Advertisement

ಪ್ರಾಥಮಿಕ ಶಿಕ್ಷಣ ಸುಧಾರಣೆಗೆ ಶ್ರೀಗಳ ಸಲಹೆ

02:37 PM Jun 25, 2018 | |

ವಾಡಿ: ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ತೀರಾ ಕಳಪೆ ಮಟ್ಟದ್ದಾಗಿದ್ದು, ಬಡ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಪ್ರಾಥಮಿಕ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ತರಬೇಕು ಎಂದು ಸುಕ್ಷೇತ್ರ ಕೊಂಚೂರು ಸವಿತಾ ಪೀಠದ ಧರ್ಮಾಧಿಕಾರಿ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಶಿಕ್ಷಣ ಸಚಿವರಿಗೆ ಸಲಹೆ ನೀಡಿದ್ದಾರೆ.

Advertisement

ಬೆಂಗಳೂರಿನ ವಿಕಾಸಸೌಧಕ್ಕೆ ಭೇಟಿ ನೀಡಿದ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್‌. ಮಹೇಶ ಅವರನ್ನು ಭೇಟಿ ಮಾಡಿ ಸುಧೀರ್ಘ‌ ಮಾತುಕತೆ ನಡೆಸಿದ್ದಾರೆ.

ರಾಜ್ಯದಲ್ಲಿನ ಸರಕಾರಿ ಶಾಲೆಗಳು ಮತ್ತು ಖಾಸಗಿ ಸಂಸ್ಥೆಗಳ ಪ್ರಾಥಮಿಕ ಶಿಕ್ಷಣ ಸಂಪೂರ್ಣ ಕುಸಿದಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸರಕಾರ ಎಷ್ಟೇ ಯೋಜನೆಗಳು ಮತ್ತು ನಿಯಮಗಳನ್ನು ಜಾರಿಗೆ ತಂದರೂ ಮಕ್ಕಳು ಅಕ್ಷರ ಜ್ಞಾನದಿಂದ ವಂಚಿತರಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಯೋಜನೆಗಳನ್ನು ಸಾಕಾರಗೊಳಿಸುವಲ್ಲಿ ಇಲಾಖೆ
ವಿಫಲವಾಗಿದೆ ಎಂದು ತಿಳಿಸಿದ್ದಾರೆ.

ಬಹುತೇಕ ಶಿಕ್ಷಕರು ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢ ಶಾಲೆಗೆ ದಾಖಲೆ ಪಡೆದ ವಿದ್ಯಾರ್ಥಿಗಳಿಗೆ ವರ್ಣಮಾಲೆಗಳೇ ತಿಳಿದಿರುವುದಿಲ್ಲ. ಪ್ರೌಢ ಶಾಲೆಯ ಶಿಕ್ಷಕರು ಪ್ರಾಥಮಿಕ ಶಿಕ್ಷಣ ಬೋಧಿಸಬೇಕಾದ ಸ್ಥಿತಿ ಎಲ್ಲೆಡೆ ಕಾಣಬಹುದಾಗಿದೆ. ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ತೀಕ್ಷಣವಾದ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಅದು ನಿಮ್ಮಿಂದ ಸಾಧ್ಯವಿದೆ ಎಂದು ಸಲಹೆ ನೀಡಿದ್ದಾರೆ.

ಕಿರುಕುಳ ನಿಲ್ಲಲಿ: ಸೇವಾ ಮನೋಭಾವದಿಂದ ಶಾಲೆಗಳನ್ನು ತೆರೆದು ಜ್ಞಾನ ದಾಸೋಹ ನಡೆಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಣ ಇಲಾಖೆ ವಿವಿಧ ರೀತಿಯಲ್ಲಿ ಮಾನಸಿಕ ಕಿರುಕುಳ ನೀಡುತ್ತಿದೆ. 

Advertisement

ಗ್ರಾಮೀಣ ಭಾಗಗಳಲ್ಲಿ ಶಿಕ್ಷಣ ಸಂಸ್ಥೆ ನಡೆಸುವುದು ಕಷ್ಟಕರವಾಗಿದೆ. ಸಾಕಷ್ಟು ಸವಾಲುಗಳನ್ನು ಎದುರಿಸಿ
ಶಾಲೆಗಳನ್ನು ನಡೆಸಬೇಕಾಗಿದೆ. ಆರ್ಥಿಕ ಲಾಭದ ನಿರೀಕ್ಷೆ ಹೊಂದದೆ ಸೇವಾ ಮನೋಭಾದಿಂದ ಹಲವು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಶಿಕ್ಷಣ ಇಲಾಖೆ ನೀಡುವ ಕಿರುಕುಳಕ್ಕೆ ಶಾಲೆಗಳನ್ನೇ ಮುಚ್ಚಬೇಕಾದ ಸ್ಥಿತಿ ಬಂದೊದಗಿದೆ ಎನ್ನುವ ವಾಸ್ತವ ಸ್ಥಿತಿ ಬಿಚ್ಚಿಟ್ಟಿದ್ದಾರೆ.

ಸರಕಾರಿ ಶಾಲೆಗಳಿಗೊಂದು ನಿಯಮ, ಖಾಸಗಿ ಶಾಲೆಗಳಿಗೊಂದು ನಿಯಮ ಜಾರಿಗೊಳಿಸದೆ ಎಲ್ಲರಿಗೂ ಸಮನಾದ ನಿಯಮ ಜಾರಿಗೆ ತರಬೇಕು. ಜ್ಞಾನ ದಾಸೋಹ ಮನೋಭಾವದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಇಲಾಖೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಸ್ವಾಮೀಜಿಯವರ ಸಲಹೆಗಳನ್ನು ಸ್ವೀಕರಿಸಿದ ಶಿಕ್ಷಣ ಸಚಿವ ಎನ್‌.ಮಹೇಶ, ಮುಂದಿನ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತರಲಾಗುವುದು ಎನ್ನುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸವಿತಾ ಸಮಾಜದ ಬಳ್ಳಾರಿ ಜಿಲ್ಲಾಧ್ಯಕ್ಷ ಶರಣಪ್ಪ, ಯಾದಗಿರಿ ಜಿಲ್ಲಾಧ್ಯಕ್ಷ ಅಪ್ಪಣ್ಣ, ಮುಖಂಡ ಬೈಲಪ್ಪ, ನಾರಾಯಣಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next