Advertisement

ವಿಶೇಷ ಶಿಕ್ಷಕರಿಗೆ ತಾಳ್ಮೆ ಅಗತ್ಯ: ಮಲ್ಲನಗೌಡ 

03:43 PM Feb 24, 2017 | Team Udayavani |

ಶಕ್ತಿನಗರ: ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ನಡೆಸುವುದು ನಿಜವಾಗಿಯೂ ಕಷ್ಟದ  ಕೆಲಸ. ಅಲ್ಲಿರುವ ವಿಶೇಷ ಮಕ್ಕಳಿಗೆ ಪ್ರೀತಿಯಿಂದ ಶಿಕ್ಷಣ, ತರಬೇತಿ ನೀಡುವ ಅಗತ್ಯವಿದ್ದು, ಅವರ  ಶಿಕ್ಷಕರಿಗೆ ಹೆಚ್ಚಿನ ತಾಳ್ಮೆ ಅಗತ್ಯ ಎಂದು ನ್ಯಾಯಾಧೀಶ ಮಲ್ಲನ ಗೌಡ ಪಾಟೀಲ್‌ ಹೇಳಿದರು. 

Advertisement

ರಾಜ್ಯ ಸರಕಾರದ ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿ ಸರಕಾರಿ ಮಹಿಳಾ ತಾಂತ್ರಿಕ ಮಹಾ ವಿದ್ಯಾಲಯವು ಶಕ್ತಿನಗರದ “ಸಾನಿಧ್ಯ’ದಲ್ಲಿ ನಡೆಸಿದ ಬುದ್ಧಿಮಾಂದ್ಯ ಮಕ್ಕಳ ಶಿಕ್ಷಕರಿಗಾಗಿ 6 ತಿಂಗಳ ಅವಧಿಯ ಡಿಪ್ಲೊಮಾ ತರಬೇತಿಯ 3ನೇ ತಂಡದ ಪ್ರಮಾಣ ಪತ್ರವನ್ನು ಅವರು ವಿತರಿಸಿದರು. 

ದ್ವೇಷ, ಅಸೂಯೆ, ಮತ್ಸರ ಎಂದರೆ ಏನೆಂದೇ ಅರಿಯದ ಈ ವಿಶೇಷ ಮಕ್ಕಳು ದೇವರ ಸಮಾನ. ಸಾನಿಧ್ಯವೆಂದರೆ ದೇವರು ಇರುವಂತಹ ಸ್ಥಳ. ಸಾನಿಧ್ಯದ ವ್ಯವಸ್ಥೆ, ಶಿಕ್ಷಕರ ಶ್ರಮ, ಇಲ್ಲಿಯ ಸ್ವತ್ಛತೆ ಎಲ್ಲವೂ ಅಭಿನಂದನೀಯ. ವಿಶೇಷ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ತಾನು ವೈಯಕ್ತಿಕವಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಸರಕಾರಿ ಮಹಿಳಾ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಬಿ. ಎನ್‌. ಕುಂಬಾರ್‌ ಮುಖ್ಯ ಅತಿಥಿಯಾಗಿದ್ದರು. ಶ್ರೀ ಗಣೇಶ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ದೇವದತ್ತ ರಾವ್‌, ಖಜಾಂಚಿ ಜಗದೀಶ್‌ ಶೆಟ್ಟಿ, ನಿರ್ದೇಶಕ ಮಹಮ್ಮದ್‌ ಬಶೀರ್‌ ಉಪಸ್ಥಿತರಿದ್ದರು. 

ಡಿಪ್ಲೊಮಾ ತರಬೇತಿಯ ಕಾರ್ಯ ಕ್ರಮದಲ್ಲಿ 17 ಮಂದಿ ಡಿಸ್ಟಿಂಕ್ಷನ್‌ನಲ್ಲಿ, 6 ಮಂದಿ ಪ್ರಥಮ, ಇಬ್ಬರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಮುಂಬಯಿಯಲ್ಲಿ ಜರಗಿದ ರಾಷ್ಟ್ರಮಟ್ಟದ ಹ್ಯಾಂಡ್‌ಬಾಲ್‌ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದ ರಾಜ್ಯ ತಂಡದ ಸದಸ್ಯ ಪ್ರಜ್ವಲ್‌ ಲೋಬೋ ಮತ್ತು ಮಹ ಮ್ಮದ್‌ ತಲ್ಹತ್‌ ಹಾಗೂ ಗುಜರಾತಿನ ಅಹಮ್ಮದಾಬಾದ್‌ನಲ್ಲಿ  ಜರಗಿದ ವಾಲಿಬಾಲ್‌ ಪಂದ್ಯಾಟದಲ್ಲಿ ಭಾಗವಹಿಸಿದ ವಿನಾಯಕ ವಿ. ಕೆ. ಮತ್ತು ಪ್ರೀತಿ ಕೆ. ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
 
ಹ್ಯಾರಿ ಡಿ’ಸೋಜಾ ನೇತೃತ್ವದಲ್ಲಿ ಸಾನಿಧ್ಯದ  ಮಕ್ಕಳು ಬ್ಯಾಂಡ್‌ ನುಡಿಸಿದರು. ಆಡಳಿತಾಧಿಕಾರಿ ವಸಂತ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿ,  ಸಹಾಯಕ ಆಡಳಿತಾಧಿಕಾರಿ ಸುಮಾ ಡಿ’ ಸಿಲ್ವಾ ವಂದಿಸಿದರು. ಹರ್ಷಿತಾ ಆಚಾರ್‌ ನಿರೂಪಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next