ಭಾರತದ ಭವ್ಯ ಪರಂಪರೆಯಲ್ಲಿ ಸ್ವ ಪ್ರಯತ್ನದಿಂದ ಅಮೂಲ್ಯ ರತ್ನಗಳು ಕ್ರೀಡಾ ಲೋಕದಲ್ಲಿ ಹೊಳೆದಿರುವುದನ್ನು ನೋಡಬಹುದು. ಪ್ರಾಚೀನ ಕಾಲದಿಂದಲ್ಲೂ ಪ್ರಸಿದ್ಧಿ ಪಡೆದಿರುವ ಬಿಲ್ಲುಗಾರಿಕೆ, ಕುಸ್ತಿ, ಮಲ್ಲಯುದ್ಧ ಹೀಗೆ ವಿವಿಧ ಕ್ರೀಡೆಯಲ್ಲಿ ಸ್ವಪ್ರಯತ್ನ, ತೋಳ್ಬಲ, ಶ್ರದ್ಧೆ, ಏಕಾಗ್ರತೆ, ಸತತ ಪ್ರಯತ್ನದಿಂದ ಸಾಧನೆ ಮಾಡಿದ್ದಾರೆ. ಶಬ್ದವೇದಿಯಂತಹ ವಿದ್ಯೆ ಕರಗತ ಮಾಡಿಕೊಂಡ ಏಕಲವ್ಯನಂತಹ ಧೀಮಂತ ಕ್ರೀಡಾ ರತ್ನಗಳು ಧೃವತಾರೆಗಳಂತೆ ಕ್ರೀಡಾ ಕ್ಷೇತ್ರದಲ್ಲಿ ಮಿನುಗಿದ್ದಾರೆ. ಅರ್ಜುನ, ಭೀಮ, ದುರ್ಯೋಧನರಂತಹ ಗುರುಕೃಪೆ ಪಡೆದ ಕ್ರೀಡಾಪಟುಗಳು ಕಂಗೊಳಿಸಿದ್ದಾರೆ.
ಭಾರತದಲ್ಲಿ ಹತ್ತಾರು ಕ್ರೀಡೆಗಳಿವೆ. ಸಾವಿರಾರು ಕ್ರೀಡಾರತ್ನಗಳಿವೆ. ಆದರೆ, ಜಾಗತಿಕ ಮಟ್ಟದಲ್ಲಿ ಅಧಿಕವಾಗಿ ಗುರುತಿಸಿಕೊಳ್ಳಲು ಅಸಾಧ್ಯವಾಗಿರುವುದು ಕ್ರೀಡಾ ಲೋಕದ ದುರಂತವೇ ಸರಿ. ದೇಶದಲ್ಲಿ ಕ್ರೀಡಾಪಟುಗಳಿಗೇನೂ ಕೊರತೆಯಿಲ್ಲ. ಆದರೂ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಹೆಚ್ಚು ಚಿನ್ನದ ಪದಕ ಗಳಿಸಲು ಭಾರತ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದಕ್ಕೆ ಕಾರಣವೇನು? ಇದಕ್ಕೆ ಯಾರು ಹೊಣೆ? ಎಂಬ ಪ್ರಶ್ನೆ ಕ್ರೀಡಾ ಅಭಿಮಾನಿಗಳಲ್ಲಿ ಕಾಡುತ್ತಿದೆ.
ಯಾವುದೇ ಕ್ರೀಡೆಯಲ್ಲಿ ಗೆಲುವು ಸಾಧಿಸಲು ಆಟಗಾರರಷ್ಟೇ ತರಬೇತಿದಾರರು ಕೂಡಾ ಮಹತ್ವದ ಪಾತ್ರ ವಹಿಸುತ್ತಾರೆ. ಆಯ್ಕೆ ಮಂಡಳಿಯ ಜವಬ್ದಾರಿ ಸಹ ಹೆಚ್ಚಿರುತ್ತದೆ. ಆಟಗಾರ ಮತ್ತು ತರಬೇತುದಾರರ ನಡುವೆ ಉತ್ತಮ ಸಂಬಂಧವಿರಬೇಕು. ತರಬೇತುದಾರನಷ್ಟೇ ಆಟಗಾರನಿಗೆ ಶಿಸ್ತು, ಸಮಯ ಪ್ರಜ್ಞೆ ಇರಬೇಕು. ತರಬೇತುದಾರ ಹಾಗೂ ಆಟಗಾರ ಆಯ್ಕೆ ಮಂಡಳಿಯ ಕೈಬೊಂಬೆಯಾಗದೇ ತಮ್ಮ ಕಾರ್ಯ ನಿರ್ವಹಿಸಬೇಕಾಗುತ್ತದೆ. ಉತ್ತಮ ತರಬೇತಿ ನೀಡಿದರೆ, ಭಾರತದಲ್ಲೂ ಒಲಿಂಪಿಕ್ಸ್ ಪದಕ ಗೆಲ್ಲಬಲ್ಲ ಸ್ಪರ್ಧಿಗಳು ತಯಾರಾಗಿಯೇ ಆಗುತ್ತಾರೆ.
