Advertisement

ಈಗ ಎಲ್‌ಪಿಜಿಗಾಗಿ ಲಂಕಾ ಮೊರೆ; ಎಲ್‌ಪಿಜಿ ನೀಡುವಂತೆ ಭಾರತಕ್ಕೆ ಮನವಿ

10:24 PM Apr 16, 2022 | Team Udayavani |

ಕೊಲಂಬೊ: ಆರ್ಥಿಕ ಸಂಕಷ್ಟ ಎದುರಾದ ನಂತರ ಆರ್ಥಿಕ ಸಹಾಯ ಸೇರಿದಂತೆ ಹಲವಾರು ರೀತಿಯ ಮಾನವೀಯ ನೆರವುಗಳನ್ನು ಭಾರತದ ಮುಂದಿಟ್ಟಿರುವ ಶ್ರೀಲಂಕಾ, ಈಗ ಅಡುಗೆ ಅನಿಲವನ್ನು (ಎಲ್‌ಪಿಜಿ) ಸಾಲದ ರೂಪದಲ್ಲಿ ಸರಬರಾಜು ಮಾಡುವಂತೆ ಭಾರತವನ್ನು ಕೇಳಿಕೊಂಡಿದೆ.

Advertisement

ಲಂಕಾದಲ್ಲಿ ಪೆಟ್ರೋಲ್‌, ಡೀಸೆಲ್‌ನಂಥ ಅಗತ್ಯ ಇಂಧನಗಳ ಅಭಾವ ಕಾಣಿಸಿಕೊಂಡಿದೆ. ದಿನಸಿ, ಹಣ್ಣು – ತರಕಾರಿ ಬೆಲೆಗಳು ಗಗನಕ್ಕೇರಿವೆ. ಎಲ್‌ಪಿಜಿಯ ಪ್ರತಿ ಸಿಲಿಂಡರ್‌ ಬೆಲೆ ಶೇ. 2,700 ರೂ.ಗಳಿಗೆ ಏರಿದೆ!

ಭಾರತ, ಶ್ರೀಲಂಕಾಕ್ಕೆ ಈಗಾಗಲೇ ಎರಡು ಹಂತಗಳಲ್ಲಿ ನಗದು ಸಹಾಯ ಮಾಡಿದೆ. ಜೊತೆಗೆ, 36 ಸಾವಿರ ಮೆಟ್ರಿಕ್‌ ಟನ್‌ ಪೆಟ್ರೋಲ್‌, 40 ಸಾವಿರ ಮೆಟ್ರಿಕ್‌ ಟನ್‌ನಷ್ಟು ಡೀಸೆಲ್‌ ಅನ್ನು ಸರಬರಾಜು ಮಾಡಿದೆ. ಇದರ ನಡುವೆಯೇ ಅಡುಗೆ ಅನಿಲದ ಬೇಡಿಕೆಯನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ದರ ಹೆಚ್ಚಳಕ್ಕೆ ಭ್ರಷ್ಟಾಚಾರ ಕಾರಣ?
ಮತ್ತೊಂದೆಡೆ, ಶ್ರೀಲಂಕಾ ಸರ್ಕಾರಿ ಸ್ವಾಮ್ಯದ ಎಲ್‌ಪಿಜಿ ಕಂಪನಿಯಾದ ಲಿಟ್ರೋ ಗ್ಯಾಸ್‌ ಕಂಪನಿಯ ಮುಖ್ಯಸ್ಥ ತೆಶಾರಾ ಜಯಸಿಂಘೆ, ತಮ್ಮ ಸ್ಥಾನಕ್ಕೆ ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ. ತದನಂತರ ಮಾತನಾಡಿರುವ ಅವರು, “ಆರ್ಥಿಕ ದುಸ್ಥಿತಿಯಿಂದಾಗಿ ಜನರು ಅಗತ್ಯವಸ್ತುಗಳಿಗಾಗಿ ಪರದಾಡುತ್ತಿರುವ ಇಂಥ ದುಸ್ಥಿತಿಯಲ್ಲೂ ಕಂಪನಿಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯು ಅಗಾಧವಾಗಿ ಹೆಚ್ಚಾಗಿರುವುದಕ್ಕೆ ಈ ಕ್ಷೇತ್ರದಲ್ಲಿರುವ ಮಿತಿಮೀರಿದ ಭ್ರಷ್ಟಾಚಾರವೇ ಕಾರಣ ಎಂದು ಆರೋಪಿಸಿದ್ದಾರೆ.

