ಹುಣಸೂರು: ತಂಬಾಕು ಸಸಿ ನಾಟಿ ಮಾಡಿದ 45-55 ದಿನಗಳ ನಂತರ ಎಲೆಗಳ ಮೇಲೆ ಪೊಟ್ಯಾಶಿಯಂ ನೈಟ್ರೇಟ್ ಶೇ.2 ಪ್ರಮಾಣ ಸಿಂಪಡಿಸಬೇಕೆಂದು ಹರಾಜು ಅಧೀಕ್ಷಕ ಕಾಶೀರಾಂ ನಾಯ್ಕ ಹೇಳಿದರು.
ತಾಲೂಕಿನ ರಂಗಯ್ಯನ ಕೊಪ್ಪಲಿನಲ್ಲಿ ಕಟ್ಟೆಮಳಲವಾಡಿಯ ತಂಬಾಕು ಮಂಡಳಿ ಫ್ಲಾಟ್ ಫಾರಂ 3ರ ವತಿಯಿಂದ ತಂಬಾಕು ಬೆಳೆಗಾರರಿಗಾಗಿ ಏರ್ಪಡಿಸಿದ್ದ ತಂಬಾಕು ಬೆಳೆಯ ಕ್ಷೇತ್ರೋತ್ಸವದಲ್ಲಿ ಬರ ನಿರ್ವಹಣೆ ಮತ್ತು ಗುಣಮಟ್ಟದ ತಂಬಾಕು ಉತ್ಪಾದನೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ತಂಬಾಕು ಸಸಿಗೆ ಸಾರಜನಕ ಮತ್ತು ಪೊಟ್ಯಾಶ್ ಒದಗಿಸಬೇಕು. ಆಗ ಬರದಲ್ಲಿಯೂ ಉತ್ತಮ ತಂಬಾಕು ಸಸಿ ಬೆಳೆಯಲು ಸಹಕಾರಿಯಾಗುತ್ತದೆ. ಈ ಬಗ್ಗೆ ಸಂಶೋಧನಾ ಕೇಂದ್ರದಿಂದ ತಾಂತ್ರಿಕ ಸಲಹೆ ಪಡೆಯಬೇಕೆಂದು ಸಲಹೆ ನೀಡಿದರು.
ಎಚ್ಚರ ವಹಿಸಿ: ನಗರದ ಕೇಂದ್ರೀಯ ಹೊಗೆಸೊಪ್ಪ ಸಂಶೋಧನಾ ಕೇಂದ್ರ (ಸಿಟಿಆರ್‌ಐ) ವಿಜ್ಞಾನಿ ರಾಮಕೃಷ್ಣ ತಂಬಾಕು ಬೆಳೆ ಬಗ್ಗೆ ಮಾತನಾಡಿ, ಹೊಗೆಸೊಪ್ಪು ಬೆಳೆಯ ಕುಡಿ, ಕಂಕುಳಕುಡಿ ನಿರ್ವಹಣೆ, ಎಲೆ ಕಟಾವು, ತಂಬಾಕು ಹದಗೊಳಿಸಿವುದು, ಗ್ರೇಡಿಂಗ್, ಶೇಖರಣೆ ವಿಧಾನ ಮತ್ತು ತಂಬಾಕು ಬೇಲ್‌ಗಳಲ್ಲಿ ಅನ್ಯ ಪದಾರ್ಥಗಳು ಸೇರದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.
ಐಟಿಸಿ ಕಂಪನಿಯ ವ್ಯವಸ್ಥಾಪಕ ಸುನಿಲ್, ಕ್ಷೇತ್ರಾಧಿಕಾರಿ ಧನರಾಜ್, ಮೀನಾ, ರೈತ ಮುಖಂಡ ಶ್ರೀಕಂಠೇಗೌಡ, ಶಿವಣ್ಣ, ಸತ್ಯನಾರಾಯಣ, ರಮೇಶ ಸೇರಿದಂತೆ 80ಕ್ಕೂ ಹೆಚ್ಚು ತಂಬಾಕು ಬೆಳೆಗಾರರು ಭಾಗವಹಿಸಿದ್ದರು.