Advertisement
ಸುರಿಯುವ ಮಳೆ. ದೂರದ ಊರಿನಲ್ಲಿ ಓದುತ್ತಿರುವ ಮಕ್ಕಳು. ಮನೆಯಲ್ಲಿ ಯಾರೊಬ್ಬರೂ ಇಲ್ಲದ ಹೊತ್ತು, ಎಷ್ಟೋ ದಿನಗಳ ಹಂಬಲಿಕೆಗೆ ಉತ್ತರದಾಯಿಯಾಗಿ, ಏನಾದರೂ ಓದಿಕೋ, ಎಷ್ಟಾದರೂ ಬರೆ, ಬೇಕಾದಷ್ಟು ನಿದ್ದೆ ಮಾಡು.. ಒಳ ಮನಸು ಕೂಗಿ ಕೂಗಿ ಹೇಳುತ್ತಿತ್ತು. ಅದೆಂತಾ ಬೋರ್ ಹೊಡೆಯಿತು ಅಂದರೆ ಏನೂ ಕೆಲಸವಿಲ್ಲದಿದ್ದರೂ, ನನ್ನ ಇಷ್ಟದ ಯಾವ ಕೆಲಸಗಳನ್ನೂ ಮಾಡಲಾಗದ ಪರಿಸ್ಥಿತಿ. ಹೀಗೇ ಇನ್ನಷ್ಟು ಹೊತ್ತು ಇದ್ದರೆ ಸತ್ತೇ ಹೋಗಿಬಿಡುವೆನೇನೋ ಅನ್ನುವ ದಿಗಿಲು ಶುರುವಾಯಿತು.
Related Articles
ಎಷ್ಟೋ ಸಲ ಬಾಲ್ಯದಲ್ಲಿ ನನ್ನ ಅಮ್ಮನ ಓರಗೆಯವರು ಒಟ್ಟು ಸೇರಿದಾಗ ಇದೇ ವಾಕ್ಯ ಆಡಿದ್ದನ್ನು ಬಹಳ ಬಾರಿ ಕೇಳಿಸಿಕೊಂಡಿದ್ದೇನೆ. “ಸಾಕಾಯ್ತು ಈ ಗೋಳು, ಒಮ್ಮೆಯಾದರೂ ಯಾವ ರಗಳೆ ಇಲ್ಲದೆ ಸುಮ್ಮಗೆ ಬದುಕಿಬಿಡಬೇಕು’ ಎಂದು ಅಮ್ಮ ಹೇಳಿದ ಮಾತುಗಳು ಈಗ ಅದೇ ಹೊಸ್ತಿಲಿನಲ್ಲಿ ನಿಂತಿರುವ ನನ್ನಂಥವರ ಬಾಯಿಯಿಂದ ಪುನರಾವರ್ತನೆಗೊಳ್ಳುತ್ತಿದೆ. ಕಾಲ ಕೆಲವೊಂದು ವಾಕ್ಯಗಳನ್ನ ತನ್ನ ಸಂದರ್ಭಕ್ಕೆ ಅನುಸಾರವಾಗಿ ತನ್ನ ಬತ್ತಳಿಕೆಯಿಂದ ಬಿಡುತ್ತದೆಯಾ? ಹೂವು, ಹೀಚು, ಕಾಯಿ, ಹಣ್ಣಾಗುವ ತೆರದಲಿ ನಮ್ಮ ಮನಸ್ಥಿತಿಗಳೂ ಬದಲಾಗುತ್ತವಾ?
