ಮುಂಬಯಿ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗ ನೀಡಿದ ಹಾಸ್ಯಾಸ್ಪದ ಹೇಳಿಕೆಗಳ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಜಯ್ ಶಾ ಅವರಿಗೆ ಶ್ರೀಲಂಕಾ ಸರಕಾರ ಔಪಚಾರಿಕವಾಗಿ ಕ್ಷಮೆಯಾಚಿಸಿದೆ.
ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗಾ ”ಶ್ರೀಲಂಕಾ ಕ್ರಿಕೆಟ್‌ನ ಅವನತಿಗೆ ಜಯ್ ಶಾ ಅವರೇ ಕಾರಣ” ಎಂದು ವಿಲಕ್ಷಣ ಹೇಳಿಕೆ ನೀಡಿದ್ದರು.
“ಜಯ್ ಶಾ ಅವರ ಒತ್ತಡದಿಂದಾಗಿ ಎಸ್‌ಎಲ್‌ಸಿ ಹಾಳಾಗುತ್ತಿದೆ. ಭಾರತದ ಒಬ್ಬ ವ್ಯಕ್ತಿ ಶ್ರೀಲಂಕಾ ಕ್ರಿಕೆಟ್ ಅನ್ನು ಹಾಳು ಮಾಡುತ್ತಿದ್ದಾರೆ. ಭಾರತದ ಗೃಹ ಸಚಿವರಾಗಿರುವ ಅವರ ತಂದೆಯಿಂದಾಗಿ ಮಾತ್ರ ಅವರು ಶಕ್ತಿಶಾಲಿಯಾಗಿದ್ದಾರೆ” ಎಂದು ರಣತುಂಗ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದರು.
ಸಂಸತ್ತಿನ ಅಧಿವೇಶನದಲ್ಲಿ ಸಚಿವರಾದ ಹರಿನ್ ಫರ್ನಾಂಡೋ ಮತ್ತು ಕಾಂಚನಾ ವಿಜೆಶೇಖರ ಅವರು ಹೇಳಿಕೆಯ ಬಗ್ಗೆ ಪಶ್ಚಾತ್ತಾಪ ಪಟ್ಟರು. ಜವಾಬ್ದಾರಿಯು ಬಾಹ್ಯ ಘಟಕಗಳಿಗಿಂತ ಮಿಗಿಲಾಗಿ ಶ್ರೀಲಂಕಾದ ಆಡಳಿತಗಾರರ ಮೇಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
“ನಾವು ಸರಕಾರವಾಗಿ ಜಯ್ ಶಾ ಅವರಿಗೆ ನಮ್ಮ ವಿಷಾದವನ್ನು ವ್ಯಕ್ತಪಡಿಸುತ್ತೇವೆ. ನಮ್ಮ ಸಂಸ್ಥೆಗಳ ನ್ಯೂನತೆಗಳಿಗಾಗಿ ನಾವು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕಾರ್ಯದರ್ಶಿ ಅಥವಾ ಇತರ ದೇಶಗಳತ್ತ ಕೈ ತೋರಿಸಲು ಸಾಧ್ಯವಿಲ್ಲ. ಇದು ತಪ್ಪು ಊಹೆಯಾಗಿದೆ” ಎಂದು ಸಚಿವ ವಿಜೆಶೇಖರ ಹೇಳಿದರು.