ಬಾಗಲಕೋಟೆ: ವಿದ್ಯಾರ್ಥಿಗಳು ಹಾಗೂ ಬೆಳೆಯುವ ಮಕ್ಕಳು ದೈಹಿಕ, ಮಾನಸಿಕವಾಗಿ ಸದೃಢವಾಗಬೇಕಾದರೆ ಕ್ರೀಡೆ ಅವಶ್ಯ ಎಂದು ಶಾಸಕ ಡಾ| ವೀರಣ್ಣ ಚರಂತಿಮಠ ಹೇಳಿದರು. ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬಿಇಒ ಕಚೇರಿ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡ ಪ್ರಾಥಮಿಕ ಹಾಗೂ ಪ್ರೌಢಶಾಲಾ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಿಂದ ತಮಗರಿವಿಲ್ಲದೇ ದೇಹದ ಅಂಗಾಂಗಗಳು ತಂತಾನೆ ಪುಷ್ಟಿಗೊಂಡು ಸುಂದರ ಕಾಯವಾಗುವುದು. ಇದನ್ನು ಗಮನಿಸಿದ ಪ್ರಧಾನಿ ಮೋದಿ ಮಕ್ಕಳಿಗೆ ಬೌದ್ಧಿಕ ಹಾಗೂ ಕ್ರೀಡೆಗೆ ಪ್ರೋತ್ಸಾಹಕ ಯೋಜನೆ ಜಾರಿಗೆ ತಂದಿದ್ದಾರೆ. ಅಲ್ಲದೇ ಸ್ವಚ್ಛತೆ, ಶಿಸ್ತು, ದಕ್ಷತೆ ಮಕ್ಕಳಿಂದಲೇ ಆರಂಭಗೊಳ್ಳಲಿ ಎಂಬ ಉದ್ದೇಶದಿಂದ ಸ್ವಚ್ಛ ಭಾರತ ಯೋಜನೆ ಜಾರಿಗೆ ತಂದಿದ್ದಾರೆ ಎಂದರು.
ಇಂತಹ ಹಲವು ಸಣ್ಣ ವಿಷಯಗಳಿಗೂ ಪ್ರಧಾನಿ ಮೋದಿ ಹೆಚ್ಚಿನ ಗಮನ ಹರಿಸಿ, ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗಿಯೇ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ದೇಶದ ಅತೀ ಹಿಂದುಳಿದ ಹಾಗೂ ಅಭಿವೃದ್ಧಿ ಹಂತದಲ್ಲಿರುವ ಇಲಾಖೆಗಳಿಗಾಗಲಿ, ಜನರಿಗಾಗಲಿ ಅಂಗನವಾಡಿ ಕಾರ್ಯಕರ್ತೆಯಿಂದ ಹಿಡಿದು ಆಶಾ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಇಂತಹ ಸಣ್ಣ ವಿಷಯಗಳನ್ನು ಅಡಗಿರುವ ಮಹತ್ವ ತಿಳಿಸಿದ್ದಾರೆ ಎಂದರು. ಗ್ರಾಮೀಣ ಕ್ರೀಡೆಗಳಾದ ಮಲ್ಲ ಕಂಬ, ಖೋ ಖೋ ಕಬಡ್ಡಿಗಳಂತಹ ದೇಶಿ ಕ್ರೀಡೆಗೆ ಹೆಚ್ಚು ಒತ್ತು ನೀಡಬೇಕಾಗಿದ್ದು, ಈ ಹಿಂದೆ ಮಲ್ಲ ಕಂಬ ಸ್ಪರ್ಧೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ದಸರಾ ಪ್ರಶಸ್ತಿ ತಂದಿದ್ದು, ಜಿಲ್ಲೆಯ ಹೆಮ್ಮೆಯ ವಿಷಯ. ವಿದ್ಯಾರ್ಥಿಗಳು ಅಂತಹ ಕ್ರೀಡೆಗಳತ್ತ ಗಮನಹರಿಸಬೇಕು ಎಂದರು. ದೈಹಿಕ ಶಿಕ್ಷಕರು ಕ್ರೀಡೆಗಾಗಿ ಶ್ರಮ ವಹಿಸಿದ್ದು, 2008ರಲ್ಲಿ ಬಡ್ತಿ ಹೊರತುಪಡಿಸಿದರೆ ಇಲ್ಲಿಯವರೆಗೆ ಅವರ ಬಡ್ತಿ ಆಗಲಾರದನ್ನು ಸರಕಾರದ ಗಮನಕ್ಕೆ ಕೂಡಲೇ ತರುವುದಾಗಿ ಹೇಳಿದರು.
ತಾಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ ಮಾತನಾಡಿ, ಕ್ರೀಡಾಕೂಟಕ್ಕೆ ತಾಲೂಕಿನಿಂದ 23 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಸಂತಸದ ವಿಷಯ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದವರೆಗೂ ಸ್ಪರ್ಧಿಸಿ ಕೀರ್ತಿ ತರಬೇಕೆಂದು ಸಲಹೆ ನೀಡಿದರು. ಡಿಡಿಪಿಐ ಎಂ.ಆರ್. ಕಾಮಾಕ್ಷಿ ಮಾತನಾಡಿ, ಮಕ್ಕಳಲ್ಲಿ ಹುದುಗಿದ ಕ್ರೀಡಾ ಸಾಮರ್ಥ್ಯ ಹೊರ ಹಾಕಲು ಇಂತಹ ಸ್ಪರ್ಧೆಗಳು ಅವಶ್ಯ. ಸರಕಾರ ಅದಕ್ಕಾಗಿ ಪ್ರತಿಭಾ ಪುರಸ್ಕಾರ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡಿದೆ ಎಂದರು. ಕ್ಷೇತ್ರ ಶಿಕ್ಷಣಾಧಿ ಕಾರಿ ದೊಡ್ಡಬಸಪ್ಪ ನೀರಲಕೇರಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಎಸ್. ಬಿರಾದಾರ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ವಿ. ಪಾಟೀಲ ಉಪಸ್ಥಿತರಿದ್ದರು.