ಪಡೀಲ್: ನಗರಕ್ಕೆ ಪ್ರವೇಶ ಕಲ್ಪಿಸುವ ಮಹತ್ವದ ಪಡೀಲ್-ಪಂಪ್‌ವೆಲ್ ಮಧ್ಯೆ 2.8 ಕಿ.ಮೀ. ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಾಣದ ಮೊದಲನೇ ಹಂತದ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ.
ಸುಮಾರು 26 ಕೋ. ರೂ. ವೆಚ್ಚದಲ್ಲಿ ಸ್ಮಾರ್ಟ್‌ಸಿಟಿಯಡಿಯಲ್ಲಿ ಸ್ಮಾರ್ಟ್ ರಸ್ತೆ ಪ್ಯಾಕೇಜ್-5ರಲ್ಲಿ ಚತುಷ್ಪತ ರಸ್ತೆಯಾಗಿ ಅಭಿವೃದ್ಧಿಗೊಳ್ಳುತ್ತಿದೆ. ಪಡೀಲ್‌ನಿಂದ ರಸ್ತೆ ವಿಸ್ತರಣೆ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ.
ಜೆಸಿಬಿ ಮುಖೇನ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದೆ. ಈ ರಸ್ತೆ ಸದ್ಯ ಡಾಮರು ಅಳವಡಿಸಿದ್ದು, 10 ಮೀ. ವಿಸ್ತೀರ್ಣವನ್ನು ಹೊಂದಿದೆ. ಇದೀಗ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತನೆಯಾಗಲಿದೆ. ಸುಮಾರು 2.8 ಕಿ.ಮೀ. ರಸ್ತೆ ಇದಾಗಿದ್ದು, ಅಡಿಯಲ್ಲಿ 24 ಮೀ. ವಿಸ್ತೀರ್ಣದ ಚತುಷ್ಪಥ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತನೆಯಾಗಲಿದೆ.
ಇದರಲ್ಲಿ 3.50 ಮೀ. ವಿಸ್ತೀರ್ಣದ 4 ಲೇನ್ ಕಾಂಕ್ರೀಟ್ ವೇ, ರಸ್ತೆ ಇಕ್ಕೆಲದಲ್ಲಿ 3 ಮೀ. ವಿಸ್ತೀರ್ಣಕ್ಕೆ ಇಂಟರ್‌ಲಾಕ್ ಅಳವಡಿಸಲಾಗುತ್ತದೆ. ರಸ್ತೆ ಇಕ್ಕೆಲದಲ್ಲಿ ಫುಟ್‌ಪಾತ್, ಚರಂಡಿ, ಯುಟಿಲಿಟಿ ಡಕ್ಟ್, ರಸ್ತೆ ಮಧ್ಯೆ ಮೀಡಿಯನ್ ಜತೆಗೆ ದಾರಿ ದೀಪ ವ್ಯವಸ್ಥೆ ಇರುತ್ತದೆ. ಯೋಜನ ವೆಚ್ಚ 26 ಕೋ.ರೂ. ಆಗಿದ್ದು, ರಾಜ್ಯ ಸರಕಾರ ಪೂರಕ ಕೆಲಸಗಳಿಗಾಗಿ 4 ಕೋ.ರೂ. ಒದಗಿಸಲಿದೆ. ಪಡೀಲ್-ಪಂಪ್‌ವೆಲ್ ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆ ದರೆ ಪಂಪ್‌ವೆಲ್‌ನಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ ಬಸ್ ಟರ್ಮಿನಲ್‌ಗೆ ಹೆಚ್ಚು ಅನುಕೂಲವಾಗಲಿದೆ.
ಜತೆಗೆ, ಪಡೀಲ್‌ನಲ್ಲಿ ಹೊಸದಾಗಿ ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣವಾಗುತ್ತಿರುವ ಕಾರಣದಿಂದ ಮುಂಬರುವ ದಿನಗಳಲ್ಲಿ ಈ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಹೊಸ ಕಾಂಕ್ರೀಟ್ ರಸ್ತೆಯಾದರೆ ಪ್ರಯಾಣಿಕರಿಗೆ ನೆರವಾಗಬಹುದು. ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೂ ಇದರಿಂದ ಸಹಾಯವಾಗಲಿದೆ. ಮಂಗಳೂರು, ತಲಪಾಡಿ, ಬೆಂಗಳೂರು, ಬಿ.ಸಿ.ರೋಡ್ ಭಾಗದಿಂದ ಪಡೀಲ್ ರಸ್ತೆಯಲ್ಲಿ ಬರುವ ವಾಹನದವರಿಗೆ ಹೆಚ್ಚು ಅನುಕೂಲವಾಗಲಿದೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿ
ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಪಡೀಲ್ -ಪಂಪ್‌ವೆಲ್ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಚತುಷ್ಪಥ ಕಾಂಕ್ರೀಟ್ ರಸ್ತೆ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ರಸ್ತೆ ವಿಸ್ತರಣೆಗೆ ಕೆಲವೊಂದು ಕಡೆಗಳಲ್ಲಿ ತೊಡಕುಗಳಿದ್ದು, ಅದನ್ನು ಬಗೆಹರಿಸಿ ಕಾಮಗಾರಿಗೆ ವೇಗ ನೀಡಲಾಗುತ್ತಿದೆ.
-ಡಿ. ವೇದವ್ಯಾಸ ಕಾಮತ್, ಶಾಸಕರು