Advertisement

ಭಾರತ ದಾಳಿಗೆ ಲಂಕಾ ಇಲೆವೆನ್‌ ತರಗೆಲೆ

09:17 AM Jul 22, 2017 | Team Udayavani |

ಕೊಲಂಬೊ: ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಅಧ್ಯಕ್ಷರ ಬಳಗದ ವಿರುದ್ಧದ ಅಭ್ಯಾಸ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ಚೇತೋಹಾರಿ ಪ್ರದರ್ಶನ ನೀಡಿದೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡರಲ್ಲೂ ಮೇಲುಗೈ ಸಾಧಿಸಿದೆ. ಸ್ಪಿನ್ನರ್‌ಗಳಾದ ಕುಲದೀಪ್‌ ಯಾದವ್‌, ರವೀಂದ್ರ ಜಡೇಜಾ, ಆರಂಭಕಾರ ಕೆ.ಎಲ್‌.ರಾಹುಲ್‌ ಶುಕ್ರವಾರದ ಆಟದ ಹೀರೋಗಳಾಗಿದ್ದಾರೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಲಹಿರು ತಿರಿಮನ್ನೆ ನಾಯಕತ್ವದ ಲಂಕಾ ಅಧ್ಯಕ್ಷರ ಬಳಗ 187ಕ್ಕೆ ಆಲೌಟ್‌ ಆಯಿತು. ಬಳಿಕ ಬ್ಯಾಟಿಂಗ್‌ ನಡೆಸಿದ ಭಾರತ 30 ಓವರ್‌ಗಳ ಆಟದಲ್ಲಿ 3 ವಿಕೆಟಿಗೆ 135 ರನ್‌ ಗಳಿಸಿತು. ಇದು ಕೇವಲ 2 ದಿನಗಳ ಪಂದ್ಯವಾದ್ದರಿಂದ ಭಾರತ ಶನಿವಾರದ ಹೆಚ್ಚಿನ ಅವಧಿಯನ್ನು ಬ್ಯಾಟಿಂಗ್‌ ಆಭ್ಯಾಸಕ್ಕೆ ಬಳಸಿಕೊಳ್ಳಬಹುದು. ಆತಿಥೇಯ ತಂಡವನ್ನು ಭಾರತ 55.5 ಓವರ್‌ಗಳಲ್ಲಿ ಆಲೌಟ್‌ ಮಾಡಿತು. ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ 14 ರನ್ನಿಗೆ 4 ವಿಕೆಟ್‌ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು. ರವೀಂದ್ರ ಜಡೇಜಾ 31 ರನ್ನಿಗೆ 3, ಮೊಹಮ್ಮದ್‌ ಶಮಿ 9 ರನ್ನಿಗೆ ವಿಕೆಟ್‌ ಉರುಳಿಸಿದರು. 

ಭುವಿ, ಉಮೇಶ್‌ ಯಾದವ್‌, ಇಶಾಂತ್‌, ಅಶ್ವಿ‌ನ್‌, ಪಾಂಡ್ಯ ಬಿಗುವಾದ ಬೌಲಿಂಗ್‌ ಸಂಘಟಿಸಿದರೂ ವಿಕೆಟ್‌ ಕೀಳಲು ವಿಫ‌ಲರಾದರು.
ಲಂಕಾ ಸರದಿಯಲ್ಲಿ ಮಿಂಚಿದವರೆಂದರೆ ಆರಂಭಕಾರ ಧನುಷ್ಕಾ ಗುಣತಿಲಕ (87 ರನ್‌) ಮತ್ತು ನಾಯಕ ಲಹಿರು ತಿರಿಮನ್ನೆ (59 ರನ್‌). ಇವರಿಬ್ಬರ ದ್ವಿತೀಯ ವಿಕೆಟ್‌ ಜತೆಯಾಟದಲ್ಲಿ 130 ರನ್‌ ಒಟ್ಟುಗೂಡಿತು. ಹೀಗಾಗಿ 139ಕ್ಕೆ ಒಂದೇ ವಿಕೆಟ್‌ ಉರುಳಿಸಿಕೊಂಡು ಸುಸ್ಥಿತಿಯಲ್ಲಿದ್ದ ಲಂಕಾ ದೊಡ್ಡ ಮೊತ್ತ ಪೇರಿಸಬಹುದೆಂಬ ನಿರೀಕ್ಷೆ ದಟ್ಟವಾಗಿತ್ತು. ಆದರೆ 48 ರನ್‌ ಅಂತರದಲ್ಲಿ 9 ವಿಕೆಟ್‌ ಉಡಾಯಿಸಿದ ಭಾರತ ಆತಿಥೇಯರ ಓಟಕ್ಕೆ ಭರ್ಜರಿ ಬ್ರೇಕ್‌ ಹಾಕಿತು. 

ರಾಹುಲ್‌ ಅರ್ಧಶತಕ: ಭಾರತದ ಬ್ಯಾಟಿಂಗ್‌ ಆರಂಭವೂ ಆಘಾತಕಾರಿಯಾಗಿಯೇ ಇತ್ತು. ಅಭಿನವ್‌ ಮುಕುಂದ್‌ (9 ರನ್‌) ಮತ್ತು ಚೇತೇಶ್ವರ ಪೂಜಾರ (12 ರನ್‌) ಹೆಚ್ಚು ಹೊತ್ತು ನಿಲ್ಲಲಿಲ್ಲ. ಇಬ್ಬರನ್ನೂ ಎಡಗೈ ಪೇಸರ್‌ ವಿಶ್ವ ಫೆರ್ನಾಂಡೊ ಬೌಲ್ಡ್‌ ಮಾಡಿದರು.
ಆದರೆ ರಾಹುಲ್‌ ಕ್ರೀಸ್‌ ಆಕ್ರಮಿಸಿಕೊಂಡು ಅರ್ಧ ಶತಕದ ಕೊಡುಗೆ ಸಲ್ಲಿಸಿದರು. ಬಹಳ ಸಮಯದ ಬಳಿಕ ಕ್ರಿಕೆಟ್‌ ಅಂಗಳಕ್ಕಿಳಿದ ರಾಹುಲ್‌ ಗಳಿಕೆ 58 ಎಸೆತಗಳಿಂದ 54 ರನ್‌. ಇದರಲ್ಲಿ 7 ಬೌಂಡರಿ ಸೇರಿತ್ತು. ವಿರಾಟ್‌ ಕೊಹ್ಲಿ (34 ರನ್‌), ಅಜಿಂಕ್ಯ ರಹಾನೆ (30 ರನ್‌) ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ ಮಂಡಳಿ ಅಧ್ಯಕ್ಷರ ಇಲೆವೆನ್‌ 1ನೇ ಇನಿಂಗ್ಸ್‌ 187 ಆಲೌಟ್‌ (ಧನಿಷ್ಕಾ 87, ಲಹಿರು ತಿರಿಮನ್ನೆ
59, ಕುಲದೀಪ್‌ 14ಕ್ಕೆ 4), ಭಾರತ 1ನೇ ಇನಿಂಗ್ಸ್‌ 135/3( ಕೆಎಲ್‌.ರಾಹುಲ್‌ 54, ಕೊಹ್ಲಿ ಅಜೇಯ 34, ವಿಶ್ವ 21ಕ್ಕೆ 1)

Advertisement
Advertisement

Udayavani is now on Telegram. Click here to join our channel and stay updated with the latest news.

Next