮಾರ್ಚ್‌ 31ರ ವರೆಗೆ ಮಾತ್ರ ಈ ಯೋಜನೆ ಜಾರಿಯಲ್ಲಿರಲಿದೆ. ದೇಶಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದ್ದು, ಇದರಿಂದ ಸಹಜವಾಗಿಯೇ ಹಣದ ಹರಿವು ವೃದ್ಧಿಯಾಗಲಿದೆ. ಪ್ರವಾಸೋದ್ಯಮದ ಜತೆಜತೆಯಲ್ಲಿ ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಇತರ ಕ್ಷೇತ್ರಗಳಲ್ಲೂ ವ್ಯವಹಾರ ವೃದ್ಧಿಯಾಗಲಿದೆ. ಇದು ಶ್ರೀಲಂಕಾದ ಆರ್ಥಿಕತೆಗೆ ಪುಷ್ಟಿ ನೀಡಲಿದೆ. ಉಚಿತ ವೀಸಾ ಯೋಜನೆಯಿಂದ ಮುಂದಿನ ದಿನಗಳಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಲಿರುವ ಪ್ರವಾಸಿಗರ ಸಂಖ್ಯೆ 5 ಮಿಲಿಯನ್‌ಗಳಷ್ಟು ಹೆಚ್ಚಿಲಿದೆ ಎಂಬ ನಿರೀಕ್ಷೆ ಅಲ್ಲಿನ ಪ್ರವಾಸೋದ್ಯಮ ಇಲಾಖೆಯದ್ದಾಗಿದೆ.

ಏನಿದು
ಉಚಿತ ವೀಸಾ ಯೋಜನೆ?
ಕಳೆದೊಂದು ವರ್ಷದಿಂದ ಶ್ರೀಲಂಕಾ ಯಥಾಸ್ಥಿತಿಯತ್ತ ಮರಳುವ ದಿಸೆಯಲ್ಲಿದೆ. ಕೊರೊನಾ ಭೀತಿ ದೂರವಾಗಿರುವುದು, ರಾಜಕೀಯ ಅಸ್ಥಿರತೆ ಕೊಂಚ ದೂರವಾಗಿರುವುದು, ದೇಶದ ಆರ್ಥಿಕತೆ ಚೇತರಿಕೆ ಹಾದಿ ಹಿಡಿದಿರುವುದು ಇವೇ ಮೊದಲಾದ ಕಾರಣಗಳಿಂದಾಗಿ ಶ್ರೀಲಂಕಾ ಮತ್ತೊಮ್ಮೆ ವಿಶ್ವದ ಪ್ರವಾಸೋದ್ಯಮ ನಕಾಶೆಯಲ್ಲಿ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿದೆ. ವಿದೇಶಿ ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಶ್ರೀಲಂಕಾ ಸರಕಾರ ವಿವಿಧ ಕಾರ್ಯತಂತ್ರ, ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುತ್ತಿದೆ. ಆ ಮೂಲಕ ದೇಶದ ಪ್ರವಾಸೋದ್ಯಮಕ್ಕೆ ಜೀವಕಳೆ ತುಂಬಲು ಕಸರತ್ತು ನಡೆಸುತ್ತಿದೆ. ಇದರ ಭಾಗವಾಗಿ ಶ್ರೀಲಂಕಾ ರೂಪಿಸಿರುವ ಹೊಸ ಯೋಜನೆಯೇ ಉಚಿತ ವೀಸಾ ಯೋಜನೆ. ಅದರಂತೆ ನೆರೆಯ ಭಾರತ ಸಹಿತ ಏಳು ದೇಶಗಳ ಪ್ರಜೆಗಳಿಗೆ ಉಚಿತ ಪ್ರವಾಸಿ ವೀಸಾ ನೀಡುವ ಕೊಡುಗೆಯನ್ನು ಘೋಷಿಸಿದೆ. ಶ್ರೀಲಂಕಾ ಸರಕಾರದ ಈ ಪ್ರಸ್ತಾವನೆಗೆ ಅಲ್ಲಿನ ಸಂಸತ್‌ ಕೂಡ ಅನುಮೋದನೆ ನೀಡಿದೆ. ಈ ಯೋಜನೆಯಡಿಯಲ್ಲಿ ಭಾರತ, ಚೀನ, ರಷ್ಯಾ, ಮಲೇಷ್ಯಾ, ಜಪಾನ್‌, ಇಂಡೋನೇಷ್ಯಾ ಹಾಗೂ ಥೈಲ್ಯಾಂಡ್‌ನ‌ ಪ್ರವಾಸಿಗರು, ಶ್ರೀಲಂಕಾ ಒದಗಿಸುವ ಉಚಿತ ವೀಸಾ ಪ್ರಯೋಜನವನ್ನು ಪಡೆಯಬಹುದಾಗಿದೆ.

ಪ್ರವಾಸೋದ್ಯಮಕ್ಕೆ ಹೊಡೆತ
ಶ್ರೀಲಂಕಾದ ಆರ್ಥಿಕತೆಗೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿರುವುದು ಪ್ರವಾಸೋದ್ಯಮ ಕ್ಷೇತ್ರ. ದೇಶದಲ್ಲಿ ಲಕ್ಷಾಂತರ ಮಂದಿ ಈ ಕ್ಷೇತ್ರವನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅವಲಂಬಿಸಿದ್ದಾರೆ. ಕೊರೊನಾ ಸಾಂಕ್ರಾಮಿಕ ವಕ್ಕರಿಸಿದ ಬಳಿಕ ಇಲ್ಲಿನ ಪ್ರವಾಸೋದ್ಯಮ ಕ್ಷೇತ್ರ ಸಂಪೂರ್ಣವಾಗಿ ನಲುಗಿ ಹೋಗಿತ್ತು. ಸಹಜವಾಗಿಯೇ ಪ್ರವಾಸೋದ್ಯಮವನ್ನೇ ತಮ್ಮ ಜೀವನೋಪಾಯವನ್ನಾಗಿಸಿಕೊಂಡಿದ್ದ ಜನರು ಸಂಕಷ್ಟದ ಸುಳಿಯಲ್ಲಿ ಸಿಲುಕಿದರು. ಇದು ದೇಶದ ಆರ್ಥಿಕತೆಗೂ ಬಲುದೊಡ್ಡ ಹೊಡೆತ ನೀಡಿತು. ಇದಾದ ಬಳಿಕ ಬೆನ್ನುಬೆನ್ನಿಗೆ ದೇಶವನ್ನು ಸಂಕಷ್ಟಗಳ ಸರಮಾಲೆಯೇ ಬಾಧಿಸಿತು. ರಾಜಕೀಯ ಅರಾಜಕತೆ, ಅಸ್ಥಿರ ಸರಕಾರ, ಮಿತಿ ಮೀರಿದ ಸಾಲದ ಪ್ರಮಾಣ, ರಷ್ಯಾ-ಉಕ್ರೇನ್‌ ಯುದ್ಧ…ಹೀಗೆ ಬೆನ್ನುಬೆನ್ನಿಗೆ ದೇಶದ ಆರ್ಥಿಕತೆಗೆ ಹೊಡೆತಗಳು ಬಿದ್ದವು. ಈ ಕಾರಣಗಳಿಂದಾಗಿ ಪ್ರವಾಸೋದ್ಯಮ ಕ್ಷೇತ್ರ ಅಕ್ಷರಶಃ ಸ್ತಬ್ಧವಾಯಿತು.

Advertisement

ಕಾರ್ಯವಿಧಾನ ಹೇಗೆ?
ಉಚಿತ ಪ್ರವಾಸಿ ವೀಸಾ ಯೋಜನೆ ಘೋಷಣೆಗೂ ಮುನ್ನ ಭಾರತದ ಪ್ರವಾಸಿಗರು ಶ್ರೀಲಂಕಾಕ್ಕೆ ತೆರಳಬೇಕಿದ್ದರೆ ಉlಛಿcಠಿrಟnಜಿc ಖrಚvಛಿl ಅuಠಿಜಟ್ಟಜಿsಚಠಿಜಿಟn (ಉಖಅ) ಡಾಕ್ಯುಮೆಂಟ್‌ ಅನ್ನು ಸಲ್ಲಿಸಬೇಕಿತ್ತು. ಇದು 30 ದಿನಗಳ ಸಿಂಧುತ್ವ ಹೊಂದಿದ್ದು, 2,080 ರೂ. ಶುಲ್ಕ ಭರಿಸಬೇಕಿತ್ತು. ಇದೀಗ ಈ ಯಾವುದೇ ಪ್ರಕ್ರಿಯೆ ಇಲ್ಲದೆ ಭಾರತೀಯರು ಉಚಿತ ವೀಸಾ ಪಡೆದು ಶ್ರೀಲಂಕಾಕ್ಕೆ ಪ್ರವಾಸ ತೆರಳಬಹುದಾಗಿದೆ. ಇದರ ಜತೆಜತೆಯಲ್ಲಿ ಶೀಘ್ರದಲ್ಲೇ ಆನ್‌ಲೈನ್‌ ಟಿಕೆಟ್‌ ಬುಕಿಂಗ್‌ ಮಾಡುವ ವ್ಯವಸ್ಥೆಗಾಗಿ ರಾಷ್ಟ್ರೀಯ ಜಾಲತಾಣಗಳನ್ನು ಬಿಡುಗಡೆಗೊ ಳಿಸಲೂ ಶ್ರೀಲಂಕಾ ಸಜ್ಜಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದ್ದು, ಈ ಉಚಿತ ವೀಸಾ ಮತ್ತು ಆನ್‌ಲೈನ್‌ ಟಿಕೆಟಿಂಗ್‌ ವ್ಯವಸ್ಥೆಯು ಶ್ರೀಲಂಕಾಕ್ಕೆ ಬರುವ ಪ್ರವಾಸಿಗರ ಹಣ ಮತ್ತು ಸಮಯ ಎರಡನ್ನೂ ಉಳಿಸಲಿದೆ ಎಂದು ಹೇಳಿದೆ.

