Advertisement

ರಾಷ್ಟ್ರಾಧ್ಯಕ್ಷರ ಕಚೇರಿ ಗೇಟ್‌ಗಳು ಬಂದ್‌!  ಶ್ರೀಲಂಕಾದಲ್ಲಿ ತಾರಕಕ್ಕೇರಿದ ಪ್ರತಿಭಟನೆ

09:15 PM Jun 20, 2022 | Team Udayavani |

ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ತೀವ್ರ ಹೋರಾಟ 73 ದಿನಗಳನ್ನು ಪೂರೈಸಿದೆ. ರಾಷ್ಟ್ರಾಧ್ಯಕ್ಷರ ಕಚೇರಿಯ ಎಲ್ಲ ಗೇಟ್‌ಗಳನ್ನು ಬಂದ್‌ ಮಾಡಿರುವ ಪ್ರತಿಭಟನಾಕಾರರು ತಮ್ಮ ಪಟ್ಟನ್ನು ಇನ್ನಷ್ಟು ಬಿಗಿ ಮಾಡಿದ್ದಾರೆ. ಇದರ ಪರಿಣಾಮ ಪೊಲೀಸರು ಒಬ್ಬ ಬೌದ್ಧ ಭಿಕ್ಷು, ನಾಲ್ವರು ಮಹಿಳೆಯರು ಸೇರಿ ಒಟ್ಟು 21 ಮಂದಿಯನ್ನು ಬಂಧಿಸಿದ್ದಾರೆ.

Advertisement

ಧರಣಿನಿರತರು ಸತತವಾಗಿ ಪ್ರತಿಭಟನೆ ನಡೆಸುತ್ತಿರುವುದರಿಂದ ಸ್ಥಳಕ್ಕೆ ಗೋಟಗೋಗಾಮ ಎಂದೇ ಹೆಸರು ಬಂದಿದೆ. ಅಧ್ಯಕ್ಷರ ಕಚೇರಿಯ ಬಹುತೇಕ ಗೇಟ್‌ಗಳನ್ನು ಈ ಹಿಂದೆಯೇ ಬಂದ್‌ ಮಾಡಿದ್ದ ಪ್ರತಿಭಟನಾಕಾರರು, ಭಾನುವಾರ ರಾತ್ರಿ ಇನ್ನೆರಡು ಬಾಗಿಲುಗಳನ್ನೂ ಮುಚ್ಚಿದರು. ಶ್ರೀಲಂಕಾಕ್ಕೆ ಆರ್ಥಿಕ ನೆರವು ನೀಡುವ ಕುರಿತು ಚರ್ಚಿಸಲು ಐಎಂಎಫ್ ಅಧಿಕಾರಿಗಳು, ಇದೇ ಬಾಗಿಲುಗಳ ಮೂಲಕ ವಿತ್ತ ಸಚಿವಾಲಯದ ಕಚೇರಿಗೆ ಪ್ರವೇಶಿಸಬೇಕು. ಈ ಹಿನ್ನೆಲೆಯಲ್ಲಿ ಪೊಲೀಸರೂ ಬಿಗಿಯಾದ ಕ್ರಮ ತೆಗೆದುಕೊಂಡಿದ್ದಾರೆ.

ಐಎಂಎಫ್ ಸಭೆ: ಪ್ರತಿಭಟನೆಗಳ ನಡುವೆ ಶ್ರೀಲಂಕಾ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಸೋಮವಾರ ಐಎಂಎಫ್(ಅಂತಾರಾಷ್ಟ್ರೀಯ ಹಣಕಾಸು ನಿಧಿ) ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಆರ್ಥಿಕತೆಯನ್ನು ಸುಸ್ಥಿತಿಗೆ ತರಲು ಐಎಂಎಫ್ನಿಂದ ಲಂಕಾ 6 ಬಿಲಿಯನ್‌ ಡಾಲರ್‌ ನೆರವು ಕೇಳಿದೆ.

ಸೇನಾಬಲವನ್ನು ವಿಪರೀತ ಬಳಸಬೇಡಿ: ಶ್ರೀಲಂಕಾದಲ್ಲಿ ಇಂಧನ, ಆಹಾರಧಾನ್ಯಗಳ ಕೊರತೆ ತೀವ್ರವಾಗಿದೆ. ಜನ ದೀರ್ಘ‌ ಸರತಿ ಸಾಲಿನಲ್ಲಿ ನಿಂತು ಬೇಸತ್ತಿದ್ದಾರೆ. ಅವರನ್ನು ನಿಯಂತ್ರಿಸಲು ಎಲ್ಲ ಕಡೆ ಯೋಧರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಆಕ್ಷೇಪವೆತ್ತಿರುವ ಅಮೆರಿಕ ಮತ್ತು ವಿಶ್ವಸಂಸ್ಥೆ ಜನರ ವಿರುದ್ಧ ಅತಿಯಾಗಿ ಸೇನೆ ಬಳಸುವುದನ್ನು ಕಡಿಮೆ ಮಾಡಿ ಎಂದು ಆಗ್ರಹಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next