ಕ್ರೀಡಾ ರಂಗದಲ್ಲಿ ಗೆದ್ದಾಗ ಹೊಗಳುವುದು, ಸೋತಾಗ ಬೈಯುವುದನ್ನು ಕ್ರೀಡಾಭಿಮಾನಿಗಳು, ಕ್ರೀಡಾ ಮಂಡಳಿ ಮಾಡುವುದು ಒಳ್ಳೆಯದಲ್ಲ. ಕ್ರೀಡಾಳುಗಳು ಎಲ್ಲಾ ಸ್ಪರ್ಧೆಗಳಲ್ಲಿ ಜಯ ಗಳಿಸುವುದು ಅಸಾಧ್ಯ. ಹಾಗೆಂದ ಮಾತ್ರಕ್ಕೆ ಅವರಿಗೆ ಉತ್ಸಾಹ ನೀಡದಿರುವುದು ಅವರ ಪತನಕ್ಕೆ ನಾಂದಿ ಹಾಡಿದಂತೆ. ಇದನ್ನು ಕ್ರೀಡಾಳುಗಳು, ಆಯ್ಕೆ ಮಂಡಳಿ, ಸರ್ಕಾರ ಅರ್ಥ ಮಾಡಿಕೊಳ್ಳಬೇಕಾಗಿದೆ.
ಶಾಲಾ ಕಾಲೇಜಿನಿಂದಲೇ ಬೇಕು ಉತ್ತಮ ತರಬೇತಿ: ಇಂದು ಶಾಲಾ ಕಾಲೇಜುಗಳಲ್ಲಿ ಪ್ರತಿಭಾವಂತ ಆಟಗಾರರಿಗೆ ಸರಿಯಾದ ತರಬೇತಿ ದೊರೆಯುತ್ತಿಲ್ಲ. ಬೆಳೆಯುವ ಸಿರಿ ಮೊಳಕೆಯೊಡೆಯುವುದನ್ನು ಶಿಕ್ಷಕರೊಂದಿಗೆ ಪೋಷಕರು ತಡೆಯುತ್ತಿದ್ದಾರೆ. ಆಟೋಟಗಳಿಗೆ ಮನ್ನಣೆ ನೀಡದೇ ಬರೀ ರ್‍ಯಾಂಕ್ ಗಳಿಸುವತ್ತ ಗಮನ ಹರಿಸಿರುವುದು ಶೋಚನೀಯ ಸಂಗತಿಯಾಗಿದೆ. ಮೈದಾನ, ಒಳಾಂಗಣ ಕ್ರೀಡಾಂಗಣಗಳು ಗ್ರಾಮೀಣ ಪ್ರದೇಶದ ಶಾಲಾ ಕಾಲೇಜುಗಳಲ್ಲಿ ಇಲ್ಲವಾಗಿದೆ. ಕ್ರೀಡೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ, ಉತ್ತಮ ಆರೋಗ್ಯಕ್ಕೆ ಸಹಕಾರಿ, ಕ್ರೀಡಾ ಚಟುವಟಿಕೆಯಿಂದ ದೇಹ ಮತ್ತು ಮನಸ್ಸು ಸದೃಢವಾಗುತ್ತದೆ ಎಂದು ಭಾಷಣ ಮಾಡುವ ಅಧಿಕಾರಿಗಳು ಕ್ರೀಡೆಗೆ ಪೋ›ತ್ಸಾಹ ನೀಡಲು ಮಾತ್ರ ವಿಫಲರಾಗಿದ್ದಾರೆ. ಸೂಕ್ತ ಮಾರ್ಗದರ್ಶನ, ಪೋ›ತ್ಸಾಹವಿಲ್ಲದೇ ಕ್ರೀಡಾ ಪ್ರತಿಭೆಗಳು ಅವನತಿಯತ್ತ ಸಾಗುತ್ತಿವೆ. ಬರೀ ಭಾಷಣ ಮಾಡದೇ ಶಾಲಾ ಮಟ್ಟದಿಂದಲೇ ಉತ್ತಮ ತರಬೇತಿ ನೀಡಬೇಕಾಗಿದೆ.
