Advertisement

ವಯಸ್ಸಿನ ಮಿತಿ ದಾಟಿ ‘ರಂಗಸ್ಥಳ’ದಲ್ಲಿ ಮಿಂಚಿದ ಮಹಿಳಾ ಮಣಿಗಳು

10:32 PM Aug 24, 2018 | Karthik A |

ಶಿರಸಿ: ವಿದ್ಯೆಯ ಕಲಿಕೆಗೆ ವಯಸ್ಸಿನ ಮಿತಿ ಇಲ್ಲ. ಇದಕ್ಕೇ ಕರಾವಳಿಯ ಗಂಡುಕಲೆ ಯಕ್ಷಗಾನವೂ ಹೊರತಲ್ಲ. ಯಕ್ಷಗಾನ ಗಂಡುಕಲೆಯೇ ಆಗಿದ್ದರೂ ಇಲ್ಲಿ ಬಣ್ಣಹಚ್ಚಿ ಕುಣಿದದ್ದು ‘ನಾರೀ’ಶಕ್ತಿ!, ಅದೂ ಇಪ್ಪತೈದರಿಂದ ಹಿಡಿದು ಅರವತ್ತರ ಆಸುಪಾಸಿನವರೆಗಿನ ಉತ್ಸಾಹೀ ಮಹಿಳಾಮಣಿಗಳ ತಂಡ. ಯಕ್ಷಗಾನದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೊಸತೇನಲ್ಲ. ಹಲವಾರು ಹವ್ಯಾಸಿ ಮಹಿಳಾ ಯಕ್ಷಗಾನ ತಂಡಗಳು ಈಗಾಗಲೇ ನಾಡಿನ ಉದ್ದಗಲದಲ್ಲಿ ಮಾತ್ರವಲ್ಲದೇ ಹೊರದೇಶಗಳಲ್ಲೂ ಯಕ್ಷಗಾನ ಪ್ರದರ್ಶನವನ್ನು ನೀಡಿ ಸೈ ಎನಿಸಿಕೊಂಡಿರುವ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ವಿಷಯ ಹೀಗಿರುತ್ತಾ, ಇದೀಗ 60 ವರ್ಷಕ್ಕೂ ಮೇಲ್ಪಟ್ಟವರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳು ಮತ್ತು ಕುಟುಂಬ ಹೊಣೆಗಾರಿಕೆಯ ನಡುವೆ ಬಿಡುವ ಮಾಡಿಕೊಂಡು ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಕಲಿತು ‘ಸುಧನ್ವ ಮೋಕ್ಷ’ ಎಂಬ ಜನಪ್ರಿಯ ಪ್ರಸಂಗವನ್ನು ಯಶಸ್ವಿಯಾಗಿ ಪ್ರದರ್ಶಿಸಿ ನಾರೀ ಶಕ್ತಿಯನ್ನು ಯಕ್ಷಪ್ರಿಯರಿಗೆ ಪರಿಚಯಿಸಿದ್ದಾರೆ.

Advertisement


ಶಿರಸಿಯ ಆದರ್ಶ ವನಿತಾ ಸಮಾಜದಲ್ಲಿ ಇಂಥದೊಂದು ಕಲಿಕೆಗೆ ವಿನೂತನ ಆಯಾಮವೊಂದು ಸಿಕ್ಕಿದೆ. ಕಳೆದ ಆರು ತಿಂಗಳುಗಳಿಂದ ನಿರಂತರವಾಗಿ ಯಕ್ಷಗಾನ ಕಲಿಕೆ ಮಾಡುತ್ತಿದ್ದ ಮಹಿಳಾ ಆಸಕ್ತರ ದಂಡು ಮೊನ್ನೆ ಮೊನ್ನೆಯಷ್ಟೇ ಯಕ್ಷಗಾನ ವೇಷಗಳನ್ನು ತೊಟ್ಟು ಹೆಜ್ಜೆ ಹಾಕಿದರು. ಮಾತಿನ ಚಾಕಚಕ್ಯತೆಯ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಇವರಿಗೆ ಸಮರ್ಥ ಹಿಮ್ಮೇಳದ ಸಾಥ್ ಸಹ ದೊರಕಿತ್ತು.