Advertisement
ಮೊನ್ನೆಯೊಮ್ಮೆ ಹೀಗೇ ಇದೇ ನೈರಾಶ್ಯ ನನ್ನೊಳಗೆ ಹೊಕ್ಕು ಒಳಗನ್ನು ಅಯೋಮಯಗೊಳಿಸಿದ ಹೊತ್ತು ಕಂಗಾಲಾಗಿದ್ದೆ. ಎಲ್ಲರಿಗೂ ಹೀಗಾಗುತ್ತದೋ? ಅಥವಾ ತನಗೆ ಮಾತ್ರ ಹೀಗೆಯಾ? ಅಂತೆಲ್ಲಾ ಯೋಚಿಸಿದ್ದೆ. ಅದೇ ಸಮಯಕ್ಕೆ ಗೆಳತಿಯೊಬ್ಬಳು ಪೋನಾಯಿಸಿ, ಏನೆಲ್ಲ ತಾಪತ್ರಯ, ಅಡುಗೆ ಚೆನ್ನಾಗಿಲ್ಲವೆಂಬ ರಂಪ, ತಟ್ಟೆ ಮೂಲೆಗೆ ತಳ್ಳಿ ಕೈ ತೊಳೆದುಕೊಳ್ಳುವ ಮಕ್ಕಳು, ಹಾಗಂತ ಮಾಡದೇ ಇರೋಕೆ ಆಗುತ್ತದಾ? ಇವರುಗಳ ಹಿಂದೆ ಅಲೆಯುವುದ ಬಿಟ್ಟು, ಯಾವ ರಗಳೆಯೂ ಬೇಡವೆಂದು ಎಲ್ಲಿಗಾದರೂ ಓಡಿ ಹೋಗಿ, ಸುಮ್ಮಗೆ ಬದುಕಬೇಕು ಅನ್ನಿಸುತ್ತದೆ. ಹಾಗೆ ಮಾಡಿದರೆ ಏನಾಗಬಹುದು? ಅಂತ ಪ್ರಶ್ನೆ ಹಾಕಿದಳು.
ಈಗ ಓಡಲಿಕ್ಕೆ ಹೋಗಬೇಡ, ಬಿದ್ದು ಕೈಕಾಲು ಮುರಿದುಕೊಂಡರೆ, ಓಡುವುದು ಹೋಗಲಿ, ನಡಿಯೋದಕ್ಕೂ ಸಾಧ್ಯ ಇಲ್ಲ ಅಂತ ಅಣಕಿಸಿ ನಕ್ಕೆ. ಬಹುಶಃ ಇದು ನನ್ನೊಬ್ಬಳ ಸಮಸ್ಯೆ ಅಲ್ಲ, ಇದೊಂದು ಜಾಗತಿಕ ಸಮಸ್ಯೆ ಅಂತ ಗೊತ್ತಾದಾಗ ಆ ಕ್ಷಣಕ್ಕೆ ಮನಸು ಹಗುರವಾಗಿತ್ತು.
ಅಸಲಿಗೆ ಸುಮ್ಮಗೆ ಹೀಗೇ ಜೀವಿಸಬೇಕು ಅಂತ ಯೋಚನೆಗೆ ಬರುವುದು ಬರೇ ಹೆಣ್ಣು ಮಕ್ಕಳಿಗಾ? ಅಥವಾ ಎಲ್ಲರಿಗೂ ಈ ಯೋಚನೆ ಬರುತ್ತದಾ? ಬಿಡುಗಡೆಯೆಂದರೆ ಇದೇನಾ? ಅಷ್ಟಕ್ಕೂ ಸುಮ್ಮಗೆ ಬದುಕುವುದು ಅಂದರೆ ಏನು?
ಆಕಸ್ಮಿಕವಾಗಿ ತೀರಾ ಎಳವೆಯಲ್ಲಿ ನನ್ನ ಅಪ್ಪನನ್ನು ಕಳೆದುಕೊಳ್ಳುವ ಪ್ರಸಂಗ ಬಂತು. ಇದೊಂದು ಅನಿರೀಕ್ಷಿತ ಸಂಗತಿ ಆದ ಕಾರಣ ನಾನು ಒಂದು ರೀತಿಯಲ್ಲಿ ಖಾಲಿ ಆಗಿದ್ದೆ. ಎಲ್ಲರೂ ಅಳುತ್ತಿದ್ದಾರೆ. ನನ್ನ ಕಣ್ಣು ಯಾಕೆ ಹನಿಯುತ್ತಿಲ್ಲ? ಯಾವುದೋ ಶೂನ್ಯವೊಂದು ನನ್ನನ್ನು ಆವರಿಸಿಕೊಂಡಿತ್ತು. ಎಲ್ಲರೂ ಅಳುತ್ತಿದ್ದಾರೆ, ಸಂತೈಸುತ್ತಿದ್ದಾರೆ. ನನಗೆ ಇದು ಯಾವುದೂ ಸಂಬಂಧವಿಲ್ಲವೆಂಬಂತೆ ಯಾಂತ್ರಿಕವಾಗಿ ನೆಟ್ಟ ನೋಟದಿಂದ ನೋಡುತ್ತಿರುವೆ. ಅಮ್ಮನೂ ಗರಬಡಿದಂತೆ ಕೂತಿದ್ದಾಳೆ. ಮತ್ತೆ ಎಷ್ಟೋ ದಿನಗಳೇ ಕಳೆದಿತ್ತು ಸಹಜವಾದ ಸ್ಥಿತಿಗೆ ಬರುವುದಕ್ಕೆ. ಸುಮ್ಮಗೆ ಜೀವಿಸಿದ್ದೆಂದರೆ ಅದುವೇ ಆಗಿರಬಹುದಾ? ಆ ನಡುವೆ ಎಷ್ಟೋ ಸಮಯದವರೆಗೆ ಅಮ್ಮ ಯಾವುದೋ ಲೋಕದಲ್ಲಿ ಕಳೆದುಹೋಗಿದ್ದಳು. ಭವಿಷ್ಯದ ಪ್ರಶ್ನೆ ಭೂತಾಕಾರವಾಗಿ ಅವಳ ಮುಂದೆ ನಿಂತಿತ್ತೋ ಏನೋ. ಕೆಲಸಗಳೆಲ್ಲಾ ಯಾಂತ್ರಿಕವಾಗಿ ಸಾಗುತ್ತಿತ್ತು. ಎಲ್ಲ ಸದ್ದುಗಳ ನಡುವೆ ನೀರಸ ಮೌನವೊಂದು ಆವರಿಸಿಕೊಂಡಿತ್ತು. ಸತ್ತದ್ದು ಯಾರು? ಅಪ್ಪನಾ? ನಾವುಗಳಾ? ಮತ್ತದೇ ಕಾಡುವ ಗೊಂದಲ. ಸುಮ್ಮಗೆ ಜೀವಿಸುವುದೆಂದರೆ ಹೀಗೆಯಾ..?
ಎಲ್ಲರೂ ಒಮ್ಮೊಮ್ಮೆಯಾದರೂ ಸುಮ್ಮಗೆ ಬದುಕಬೇಕೆಂಬ ಆಸೆ ಹೊತ್ತವರೇ. ಹಿರಿಯ ಕವಿ ಎಚ್.ಎಸ್.ವಿ.ಯವರ “ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ, ಮಳೆ ಸುರಿಸಿ ಹಗುರಾದ ಮುಗಿಲಿನಂತೆ’ ಅನ್ನುವ ಭಾವ ಗೀತೆ ಕೇಳಿದಾಗಲೆಲ್ಲಾ ಸುಮ್ಮಗೆ ಜೀವಿಸುವ ಹೊಸತೊಂದು ಅರ್ಥ ತೆರೆದುಕೊಳ್ಳತೊಡಗುತ್ತದೆ.
ಕೆಲ ದಿನಗಳ ಹಿಂದೆಯೊಮ್ಮೆ ಮೂರು ದಿನದ ಸಾಹಿತ್ಯದ ಕಾರ್ಯಕ್ರಮವೊಂದಕ್ಕೆ ಆಹ್ವಾನ ಬಂದಿತ್ತು. ಅದೇ ಅಡುಗೆ ಮನೆ, ಹಿತ್ತಲು, ಹಟ್ಟಿ, ತೋಟಕ್ಕೆ ನಡೆದಾಡಿ ಉದಾಸೀನ ಹಿಡಿದಿತ್ತು. ಒಂದು ಬದಲಾವಣೆ ಬೇಕು ತಾನೇ? ಒಂದೆರಡು ದಿನದ ಮಟ್ಟಿಗೆ ಯಾರ ಕಿರಿಕಿರಿಯಿಲ್ಲದೆ ಸುಮ್ಮಗೆ ಜೀವಿಸಬೇಕೆಂದು ನಿರ್ಧರಿಸಿ ಹೊರಡುವ ತಯಾರಿ ನಡೆಸಿದ್ದೆ. ಎರಡು ದಿನದ ಮಟ್ಟಿಗೆ ಹೊರಡಬೇಕೆಂದರೂ ಒಂದು ವಾರದಿಂದಲೇ ತಯಾರಿ ನಡೆಸಬೇಕು. ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಿಟ್ಟು ಹೋಗಬೇಕಾಗುತ್ತದೆ. ಇಲ್ಲದಿದ್ದರೆ, ಅದೆಲ್ಲಿ, ಇದೆಲ್ಲಿ ಅಂತ ನಡುನಡುವೆ ಕರೆಬಂದು, ನಮ್ಮ ಏಕಾಂತಕ್ಕೆ ಭಂಗ ಬಂದು ಬಂದ ಉದ್ದೇಶವೇ ಅರ್ಥಗೆಡುತ್ತದೆ. ನನ್ನೊಂದಿಗೆ ನನ್ನ ಅಷ್ಟೂ ಜನ ಗೆಳತಿಯರು ಇದ್ದರು. ಎಲ್ಲರೂ ಪರಿಚಿತರೇ. ಅವರೆಲ್ಲರೂ ಒತ್ತಡದ ನಡುವೆ ಸುಮ್ಮಗೆ ಎರಡು ದಿನ ನಮ್ಮ ಪಾಡಿಗೆ ಬದುಕಿ ಬಿಡುವ ಅಂತ ಯಾವುದೋ ಹುಕಿಯಲ್ಲಿ ಮನೆಯಿಂದ ಹೊರಟು ಬಂದವರು.