ಕ್ರೀಡಾರಂಗದಲ್ಲಿ ಯಶಸ್ಸು ಗಳಿಸಲು ಶಿಸ್ತು, ಸ್ಫೂರ್ತಿ, ಸಹಕಾರ ಅಗತ್ಯವಿದೆ. ಅದಕ್ಕಾಗಿ ಕ್ರೀಡಾಳುಗಳಿಗೆ ತರಬೇತಿ ಅವಶ್ಯವಿದೆ. ಕ್ರೀಡಾ ವೆಚ್ಚ ಭರಿಸಲಾಗದ ಪ್ರತಿಭೆಗಳನ್ನು ಪೋ›ತ್ಸಾಹಿಸಲು ಸಂಘ- ಸಂಸ್ಥೆಗಳು ಮುಂದಾಗಬೇಕು. ಕ್ರೀಡಾ ಜಗತ್ತಿನಲ್ಲಿ ಎಷ್ಟೋ ಪ್ರತಿಭೆಗಳು ಅರ್ಥಿಕ ಸಾಮರ್ಥ್ಯ, ಪೋ›ತ್ಸಾಹವಿಲ್ಲದೇ ನಲುಗುತ್ತಿದ್ದಾರೆ. ಸರ್ಕಾರದ ಸೌಲಭ್ಯಗಳು ನಗರ ಪ್ರದೇಶಗಳಿಗೆ ಮಾತ್ರ ಮೀಸಲಾಗಿರುವುದು ಗ್ರಾಮೀಣ ಮಕ್ಕಳ ದುರ್ವಿಧಿಯೇ ಸರಿ.
ಪಕ್ಷಪಾತ ಮಾಡದಿರಿ: ಕ್ರೀಡಾ ಕ್ಷೇತ್ರದಲ್ಲಿ ಸಮರ್ಥ ಆಟಗಾರರಿದ್ದಾರೆ. ಕೆಲವರು ಜಯದ ಮೆಟ್ಟಿಲುಗಳನ್ನು ಏರುತ್ತಿರುವುದು ಸಂತಸದ ಸಂಗತಿ. ಅಂತೆಯೇ ಹಲವಾರು ಏಕಲವ್ಯನಂತಹ, ಕರ್ಣನಂತಹ ನತದೃಷ್ಟ ಕ್ರೀಡಾಳುಗಳೂ ಇದ್ದಾರೆ. ಆದರೆ, ಆರಂಭದಿಂದ ಅಂತ್ಯದವರೆಗೂ ಅವಕೃಪೆಗೊಳಗಾಗಿ ಹಿಂದೆ ಬಿಳುತ್ತಿದ್ದಾರೆ. ದ್ರೋಣರಂತಹ ಪಕ್ಷಪಾತ ಮಾಡುವ ಆಯ್ಕೆ ಸಮಿತಿಯ ನೀತಿಯಿಂದಾಗಿ ಪ್ರತಿಭಾವಂತರು ವಂಚಿತರಾಗುತ್ತಿದ್ದಾರೆ. ಆಯ್ಕೆ ಸಮಿತಿ ಮತ್ತು ತರಬೇತಿದಾರರಿಗೆ ರಾಜಕೀಯಹಿತಾಸಕ್ತಿ ಇದ್ದರೆ ಕ್ರೀಡಾ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ. ಆಟಗಳ ಸೋಲು- ಗೆಲುವಿಗೆ ತಂಡದ ನಾಯಕನೇ ಹೊಣೆಯಾಗಿರುತ್ತಾನೆ. ಆದ್ದರಿಂದ ಯಾವುದೇ ಆಟದ ತಂಡಕ್ಕೆ ಆಟಗಾರರನ್ನು ಆರಿಸುವಾಗ ಅವನ ಸಲಹೆಗಳಿಗೂ ಮಾನ್ಯತೆ ನೀಡುವುದು ಅಗತ್ಯ. ಹಾಗೆಯೇ ಆಟಗಾರರ ನೋವು ನಲಿವು ಅಸಹಾಯಕತೆಗಳನ್ನು ಮಂಡಳಿ ಗಮನದಲ್ಲಿರಿಸಿಕೊಳ್ಳುವುದು ಶ್ರೇಯಸ್ಕರ.
ಯೋಗೀಶ್ ತೀರ್ಥಪುರ