ಷೇರು ಮಾರುಕಟ್ಟೆ ಬಂದ್‌
ಹದಗೆಟ್ಟ ಆರ್ಥಿಕತೆಯಿಂದಾಗಿ ಕೊಲಂಬೋ ಷೇರು ಮಾರುಕಟ್ಟೆಯನ್ನು ಐದು ದಿನಗಳವರೆಗೆ ಸ್ತಬ್ಧಗೊಳಿಸುವಂತೆ ಶ್ರೀಲಂಕಾದ ಸೆಕ್ಯುರಿಟಿ ಮತ್ತು ಎಕ್ಸ್‌ಚೇಂಜ್‌ ಆಯೋಗ ಆದೇಶಿಸಿದೆ. ಷೇರು ಮಾರುಕಟ್ಟೆಯ ಕಾರ್ಯನಿರ್ವಹಣಾ ನಿಯಮಗಳನ್ನು ಪರಿಷ್ಕರಿಸಬೇಕಿದ್ದು, ಆ ಹಿನ್ನೆಲೆಯಲ್ಲಿ ಐದು ದಿನಗಳವರೆಗೆ ಮಾರುಕಟ್ಟೆ ಬಂದ್‌ ಮಾಡಲು ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ವಾಷಿಂಗ್ಟನ್‌ಗೆ ನಿಯೋಗ
ಅಮೆರಿಕದಿಂದ 30 ಸಾವಿರ ಕೋಟಿ ರೂ. ಸಾಲ ಪಡೆಯುವ ಇರಾದೆ ಹೊಂದಿರುವ ಶ್ರೀಲಂಕಾ, ಅದಕ್ಕಾಗಿ ಅಮೆರಿಕ ಸರ್ಕಾರದ ಜೊತೆಗೆ ಮಾತುಕತೆ ನಡೆಸುವ ಸಲುವಾಗಿ ತನ್ನ ಉನ್ನತಾಧಿಕಾರಿಗಳ ನಿಯೋಗವೊಂದನ್ನು ವಾಷಿಂಗ್ಟನ್‌ಗೆ ಕಳುಹಿಸಿದೆ. ಅಸಲಿಗೆ, ವಾರದ ಹಿಂದೆಯೇ ಈ ನಿಯೋಗವನ್ನು ರಚಿಸಲಾಗಿದ್ದು ಇದರಲ್ಲಿ ಆರ್ಥಿಕ ತಜ್ಞರು, ಸರ್ಕಾರದ ಹಿರಿಯ ಅಧಿಕಾರಿಗಳು ಇದ್ದಾರೆ. ಈ ನಿಯೋಗವು, ಸಾಲ ತರುವುದಷ್ಟೇ ಅಲ್ಲ, ಇರುವ ಹಣದಲ್ಲಿ ದೇಶ ನಿಭಾಯಿಸುವ ಬಗೆಯ ಬಗ್ಗೆ ಸರ್ಕಾರಕ್ಕೆ ಸಲಹೆಗಳನ್ನು ನೀಡಲಿದೆ.

ಮಾನವೀಯ ಸಹಾಯ: ಕೇಂದ್ರಕ್ಕೆ ಸ್ಟಾಲಿನ್‌ ಮನವಿ
ಶ್ರೀಲಂಕಾದ ಪ್ರಜೆಗಳಿಗೆ ಮಾನವೀಯ ನೆರವಿನ ಆಧಾರದಲ್ಲಿ ಅಗತ್ಯ ವಸ್ತುಗಳನ್ನುಪೂರೈಸಲು ತಮಿಳುನಾಡು ಸರ್ಕಾರ ಸಜ್ಜಾಗಿದ್ದು, ಇದಕ್ಕೆ ಅವಕಾಶ ಕಲ್ಪಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ. ಮಾ. 31ರಂದು ಪ್ರಧಾನಿ ನರೇಂದ್ರ ಮೋದಿಯವರ ಜತೆಗೆ ನಡೆಸಲಾದ ಮಾತುಕತೆ ವೇಳೆ, ಲಂಕಾಕ್ಕೆ ಸಹಾಯ ಮಾಡುವ ವಿಚಾರದ ಬಗ್ಗೆಯೂ ಚರ್ಚಿಸಲಾಗಿತ್ತು. ಹಾಗಾಗಿ, ಶ್ರೀಲಂಕಾಕ್ಕೆ ಸಹಾಯ ಮಾಡುವ ವಿಚಾರದಲ್ಲಿ ತಮಿಳುನಾಡು ಸರ್ಕಾರ ಬದ್ಧವಾಗಿದೆ. ಅಡುಗೆಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ಕಳುಹಿಸಲು ಸಿದ್ಧವಾಗಿದ್ದು, ಅವು ಹಡಗುಗಳ ಮೂಲಕ ಲಂಕಾಕ್ಕೆ ಕಳುಹಿಸಲು ಅನುಮತಿ ನೀಡಬೇಕೆಂದು ಅವರು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next