Advertisement

ಮೇ 3ರ ತನಕ ಸಾಯ್‌ ತರಬೇತಿ ಶಿಬಿರ ಬಂದ್‌

01:32 AM Apr 15, 2020 | Hari Prasad |

ಹೊಸದಿಲ್ಲಿ: ಮೇ 3ರತನಕ ದೇಶದಲ್ಲಿ ಕ್ರೀಡಾ ತರಬೇತಿ ಚಟುವಟಿಕೆಗಳನ್ನು ಆರಂಭಿಸದಿರಲು ಸಾಯ್‌ (ಭಾರತೀಯ ಕ್ರೀಡಾ ಪ್ರಾಧಿಕಾರ) ನಿರ್ಧರಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಲಾಕ್‌ಡೌನ್‌ ಅವಧಿಯನ್ನು ವಿಸ್ತರಿಸಿದ ಬೆನ್ನಲ್ಲೇ ಸಾಯ್‌ ತನ್ನ ನಿರ್ಧಾರವನ್ನು ಪ್ರಕಟಿಸಿದೆ.

Advertisement

‘ಕೋವಿಡ್ 19 ವೈರಸ್ ಪ್ರಕರಣ ದೇಶದಲ್ಲಿ ವ್ಯಾಪಿಸುತ್ತಿದ್ದಂತೆ ಎ.14ರ ತನಕ ಕೇಂದ್ರ ಸರಕಾರ ಲಾಕ್‌ಡೌನ್‌ ಘೋಷಿಸಿತ್ತು. ಆಗಿನಿಂದಲೇ ಎಲ್ಲ ಕ್ರೀಡಾ ಶಿಬಿರಗಳನ್ನು ಸಾಯ್‌ ಮೊಟಕುಗೊಳಿಸಿತ್ತು. ಆ್ಯತ್ಲೀಟ್‌ಗಳನ್ನೆಲ್ಲ ಮನೆಗೆ ತೆರಳುವಂತೆ ಸೂಚಿಸಿತ್ತು. ಒಲಿಂಪಿಕ್ಸ್‌ಗೆ ಅಭ್ಯಾಸ ನಡೆಸುತ್ತಿರುವ ಕ್ರೀಡಾಪಟುಗಳನ್ನು ಹೊರತು ಪಡಿಸಿ ಉಳಿದೆಲ್ಲ ಆ್ಯತ್ಲೀಟ್‌ಗಳು ಮನೆ ಸೇರಿಕೊಂಡಿದ್ದರು. ಸದ್ಯ ಲಾಕ್‌ಡೌನ್‌ ಅವಧಿಯನ್ನು ಮೇ 3ರ ವರೆಗೆ ವಿಸ್ತರಿಸಲಾಗಿದ್ದು ಅಲ್ಲಿ ತನಕ ಸಾಯ್‌ ಕೇಂದ್ರದಲ್ಲಿ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ ಎಂದು ಸಾಯ್‌ ಮೂಲಗಳು ತಿಳಿಸಿವೆ.

ಸದ್ಯ ಬೆಂಗಳೂರು ಹಾಗೂ ಪಟಿಯಾಲದ ಕೇಂದ್ರಗಳಲ್ಲಿ ಕೆಲವು ಕ್ರೀಡಾಪಟುಗಳಿದ್ದಾರೆ. ಅವರೆಲ್ಲರೂ ಅಲ್ಲೆ ಉಳಿಯಲಿದ್ದಾರೆ’ ಎಂದು ಹೇಳಲಾಗಿದೆ. ಖ್ಯಾತ ಜಾವೆಲಿನ್‌ ತಾರೆ ನೀರಜ್‌ ಜೋಪ್ರಾ ಸೇರಿದಂತೆ ಹಲವು ತಾರಾ ಆ್ಯತ್ಲೀಟ್‌ಗಳು ಪಟಿಯಾಲದಲ್ಲಿ ಉಳಿದುಕೊಂಡಿದ್ದಾರೆ.

ಹಾಕಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಮುಂದೂಡಿಕೆ
ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಅನ್ನು ಹಾಕಿ ಇಂಡಿಯಾ ಮುಂದೂಡಿದೆ. ಲಾಕ್‌ಡೌನ್‌ ಆದೇಶ ಮುಂದುವರಿಕೆಯಾದ ಬೆನ್ನಲ್ಲೇ ತನ್ನ ನಿರ್ಧಾರವನ್ನು ಅದು ಘೋಷಿಸಿದೆ. ಎ.29ರಿಂದ ಜು. 3ರ ತನಕ ಕೂಟ ನಡೆಸುವುದಾಗಿ ಹಾಕಿ ಇಂಡಿಯಾ ಈ ಹಿಂದೆ ತಿಳಿಸಿತ್ತು. ಸದ್ಯ ಕೂಟವನ್ನು ಮುಂದೂಡಿಕೆ ಮಾಡಿದೆ. ಅಧಿಕೃತ ದಿನಾಂಕವನ್ನು ಇನ್ನಷ್ಟೇ ಪ್ರಕಟಪಡಿಸಬೇಕಿದೆ.

‘ಆಟಗಾರರು, ಕೋಚ್‌, ಸಂಘಟಕರು, ಅಭಿಮಾನಿಗಳು ಹಾಗೂ ಅಧಿಕಾರಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಇಂತಹದೊಂದು ನಿರ್ಧಾರಕ್ಕೆ ಬಂದಿದ್ದೇವೆ, ಸರಕಾರದ ಮುಂದಿನ ಆದೇಶದ ಬಳಿಕ ಕೂಟವನ್ನು ನಡೆಸಲಾಗುತ್ತದೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಮುಷ್ತಾಕ್‌ ಅಹ್ಮದ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next