Advertisement
ಆಗಾಗ ಸುರಿದ ಮಳೆಯಿಂದಾಗಿ ಈ ಪಂದ್ಯದ ಓವರ್‌ಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಲೇ ಬರಲಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾಕ್ಕೆ ನಿಗದಿಯಾದದ್ದು 39 ಓವರ್. ಪ್ರಚಂಡ ಪ್ರದರ್ಶನ ನೀಡಿದ ಲಂಕಾ 7 ವಿಕೆಟಿಗೆ 306 ರನ್ ಪೇರಿಸಿ ಸವಾಲೊಡ್ಡಿತು.
ದಕ್ಷಿಣ ಆಫ್ರಿಕಾದ ಚೇಸಿಂಗ್ ವೇಳೆ, ದ್ವಿತೀಯ ಓವರ್ ಮುಗಿದೊಡನೆಯೇ ಮತ್ತೆ ಮಳೆ ಸುರಿಯಿತು. ಅಂತಿಮವಾಗಿ 21 ಓವರ್‌ಗಳಲ್ಲಿ 191 ರನ್ ಗಳಿಸುವ ಸವಾಲು ಎದುರಾಯಿತು. ದಕ್ಷಿಣ ಆಫ್ರಿಕಾ ಇದನ್ನು ದಿಟ್ಟ ರೀತಿಯಲ್ಲೇ ಸ್ವೀಕರಿಸಿತು. ಸುರಂಗ ಲಕ್ಮಲ್ ಪಾಲಾದ ಅಂತಿಮ ಓವರಿನಲ್ಲಿ ಆಫ್ರಿಕಾ 8 ರನ್ ಮಾಡಬೇಕಿತ್ತು. ಡೇವಿಡ್ ಮಿಲ್ಲರ್ ಕ್ರೀಸಿನಲ್ಲಿದ್ದುದರಿಂದ ಪ್ರವಾಸಿ ಪಡೆಗೆ ಇದೇನೂ ಅಸಾಧ್ಯವಾಗಿರಲಿಲ್ಲ. ಆದರೆ 2ನೇ ಎಸೆತದಲ್ಲಿ ಮಿಲ್ಲರ್ ಔಟಾಗುವುದರೊಂದಿಗೆ ಪಂದ್ಯಕ್ಕೆ ತಿರುವು ಲಭಿಸಿತು. ಎನ್‌ಗಿಡಿ ಮತ್ತು ಮೊದಲ ಪಂದ್ಯ ಆಡಲಿಳಿದಿದ್ದ ಜೂನಿಯರ್ ಡಾಲಾ ಅವರಿಗೆ ಕೊನೆಯ 4 ಎಸೆತಗಳ ಒತ್ತಡವನ್ನು ನಿಭಾಯಿಸಲಾಗಲಿಲ್ಲ. ಅಂತಿಮವಾಗಿ 9ಕ್ಕೆ 187 ರನ್ ಗಳಿಸಿ ಶರಣಾಯಿತು. ಇದು ದಕ್ಷಿಣ ಆಫ್ರಿಕಾ ವಿರುದ್ಧ ಅನುಭವಿಸಿದ ಸತತ 11 ಸೋಲುಗಳ ಬಳಿಕ ಶ್ರೀಲಂಕಾ ಸಾಧಿಸಿದ ಮೊದಲ ಗೆಲುವು. 2 ವರ್ಷಗಳ ಬಳಿಕ ಮೊದಲ ಅರ್ಧ ಶತಕ ಹೊಡೆದ ದಸುನ್ ಶಣಕ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
Related Articles
Advertisement