ಇಪ್ಪತೈದರಿಂದ ಅರವತ್ಮೂರವರೆಗಿನವರೂ ಬಣ್ಣ ಹಚ್ಚಿದರು…!


ಈ ತಂಡದಲ್ಲಿ 25 ವರ್ಷದವರಿಂದ ಹಿಡಿದು 63 ವರ್ಷ ಪ್ರಾಯದವರೆಗಿನ ಮಹಿಳೆಯರಿದ್ದು, ಯಕ್ಷಗಾನದ ಹೆಜ್ಜೆಗಾರಿಕೆಯ ಓಂ ನಾಮವನ್ನು ಕಲಿತು ನಾಟ್ಯ-ಮಾತುಗಾರಿಕೆಯಲ್ಲಿ ತಮ್ಮ ತಮ್ಮ ಶಕ್ತ್ಯಾನುಸಾರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಮಾತ್ರವಲ್ಲದೇ ಒಟ್ಟಾರೆ ಈ ಪ್ರದರ್ಶನದ ಕುರಿತಾಗಿ ಮೆಚ್ಚುಗೆಯ ಮಾತುಗಳನ್ನು ಪಡೆದುಕೊಂಡಿದ್ದಾರೆ.
ವಯಸ್ಸಿನ ತೊಡಕಿನಿಂದ ಮಕ್ಕಳು ಕಲಿತಷ್ಟು ವೇಗದಲ್ಲಿ ಕುಣಿತಗಳನ್ನು ಪ್ರಸ್ತುತಪಡಿಸಲು ಸಾಧ್ಯವಾಗದಿದ್ದರೂ, ಭಾವಾಭಿನಯ, ಲಯಗಾರಿಕೆ, ಮತ್ತು ವಾಕ್ಪುಟುತ್ವದಲ್ಲಿ ವೃತ್ತಿಪರ ಕಲಾವಿದರ ಮಟ್ಟಕ್ಕೆ ಸೈ ಎನಿಸುವಷ್ಟು ಪ್ರಸ್ತುತಿಯನ್ನು ನೀಡುವಲ್ಲಿ ಈ ಮಹಿಳಾಮಣಿಗಳ ತಂಡ ಹಿಂದೆ ಬಿದ್ದಿಲ್ಲ ಎಂಬುದೇ ಹೆಮ್ಮೆಯ ವಿಷಯ.


