ಥಾಣೆ: ಶ್ರೀ ಆದಿಶಕ್ತಿ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವು ಫೆ. 16 ರಂದು ಶಾಲಾ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಆದಿಶಕ್ತಿ ಕನ್ನಡ ಸಂಘ ಮತ್ತು ಶಾಲೆಯ ಅಧ್ಯಕ್ಷ ಭಾಸ್ಕರ್ ಎಂ. ಶೆಟ್ಟಿ ಇವರು ಮಾತನಾಡಿ, ವಿದ್ಯಾರ್ಥಿ ಜೀವನದ ವಿವಿಧ ಹಂತಗಳಲ್ಲಿ ವಿದಾಯ ಹೇಳಬೇಕಾದುದು ಸಹಜ ಮತ್ತು ಅನಿವಾರ್ಯ. ನಿಮಗೆ ನಮ್ಮ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕಾರ ದೊರೆತಿದೆ. ಈ ಭದ್ರ ಬುನಾದಿಯಿಂದ ಮುಂದಿನ ಜೀವನದಲ್ಲಿ ನೀವೆಲ್ಲರೂ ಆದರ್ಶ ನಾಗರಿಕರಾಗಿ ಬಾಳಬೇಕು. ಹಳೆವಿದ್ಯಾರ್ಥಿಗಳಾಗಿ ಬಂದು ನಮ್ಮ ಶಾಲೆಯ ಸರ್ವರ್ತೋಮುಖ ಅಭಿವೃದ್ಧಿಗೆ ಸಹಕರಿಸಬೇಕು. ಎಂದು ನುಡಿದು ಎಲ್ಲಾ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಶ್ರೀ ಆದಿಶಕ್ತಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಶಿಮಂತೂರು ಶಂಕರ್ ಶೆಟ್ಟಿ ಇವರು ಮಾತನಾಡಿ, ಜೀವನದಲ್ಲಿ ಸತ್ಯಮಾರ್ಗದಲ್ಲಿ ಮುನ್ನಡೆದು ಉನ್ನತ ಹುದ್ಧೆಯನ್ನು ಅಲಂಕರಿಸಿ ಪಾಲಕರಿಗೆ ಹಾಗೂ ಶಾಲೆಗೆ ಕೀರ್ತಿ ತರಬೇಕು ಎಂದರು.
ಸಂಘದ ಸಲಹೆಗಾರರಾದ ರಮಾನಾಥ ಐಲ್ ಮತ್ತು ಶಾಲಾ ಹಿತೈಷಿ, ನಿವೃತ ಶಿಕ್ಷಕ ಮೇಘರಾಜ್ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಹಾರೈಸಿದರು. ಮಾಧ್ಯಮಿಕ ಶಾಲಾ ಮುಖ್ಯ ಶಿಕ್ಷಕಿ ವಿಮಲಾ ಕರ್ಕೇರ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರವೀಂದ್ರ ಬಿ., ಸಹಶಿಕ್ಷಕರಾದ ಪ್ರಮೋದಾ ಮಾಡಾ, ವೆಂಕಟರಮಣ ಶೆಣೈ, ಮಮತಾ ಶೆಟ್ಟಿ, ಸಂತೋಷ್ ದೊಡ್ಮನಿ, ಸುಜಯಾ ಜೈನ್, ಪ್ರಕಾಶ್ ಚಿಂತಾಮಣಿ ಇವರು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭಹಾರೈಸಿ ಶಾಲೆಗೆ ಶೇ. ನೂರು ಫಲಿತಾಂಶ ತರುವಲ್ಲಿ ವಿದ್ಯಾರ್ಥಿಗಳು ಸಫಲರಾಗಬೇಕು ಎಂದರು.
ವೇದಿಕೆಯಲ್ಲಿ ಸಂಘದ ಗೌರವ ಕಾರ್ಯದರ್ಶಿ ವಾದಿರಾಜ್, ಜತೆ ಕೋಶಾಧಿಕಾರಿ ಏಕನಾಥ್ ಕುಂದರ್ ಇವರು ಉಪಸ್ಥಿತರಿದ್ದರು. 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಘದ ಅಧ್ಯಕ್ಷ ಭಾಸ್ಕರ್ ಎಂ. ಶೆಟ್ಟಿ ಇವರು ಲೇಖನಿಯನ್ನು ವಿತರಿಸಿದರು. ವಿದ್ಯಾರ್ಥಿಗಳು ಶಾಲೆಗೆ ಕಿರುಕಾಣಿಕೆಯನ್ನು ನೀಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಒಂಭತ್ತನೇ ತರಗತಿಯ ವಿದ್ಯಾರ್ಥಿ ಭಗವಂತ್ ಸ್ವಾಗತಿಸಿದರು. ಪ್ರತಿಭಾ ಜವಳಿಗ ಮತ್ತು ಅನಿಲ್ ಬಿರಾದರ್ ಕಾರ್ಯಕ್ರಮ ನಿರ್ವಹಿಸಿದರು. ಪುನೀತ್ ಕೋಟ್ಯಾನ್ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದದವರು, ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಶಿಕ್ಷಕೇತರ ಸಿಬಂದಿಗಳು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.