ಉಡುಪಿ: ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಅಮೆರಿಕದ ನ್ಯೂಜೆರ್ಸಿಯ ಎಡಿಸನ್‌ನ (ಪುತ್ತಿಗೆ ಮಠದ ಶಾಖಾ ಮಠ) ಶ್ರೀಕೃಷ್ಣ ವೃಂದಾವನದಲ್ಲಿ ಪ್ರತಿಷ್ಠಾಪಿಸಲಾಗುವ ಸಾಲಿಗ್ರಾಮ ಶಿಲೆಯ ಕಡಗೋಲು ಕೃಷ್ಣ ಪ್ರತಿಮೆಯನ್ನು ಬುಧವಾರ ಉಡುಪಿಯಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು.
ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಮಾಜಿ ಶಾಸಕ ಕೆ. ರಘುಪತಿ ಭಟ್, ಬೆಳಪು ದೇವಿಪ್ರಸಾದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಗೀತಾ ಮಂದಿರದಿಂದ ಶ್ರೀಕೃಷ್ಣ ಮಠಕ್ಕೆ ಮೆರವಣಿಗೆಯಲ್ಲಿ ವಿಗ್ರಹ ತಂದ ಬಳಿಕ ಮಧ್ವ ಸರೋವರದಲ್ಲಿ ಮುಳುಗಿಸಿ ಶ್ರೀಕೃಷ್ಣಮಠದ ಮುಖಮಂಟಪಕ್ಕೆ ತಂದಾಗ ಪರ್ಯಾಯ ಶ್ರೀ ಪೇಜಾವರ ಉಭಯ ಶ್ರೀಪಾದರು ಮಂಗಳಾರತಿ ಬೆಳಗಿದರು.
ಪಶ್ಚಿಮ ಕರಾವಳಿಯಿಂದ ಅಮೆರಿಕದ ಪೂರ್ವ ಕರಾವಳಿಯಲ್ಲಿರುವ ನ್ಯೂಜೆರ್ಸಿಗೆ ಕೃಷ್ಣನ ವಿಗ್ರಹ ಹೊರಟಿದೆ. ಎಲ್ಲೆಡೆ ಕೃಷ್ಣಪ್ರಜ್ಞೆ ಜಾಗೃತವಾಗಲಿ ಎಂದು ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಾರೈಸಿದರು.
ಇದೊಂದು ಐತಿಹಾಸಿಕ ಕ್ಷಣ ಎಂದು ಶ್ರೀಪುತ್ತಿಗೆ ಶ್ರೀಪಾದರು ನುಡಿದರು. ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶುಭಕೋರಿದರು. ಬಳಿಕ ರಥಬೀದಿಯಲ್ಲಿ ನವರತ್ನ ರಥದಲ್ಲಿ ವಿಗ್ರಹದ ಮೆರವಣಿಗೆ ನಡೆದು ಪುತ್ತಿಗೆ ಮಠಕ್ಕೆ ತಂದಿರಿಸಲಾಯಿತು.
ಒಬ್ಬ ಕುಶಲಕರ್ಮಿಯ ಆರು ತಿಂಗಳ ಕೆಲಸ: ಕೃಷ್ಣ ವಿಗ್ರಹ ಗುರುವಾರ ನ್ಯೂಜೆರ್ಸಿಗೆ ತೆರಳಲಿದ್ದು, ಜೂ. 8ರಂದು ವಿಗ್ರಹದ ಪ್ರತಿಷ್ಠೆ ನಡೆಯಲಿದೆ. ಸಾಲಿಗ್ರಾಮ ಶಿಲೆ ನೇಪಾಳದ ಗಂಡಕಿ ನದಿಯಲ್ಲಿ ಸಿಗುತ್ತದೆ. ಈ ಶಿಲೆಯಿಂದ 19 ಇಂಚು (ಒಂದೂವರೆ ಅಡಿ) ಎತ್ತರದ ವಿಗ್ರಹವನ್ನು ನಿರ್ಮಿಸಿದವರು ಶಿರಸಿಯ ಹರೀಶ ಆಚಾರ್ಯರು. ಇವರೊಬ್ಬರೇ ಸುಮಾರು ಆರು ತಿಂಗಳು ನೇಪಾಲದಲ್ಲಿ ನಿಂತು ವಿಗ್ರಹ ನಿರ್ಮಿಸಿದ್ದರು. ಒಬ್ಬರೇ ನಿರ್ಮಿಸಿದ ಕಾರಣವೆಂದರೆ ಶಿಲೆಯ ಕುಸುರಿ ಕೆಲಸವನ್ನು ಒಬ್ಬರೇ ಮಾಡಿದರೆ ಹೆಚ್ಚು ಅನುಕೂಲ.