ಶ್ರೀಲಂಕಾದ ಆರ್ಥಿಕ
ದುಃಸ್ಥಿತಿಗೆ ಪ್ರಮುಖ ಕಾರಣಗಳು
-2019ರ ಈಸ್ಟರ್‌ ರವಿವಾರ ಶ್ರೀಲಂಕಾದ ವಿವಿಧೆಡೆ ಐಸಿಸ್‌ ಸಂಬಂಧಿತ ಉಗ್ರ ಸಂಘಟನೆ ನಡೆಸಿದ ಆತ್ಮಹತ್ಯಾ ಬಾಂಬ್‌ ಸ್ಫೋಟಗಳ ಪರಿಣಾಮ ಸುಮಾರು 45 ವಿದೇಶಿ ಪ್ರವಾಸಿಗರ ಸಹಿತ 269 ಜನರ ಸಾವು, ಕನಿಷ್ಠ 500 ಮಂದಿಗೆ ಗಾಯ. ಅಪಾರ ಆಸ್ತಿ ನಷ್ಟ.
-ಕೋವಿಡ್‌- 19ರ ಭೀಕರ ಕರಿನೆರಳು
-ವಿದೇಶಿ ರಫ್ತು-ಆಮದುಗಳಲ್ಲಾದ ವ್ಯತ್ಯಯ
-ವಿತ್ತೀಯ ಹಣಕಾಸಿನ ಧೋರಣೆಯಿಂದ ಕೇಂದ್ರ ಬ್ಯಾಂಕ್‌ನಲ್ಲಿ ಕರೆನ್ಸಿ ಮುದ್ರಣ
-ಸಂಸತ್‌ನಲ್ಲಿ ರಾಸಾಯನಿಕ ಗೊಬ್ಬರ ವಿರೋಧಿ ಕಾಯಿದೆಯನ್ನು ಅಂಗೀಕರಿಸಿದ್ದು (ಬಳಿಕ ಹಿಂಪಡೆದರೂ, ರಾಸಾಯನಿಕ ಗೊಬ್ಬರವನ್ನು ನಿಷೇಧಿದ್ದು)
-ರಾಜಪಕ್ಸ ಕುಟುಂಬದಿಂದ ಆರ್ಥಿಕ ನಿರ್ವಹಣೆಯಲ್ಲಿ ವಿಫ‌ಲತೆ
-ರಾಜಕೀಯ ಅಸ್ಥಿರತೆ
-ದೇಶ ಕಷ್ಟದಲ್ಲಿರುವಾಗಲೂ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಹಣ ಪಡೆಯಲು ಹಿಂದೇಟು
-ಚೀನದ “ಸಾಲ ಕೊಟ್ಟು, ಆಳುವ ನೀತಿ’ ಯ ಪ್ರಭಾವ
-2022ರ ರಷ್ಯಾ-ಉಕ್ರೇನ್‌ ಯುದ್ಧ

ಪ್ರವಾಸೋದ್ಯಮವೇ ಶ್ರೀಲಂಕಾದ ಅರ್ಥವ್ಯವಸ್ಥೆಯ ಅಡಿಪಾಯ?
ಶ್ರೀಲಂಕಾದ ಅರ್ಥವ್ಯವಸ್ಥೆಯ ಬುನಾದಿಯಾಗಿ ಪ್ರವಾಸೋದ್ಯಮ ಕ್ಷೇತ್ರ ಕಾರ್ಯನಿರ್ವಹಿಸುತ್ತಿದೆ. ಹಾಗೆ ನೋಡಿದರೆ ಶ್ರೀಲಂಕಾಕ್ಕೆ ಭೇಟಿ ನೀಡುವ ವಿವಿಧ ದೇಶಗಳ ಪ್ರವಾಸಿಗರ ಪೈಕಿ ಭಾರತದವರೇ ಹೆಚ್ಚಿದ್ದು, 2023ರ ಸೆಪ್ಟಂಬರ್‌ನ ಅಂಕಿಅಂಶಗಳ ಪ್ರಕಾರ, ಶ್ರೀಲಂಕಾಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ಪೈಕಿ ಶೇ. 26ರಷ್ಟು ಭಾರತದಿಂದ ಅಂದರೆ ಸುಮಾರು 30 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಶ್ರೀಲಂಕಾಕ್ಕೆ ಭೇಟಿ ನೀಡಿದ್ದಾರೆ. ಚೀನಿ ಪ್ರವಾಸಿಗರು ಎರಡನೇ ಸ್ಥಾನದಲ್ಲಿದ್ದಾರೆ. ಈ ಅಂಕಿಅಂಶಗಳನ್ನು ಗಮನಿಸಿದರೆ ಶ್ರೀಲಂಕಾದ ಆರ್ಥಿಕತೆಗೆ ಭಾರತ ಗಣನೀಯ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿದೆ.

– ಅವನೀಶ್‌ ಭಟ್‌, ಸವಣೂರು

 

Advertisement

Udayavani is now on Telegram. Click here to join our channel and stay updated with the latest news.

Next