Advertisement

ಮಕ್ಕಳ ಸಮಸ್ಯೆ ಆಲಿಸಲು ವಿಶೇಷ ಗ್ರಾಮ ಸಭೆ

12:30 AM Nov 14, 2019 | Lakshmi GovindaRaju |

ಬೆಂಗಳೂರು: ಶಾಲಾ ಮಕ್ಕಳ ಸಮಸ್ಯೆಗಳಿಗೆ ಕಿವಿಯಾಗಲು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಆ ಹಿನ್ನೆಲೆಯಲ್ಲಿ ನವೆಂಬರ್‌ ತಿಂಗಳಲ್ಲಿ ನಗರ ಜಿಲ್ಲಾ ಪಂಚಾಯಿತಿಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ “ಮಕ್ಕಳ ವಿಶೇಷ ಗ್ರಾಮ ಸಭೆ’ಗಳನ್ನು ನಡೆಸಲು ತೀರ್ಮಾನಿಸಿದೆ.

Advertisement

ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಶೌಚಾಲಯದ ಕೊರತೆ, ಕುಳಿತು ಕೊಳ್ಳಲು ಆಸದ ಸಮಸ್ಯೆ ಸೇರಿದಂತೆ ಹಲವು ಸಂಕಷ್ಟಗಳನ್ನು ಎದುರಿಸುತ್ತಾರೆ. ಅಲ್ಲದೆ ಕೆಲವು ಕಡೆ ಮಳೆ ಸುರಿದಾಗ ಶಾಲಾ ಕಟ್ಟಡಗಳೇ ಸೋರುತ್ತವೆ. ಅಂತಹ ಸ್ಥಿತಿಯಲ್ಲೂ ಮಕ್ಕಳು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿರುತ್ತದೆ.

ಹಾಗೇ ಕೆಲವು ಕಡೆ ಕಟ್ಟಡಗಳೇ ಕುಸಿದು ಬೀಳುವಂತಹ ಅಪಾಯದ ಸ್ಥಿತಿಯಲ್ಲಿರುತ್ತವೆ. ಶಾಲಾ ಮಕ್ಕಳಿಗೆ ಆಟವಾಡಲು ಮೈದಾನಗಳೇ ಇರುವುದಿಲ್ಲ. ಇದೇ ರೀತಿಯ ಹತ್ತಾರು ಸಮಸ್ಯೆಗಳಿಗೆ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಸೂಕ್ತ ಪರಿಹಾರ ಸಿಗಲಿದೆ. ಆ ಹಿನ್ನೆಲೆಯಲ್ಲಿಯೇ ನಗರ ಜಿಲ್ಲಾ ಪಂಚಾಯಿತಿ, ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆ ಆಯೋಜಿಸಲು ಮುಂದಾಗಿದೆ.

ಈ ಸಭೆಯಲ್ಲಿ ಗ್ರಾ.ಪಂ ಸದಸ್ಯರು ಭಾಗವಹಿಸುವುದರಿಂದ ಮಕ್ಕಳ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ವಿಶೇಷ ಅಂದರೆ, ಮಕ್ಕಳ ವಿಶೇಷ ಗ್ರಾಮ ಸಭೆಗಳಲ್ಲಿ ಮಕ್ಕಳೇ ಪ್ರತಿನಿಧಿಗಳಾಗಿರುತ್ತಾರೆ. ಶಾಲೆಗಳಲ್ಲಿ ಆಗಬೇಕಾಗಿರುವ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಗ್ರಾ.ಪಂ ಸದಸ್ಯರು, ಎಸ್‌ಡಿಎಂಸಿ ಸದಸ್ಯರು ಭಾಗವಹಿಸಲಿದ್ದು, ಮಕ್ಕಳ ಚರ್ಚೆಗೆ ಕಿವಿಗೊಡಲಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ಸೂಚಿಸಲಿದ್ದಾರೆ.

ಗ್ರಾಮೀಣ ಶಾಲೆಗಳು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಬಗ್ಗೆ ಮಕ್ಕಳು ಸಭೆಯಲ್ಲಿ ದನಿ ಎತ್ತಲಿದ್ದಾರೆ. ಜತೆಗೆ ಆಯಾ ಶಾಲೆಗಳಲ್ಲಿ ಆಗಬೇಕಾಗಿರುವ ಕೆಲಸಗಳ ಬಗ್ಗೆಯೂ ಬೆಳಕು ಚೆಲ್ಲಲಿದ್ದಾರೆ. ಇದರೊಂದಿಗೆ ಮಕ್ಕಳ ಉಚಿತ ಶಿಕ್ಷಣ, ಉಚಿತ ಆರೋಗ್ಯ ತಪಾಸಣೆ, ಮಧ್ಯಾಹ್ನದ ಬಿಸಿಯೂಟ, ಕ್ರೀಡಾ ಸಾಮಗ್ರಿ ಮತ್ತು ಚಟುವಟಿಕೆಗಳು ಹಾಗೂ ಗ್ರಂಥಾಲಯ ಸೌಲಭ್ಯಗಳ ಬಗ್ಗೆಯೂ ಅರಿವು ಮೂಡಿಸಲಾಗುವುದು.

Advertisement

ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆದ್ಯತೆ: ವಿಶೇಷವಾಗಿ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ (ಅನುಸೂಚಿತ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು) ಗ್ರಾಮ ಸಭೆಯಲ್ಲಿ ಭಾಗವಹಿಸಲು ಮತ್ತು ಚರ್ಚಿಸಲು ಅವಕಾಶ ಕಲ್ಪಿಸಲಾಗುವುದು. ಜತೆಗೆ ದಿವ್ಯಾಂಗರು ಮತ್ತು ಹೆಣ್ಣು ಮಕ್ಕಳಿಗೂ ಆದ್ಯತೆ ನೀಡಲಾಗುವುದು ಎಂದು ಅನೇಕಲ್‌ ತಾಲೂಕಿನ ಮರಸೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶಶಿಕಿರಣ್‌ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ. ಗ್ರಾಮ ಸಭೆಗಳು ಆಯಾ ಪ್ರೌಢಶಾಲಾ ಆವರಣದಲ್ಲಿ ನಡೆಯಲಿವೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಶೌಚಾಲಯದ ಸಮಸ್ಯೆ, ಕ್ರೀಡಾಂಗಣದ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಅದು, ಕೆಲವೊಮ್ಮೆ ಅಧಿಕಾರಿಗಳ ಗಮನಕ್ಕೆ ಬರುವುದಿಲ್ಲ. ಇಂತಹ ಸಮಸ್ಯೆಗಳು ಗಮನಕ್ಕೆ ಬರಲಿ ಎಂಬ ಉದ್ದೇಶದಿಂದ ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.
-ಕೆ.ಶಿವರಾಮೇಗೌಡ, ಬೆಂಗಳೂರು ನಗರ ಜಿ.ಪಂ ಸಿಇಒ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next