ಮಾತು, ಹರಟೆ, ಗೋಷ್ಠಿಗಳ ನಡುವೆ ಒಂದಷ್ಟು ಕಾಲ ಮೈಮರೆತೆವು. ಮನಸಿಗೆ ಒಂದು ರೀತಿಯ ರಿಲ್ಯಾಕ್ಸ್ ಆದ ಅನುಭವ. ಆ ರಾತ್ರೆಯಂತೂ ನಮ್ಮೆಲ್ಲರದ್ದು ಮಾತು… ಮಾತು.. ನಡುರಾತ್ರೆಯವರೆಗೂ. ನಾಳೆ ಬೆಳಗ್ಗೆ ಬೇಗ ಏಳಬೇಕಿಲ್ಲ, ತಿಂಡಿ, ಅಡುಗೆ ಒಂದೂ ಇಲ್ಲ, ಯಾವ ರಗಳೆಯೂ ಇಲ್ಲ. ಬೆಳಗ್ಗೆ ಅದಷ್ಟೂ ತಡವಾಗಿ ಎದ್ದೆವು. ಮಾಡಿಕೊಟ್ಟದ್ದನ್ನ ತಿಂದೆವು. ಮತ್ತೆ ಉಪನ್ಯಾಸ, ಗೋಷ್ಠಿಗಳ ನಡುವೆ ಕಳೆದುಹೋದೆವು. ಆ ರಾತ್ರಿ ಮಾತ್ರ ಯಾಕೋ ಸರಿಯಾಗಿ ನಿದ್ದೆ ಬರಲಿಲ್ಲ. ಏನೋ ತಳಮಳ, ಮನೆಯ ಸೆಳೆತ ಶುರುವಾಗತೊಡಗಿತು. ಆ ದಿನ ಎಲ್ಲ ಗೆಳತಿಯರದ್ದೂ ಅದೇ ಚಿಂತೆ. ಒಮ್ಮೆ ಮನೆ ತಲುಪಿದರೆ ಸಾಕಿತ್ತಪ್ಪಾ ಅಂತ. ಮಾರನೆ ದಿನ ಬ್ಯಾಗ್ ಪ್ಯಾಕ್ ಮಾಡಿ ಹೊರಟು ನಿಂತಾಗ ಅನ್ನಿಸಿದ್ದು ಇಷ್ಟೇ: “ಎಲ್ಲಾ ಸರಿ, ಒಂದು ದಿನಕ್ಕಿಂತ ಜಾಸ್ತಿ ಮನೆಯಿಂದ ಹೊರಗುಳಿಯಬಾರದಪ್ಪ!’
ಮತ್ತೆ ಒಂದಷ್ಟು ದಿನಕ್ಕೆ ಎಲ್ಲ ನೆನಪುಗಳು ಮರೆತಂತೆ ಖಾಲಿತನವೊಂದು ಆವರಿಸಿಕೊಳ್ಳುತ್ತದೆ. ಸುಮ್ಮಗೆ ಜೀವಿಸಬೇಕೆಂದು ಮನಸು ಹಾತೊರೆಯುತ್ತದೆ. ಆ ಹಾತೊರೆಯುವಿಕೆಯೊಂದು ಭ್ರಮೆಯಾ? ಯಾವುದೇ ಅರ್ಥಗಳಿಲ್ಲದೆ ಸುಮ್ಮಗೆ ಬದುಕುವುದೂ ಸತ್ತಂತೇ ಅನ್ನುವ ಜ್ಞಾನೋದಯವಾದ ಗಳಿಗೆಯಲ್ಲಿ ಒಳಗೊಂದು ಉತ್ಸಾಹ ಗರಿಗೆದರಿಕೊಳ್ಳುತ್ತದೆ.
– ಸ್ಮಿತಾ ಅಮೃತರಾಜ್, ಸಂಪಾಜೆ