ಏಳು ಮಹಿಳಾ ಕಲಾವಿದರ ಈ ತಂಡದಲ್ಲಿ ಶಶಿಕಲಾ ಭಟ್ಟ ಅವರ ವಯಸ್ಸು 63 ಆದರೂ ಹೆಜ್ಜೆಗಾರಿಕೆಯಲ್ಲಿ ತಮ್ಮ ವಯಸ್ಸಿನ ಪ್ರಭಾವ ಕಾಣದಂತೆ ಪಾತ್ರನಿರ್ವಹಣೆ ಮಾಡಿದ್ದಾರೆ. ಇನ್ನು ತಮಗೆ ಮೊಮ್ಮಕ್ಕಳಿದ್ದರೂ ‘ಭಳಿರೆ.. ಬಾಪುರೇ..’ ಎಂಬ ಮಾದರಿಯಲ್ಲಿ ತಮ್ಮ ಪಾತ್ರ ನಿರ್ವಹಣೆಯನ್ನುಮಾಡಿರುವ ಪ್ರೇಮಾ ಭಟ್ಟ ಅವರದು ಸಹ ಪ್ರಶಂಸಾರ್ಹ ನಿರ್ವಹಣೆಯೇ ಸೈ. ಇನ್ನುಳಿದಂತೆ ಸಹನಾ ವಿನಾಯಕ ಜೋಶಿ ಕಾನಮೂಲೆ, ಶೈಲಾ ದೀಪಕ ಹೆಗಡೆ ದೊಡ್ಡೂರು, ಜ್ಯೋತಿ ಗಣೇಶ ಭಟ್ಟ ಭಟ್ಟ, ಕರಕುಶಲ ತಜ್ಞೆ ಅಂಜಾನ ಭಟ್ಟ, ಉಷಾ ಭಟ್ಟ ಸೇರಿಂತೆ ಹಿರಿ ಕಿರಿಯ ಮಹಿಳಾಮಣಿಗಳ ಈ ತಂಡ ಭಕ್ತಿ, ಶೃಂಗಾರ, ಕರುಣ ಮತ್ತು ವೀರರಸಗಳ ಸಮಪಾಕವಾಗಿರುವ ‘ಸುಧನ್ವಾರ್ಜುನ’ ಪ್ರಸಂಗವನ್ನು ಯಶಸ್ವಿಯಾಗಿ ಪ್ರದರ್ಶಿಸುವ ಮೂಲಕ ಯಕ್ಷಗಾನ ಕಲಿಕೆಗೆ ವಯಸ್ಸು ಮಾನದಂಡವಲ್ಲ ಬದಲಿಗೆ ಪ್ರತಿಭೆ ಮತ್ತು ಉತ್ಸಾಹವೇ ಮಾನದಂಡ ಎಂಬುದನ್ನು ಜಗಜ್ಜಾಹೀರುಪಡಿಸಿದ್ದಾರೆ. ಮಾತ್ರವಲ್ಲದೇ ಈ ನಿಟ್ಟಿನಲ್ಲಿ ಸಾಧನೆ ಮಾಡಬೇಕೆನ್ನುವ ಇನ್ನಷ್ಟು ಮಹಿಳೆಯರಿಗೆ ‘ಅಗ್ರ ಪಂಕ್ತಿ’ಯನ್ನೂ ಸಹ ಹಾಕಿಕೊಟ್ಟಿದ್ದಾರೆ.

ಗುರು ‘ಸುಮಾ’ ಕೈಯಲ್ಲಿ ‘ಅರಳಿ’ದ ಯಕ್ಷ ‘ಕುಸುಮ’ಗಳು!


ಇಷ್ಟಕ್ಕೂ ಯಕ್ಷಗಾನ ಕಲಿಸುವ ಗುರು ಕೂಡ ಮಹಿಳೆಯೇ. ತಾನೂ ಮದುವೆ ಆದ ಬಳಿಕ ಯಕ್ಷಗಾನ ಕಲಿತು ಕೌರವ, ಭೀಷ್ಮ, ಸುಧನ್ವ, ಕೃಷ್ಣ ಸೇರಿದಂತೆ ಅನೇಕ ಪಾತ್ರಗಳನ್ನು ಮಾಡಿದವರು. ಇವರೇ ಸುಮಾ ಹೆಗಡೆ ಗಡಿಗೆಹೊಳೆ. ಸ್ವತಃ ಸಂಸ್ಕೃತ ಯಕ್ಷಗಾನದಲ್ಲಿ ಕೂಡ ಪಾತ್ರ ಮಾಡಿ ಸೈ ಎನಿಸಿಕೊಂಡ ಇವರು ಗಡಿಗೆಹೊಳೆ ಕಾಶ್ಯಪ ಪ್ರತಿಷ್ಠಾನದ ಕಲಾವಿದೆ ಕೂಡ ಹೌದು. ತಾನೂ ಯಕ್ಷಗಾನ ಕಲಿಸಬೇಕು, ಯಕ್ಷಗಾನ ಕಲಿಕೆಯ ಆಸಕ್ತಿ ಇರುವ ಮಹಿಳೆಯರಿಗೆ ವಯಸ್ಸಿನ ಹಂಗಿಲ್ಲದೇ ಕಲಿಸಬೇಕು ಎನ್ನುವ ತನ್ನ ಕನಸು ಈಡೇರಿದೆ ಎನ್ನುತ್ತಾರೆ ಗಡಿಗೆಹೊಳೆ.

