ಹೊಸದಿಲ್ಲಿ : 2019ರ ಐಸಿಸಿ ವರ್ಲ್ಡ್ ಕಪ್ ಕ್ರಿಕೆಟ್‌ಗೆ ಶ್ರೀಲಂಕಾ ತಂಡ ನೇರ ಪ್ರವೇಶದ ಅರ್ಹತೆಯನ್ನು ಪಡೆದುಕೊಂಡಿದೆ.
ಇದು ಹೇಗೆ ಸಾಧ್ಯವಾಯಿತೆಂದರೆ ಇಂಗ್ಲಂಡ್ ಕ್ರಿಕೆಟ್ ತಂಡ, ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ನಿನ್ನೆ ಮಂಗಳವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿರುವ ಮೂಲಕ !
ಐಸಿಸಿ ವರ್ಲ್ಡ್ ಕಪ್ ನಲ್ಲಿ ನೇರ ಪ್ರವೇಶದ ಅರ್ಹತೆಯನ್ನು ಪಡೆಯುವುದಕ್ಕೆ 2017ರ ಸೆ.30 ಕಟ್ ಆಫ್ ಡೇಟ್ ಆಗಿತ್ತು. ಐಸಿಸಿ ಒನ್ ಡೇ ಕ್ರಮಾಂಕದ ಚಾರ್ಟ್‌ನಲ್ಲಿ ಶ್ರೀಲಂಕಾ 86 ಅಂಕಗಳೊಂದಿಗೆ ವೆಸ್ಟ್ ಇಂಡೀಸ್ (78 ಅಂಕ) ಗಿಂತ ಮುಂದಿತ್ತು.
ಕಟ್ ಆಫ್ ಡೇಟ್ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಇರುವುದರಿಂದ ವೆಸ್ಟ್ ಇಂಡೀಸ್ ಈಗಿನ್ನು ಲಂಕೆಯನ್ನು ಹಿಂದಿಕ್ಕುವ ದೊಡ್ಡ ಜಿಗಿತವನ್ನು ಸಾಧಿಸುವುದು ಅಸಾದ್ಯವಾಗಿದೆ. ಹಾಗಾಗಿ ಐಸಿಸಿ ವರ್ಲ್ಡ್ ಕಪ್‌ಗೆ ನೇರ ಪ್ರವೇಶವನ್ನು ಪಡೆದಿರುವ ಲಂಕಾ ತಂಡ ವಿಶ್ವ ಕಪ್ ನಲ್ಲಿ ಆಡುವ ಎಂಟನೇ ತಂಡವಾಗಿ ಮೂಡಿ ಬಂದಿದೆ. ಪರಿಣಾಮವಾಗಿ ವೆಸ್ಟ್ ಇಂಡೀಸ್ ಈಗಿನ್ನು 2018ರಲ್ಲಿ ನಡೆಯುವ ಅರ್ಹತಾ ಪಂದ್ಯಾವಳಿಯಲ್ಲಿ ಆಡಿ ಗೆದ್ದು ಬರಬೇಕಿದೆ.
2019ರ ಐಸಿಸಿ ವರ್ಲ್ಡ್ ಕಪ್‌ಗೆ ಈಗಾಗಲೇ ನೇರ ಪ್ರವೇಶ ಪಡೆದಿರುವ ರಾಷ್ಟ್ರಗಳೆಂದರೆ ಭಾರತ, ನ್ಯೂಜೀಲ್ಯಾಂಡ್, ಆಸ್ಟ್ರೇಲಿಯ, ಬಾಂಗ್ಲಾದೇಶ, ಇಂಗ್ಲಂಡ್, ಪಾಕಿಸ್ಥಾನ ಮತ್ತು ದಕ್ಷಿಣ ಆಫ್ರಿಕ.