Advertisement

ಗೌರವಧನ ಪರಿಷ್ಕರಣೆ ಆಗ್ರಹಿಸಿ ವಿಶೇಷ ಶಿಕ್ಷಕರ ಪ್ರತಿಭಟನೆ

10:00 PM Nov 04, 2019 | Team Udayavani |

ಹಾಸನ: ರಾಜ್ಯದ ದಿವ್ಯಾಂಗರ ಶಾಲೆಗಳಲ್ಲಿನ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಗೌರವಧನವನ್ನು ಸರ್ಕಾರ ಪರಿಷ್ಕರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

Advertisement

ಸೇವಾ ಭದ್ರತೆಯಿಲ್ಲದೇ ತೊಂದರೆ: 2010-11 ರಲ್ಲಿ ಜಾರಿಗೆ ಬಂದ ಶಿಶು ಕೇಂದ್ರಿತ ಸಹಾಯಧನ ಯೋಜನೆಯಲ್ಲಿ ಸುಮಾರು 136 ಸಂಸ್ಥೆಗಳು ಅನುದಾನವನ್ನು ಪಡೆಯುತ್ತಿದ್ದು, ಇಲ್ಲಿ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಕೇಂದ್ರ ಸರ್ಕಾರ ಘೋಷಿಸಿರುವ ಕನಿಷ್ಠ ವೇತನ ಕೂಡ ದೊರಕುತ್ತಿಲ್ಲ. ಸೇವಾ ಹಿರಿತನಕ್ಕೆ ಮಾನ್ಯತೆಯೇ ಇಲ್ಲ. ಆರ್ಥಿಕ ಸೌಲಭ್ಯ, ಭದ್ರತೆ ಇಲ್ಲದೇ ವಿಶೇಷ ಶಾಲೆಗಳ ಶಿಕ್ಷಕರು ಹಾಗೂ ಸಿಬ್ಬಂದಿಗಳು ಕಂಗಾಲಾಗಿದ್ದೇವೆ ಎಂದು ಮನವಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.

2014ರಿಂದ ವೇತನ ಪರಿಷ್ಕರಣೆಯಿಲ್ಲ: ಬುದ್ದಿಮಾಂದ್ಯತೆ, ಮೆದುಳಿನ ಪಾರ್ಶ್ವ, ಆಟಿಸಂ ಹಾಗೂ ಬಹುವಿಧ ನ್ಯೂನತೆ ಹೊಂದಿರುವ ಮಕ್ಕಳ ಭಾಗದಲ್ಲಿ 25 ವರ್ಷ ಮೀರಿದ ವ್ಯಕ್ತಿಗಳಿಗೆ ಶಾಲೆಯ ಶಿಕ್ಷಕರು ಅಧಿಕೃತ ತರಬೇತಿಯನ್ನು ಪಡೆದು ಸೇವಾ ನಿರತರಾಗಿದ್ದರೂ ಈಗ ದೊರಕುತ್ತಿರುವುದು ಕೇವಲ 13,500 ರೂ.ಗಳ ಗೌರವಧನ ಮಾತ್ರ. 2014 ರಲ್ಲಿ ಇದು ಪರಿಷ್ಕೃತಗೊಂಡಿದ್ದರೂ ಯಾವುದೆ ಬದಲಾವಣೆಗಳಾಗಿಲ್ಲ ಎಂದು ದೂರಿದ್ದಾರೆ.

ಬೇಡಿಕೆ ಈಡೇರದಿದ್ದರೆ ಕಾರ್ಯಕ್ರಮ ಬಹಿಷ್ಕಾರ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು 2010ರ ಅಧಿಕಾರವಧಿಯಲ್ಲಿ ವಿಶೇಷ ಶಾಲೆಗಳಿಗೆ ಅನುದಾನ ನೀಡುವ ಪ್ರಕ್ರಿಯೆ ಪ್ರಾರಂಭ ಮಾಡಿದ್ದು, ಬಳಿಕ ಯಾವುದೇ ಸರ್ಕಾರ ಗಮನಹರಿಸದೇ ಇರುವುದು ದುರದೃಷ್ಟಕರ. ಸಮಸ್ಯೆಯ ಬಗ್ಗೆ ತಕ್ಷಣ ಗಮನ ನೀಡಿ ನವೆಂಬರ್‌ ತಿಂಗಳ ಅಂತ್ಯದೊಳಗೆ ಪರಿಷ್ಕೃತ ವೇತನದ ಬಗ್ಗೆ ಆದೇಶ ಹೊರಬೀಳಲು ಕ್ರಮ ಕೈಗೊಳ್ಳಬೇಕು.

ಇಲ್ಲದಿದ್ದರೆ ಡಿ 3 ರಂದು ನಡೆಯಲಿರುವ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ಎಲ್ಲಾ ವಿಶೇಷ ಶಾಲೆಗಳಲ್ಲಿ ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದ್ದಾರೆ. ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘದ ಅಧ್ಯಕ್ಷ‌ ಬಿ. ಉಮೇಶ್‌, ಕಾರ್ಯದರ್ಶಿ ಲೋಕೇಶ್‌, ಸಂಘಟನಾ ಕಾರ್ಯದರ್ಶಿ ಗುರುಸ್ವಾಮಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next