Advertisement


ಎರಡು ತಿಂಗಳ ಸೂಕ್ತ ತಯಾರಿ ಮತ್ತು ಅಮಿತೋತ್ಸಾಹದೊಂದಿಗೆ ಮಹಿಳಾಮಣಿಗಳು ನಡೆಸಿಕೊಟ್ಟ ಸುಧನ್ವ ಮೋಕ್ಷ ಪ್ರಸಂಗವು ಇತ್ತೀಚೆಗೆ ಯಶಸ್ವೀ ಪ್ರದರ್ಶನವನ್ನು ಕಂಡಿತು. ಕಳೆದ ಎರಡು ತಿಂಗಳುಗಳಿಂದ ಸುಧನ್ವ ಮೋಕ್ಷ ಆಖ್ಯಾಾನದ ತರಬೇತಿಯನ್ನೂ ಪಡೆದುಕೊಂಡಿದ್ದರು. ರಂಗದಲ್ಲಿ ಮಾತ್ರ ಬೇರೆಯವರು ಕುಣಿದದ್ದನ್ನು ಕಂಡ ಇವರು ಈಗ ಸ್ವತಃ ಕುಣಿದರು, ಪರಸ್ಪರ ವಾಗ್ಭಾಣಗಳ ಮೂಲಕ ರಂಗದಲ್ಲಿ ಮಿಂಚು ಹರಿಸಿದರು. ಇವರಿಗೆ ಒತ್ತಾಸೆಯಾಗಿ ಹಿಮ್ಮೇಳದಲ್ಲಿ ಭಾಗವತರಾಗಿ ಗಜಾನನ ಭಟ್ಟ ತಳಗೇರಿ, ಮದ್ದಲೆಯಲ್ಲಿ ಶ್ರೀಪಾದ ಮೂಡಗಾರ, ಮತ್ತು ಚೆಂಡೆಯಲ್ಲಿ ಮಹಾಬಲೇಶ್ವರ ನಾಯ್ಕನಕೆರೆ ಸಾಥ್ ನೀಡಿದರು.


ವಯಸ್ಸನ್ನೂ ಲೆಕ್ಕಿಸದೇ ರಂಗ ಏರುವ ಉತ್ಸಾಹದಲ್ಲಿ ಇರುವ ಮಹಿಳೆಯರ ಉಮೇದಿ ಅಚ್ಚರಿಸಿ ತರಿಸಿದೆ. ಮನಸ್ಸು ಕೇಳಿದರೂ ದೇಹ ಕೇಳದ ಸ್ಥಿತಿಯಲ್ಲಿ ಅವರ ದೇಹ ಕೂಡ ಕೇಳುವಂತೆ ತರಬೇತಿ ನೀಡಬೇಕಾಗಿರುವದು ಸವಾಲು.  ಈ ಪ್ರದರ್ಶನ ನನ್ನನ್ನು ಭಾವುಕಗೊಳಿಸಿದೆ. ಇನ್ನೂ ಒಂದು ತಂಡ ಕಲಿಯಲು ಆಸಕ್ತವಾಗಿದೆ.
– ಸುಮಾ ಹೆಗಡೆ ಗಡಿಗೆಹೊಳೆ, ಗುರು

ಯಕ್ಷಗಾನ ಪ್ರದರ್ಶನದ ಬಳಿಕ ವೇಷ ಕಳಚಲು ಮನಸ್ಸು ಬರಲಿಲ್ಲ. ಇನ್ನೂ ಕಲಿತು ಚೆನ್ನಾಗಿ ಯಕ್ಷಗಾನ ಪ್ರದರ್ಶಿಸುವ ಆಸೆ ಮೂಡಿದೆ.
– ಶ್ರೀಮತಿ ಸಹನಾ ವಿನಾಯಕ ಜೋಶಿ ಕಾನಮೂಲೆ ಯಕ್ಷಗಾನ ವಿದ್ಯಾರ್ಥಿನಿ

— ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next