Advertisement

ಕೋಡಿ: ಹಕ್ಕುಪತ್ರ ಸಿಗಲಿ; ಅಲೆದಾಟ ತಪ್ಪಲಿ

05:57 PM Jun 24, 2022 | Team Udayavani |

ಕೋಟ: ಬ್ರಹ್ಮಾವರ ತಾಲೂಕಿನ ಪಶ್ಚಿಮ ಭಾಗದ ಕಡಲ ಕಿನಾರೆಗೆ ತಾಗಿಕೊಂಡಿರುವ ಪುಟ್ಟ ಊರೇ ಕೋಡಿ. ಈ ಗ್ರಾಮ ಕೋಡಿಬೆಂಗ್ರೆ ಎಂಬ ದ್ವೀಪ, ಕೋಡಿ (ಕೋಡಿ ಕನ್ಯಾಣ) ಹಾಗೂ ಕೋಡಿತಲೆ ಎನ್ನುವ ಪ್ರದೇಶವನ್ನು ಒಳಗೊಂಡಿದೆ.

Advertisement

ಕೋಡಿಬೆಂಗ್ರೆ ವಿಶ್ವವಿಖ್ಯಾತಿ ಪಡೆದಿರುವುದು ತನ್ನ ಡೆಲ್ಟಾ ಬೀಚ್‌ ನಿಂದ. ಸುಮಾರು 442.15 ಹೆಕ್ಟೆರ್‌ ಭೂಪ್ರದೇಶ ಹೊಂದಿರುವ ಗ್ರಾಮದಲ್ಲಿ ಸುಮಾರು 140.30 ಹೆಕ್ಟೇರ್‌ ಕೃಷಿಗೆ ಯೋಗ್ಯವಾದ ಜಮೀನಿದೆ. 4 ವಾರ್ಡ್‌ಗಳನ್ನು ಹೊಂದಿರುವ ಗ್ರಾಮದ ಜನಸಂಖ್ಯೆ 4,429. ಮೀನುಗಾರಿಕೆ ಹಾಗೂ ಕೃಷಿ ಇಲ್ಲಿನ ಜನರ ಮುಖ್ಯ ಕಸುಬು.

ಈ ಪುಟ್ಟ ಊರಿನಲ್ಲಿ ಸುಮಾರು ಏಳು ಸಹಕಾರಿ, ಸೌಹಾರ್ದ ಸಹಕಾರಿ ಸಂಸ್ಥೆಗಳಿರುವುದು ವಿಶೇಷ. ಇದೂ ಊರಿನ ಆರ್ಥಿಕತೆ ಪ್ರಗತಿಗೆ ಹಿಡಿವ ಕೈಗನ್ನಡಿಯಾಗಬಹುದು.

ಊರಿನ ಪ್ರಮುಖ ಸಮಸ್ಯೆ ಏನು ಎಂದು ಕೇಳಿದರೆ ಸಿಗುವ ಉತ್ತರ, “ಹಕ್ಕುಪತ್ರ ಸಮಸ್ಯೆ’ ಎಂಬುದು. ಇಲ್ಲಿನ ಹೊಸಬೆಂಗ್ರೆಯಲ್ಲಿ ಹಲವು ವರ್ಷಗಳಿಂದ ವಾಸ ವಿರುವ ಸುಮಾರು 471 ಕುಟುಂಬಗಳಿಗೆ ಸಿಆಝಡ್‌ ಸಮಸ್ಯೆಯಿಂದ ಹಕ್ಕುಪತ್ರ ಸಿಕ್ಕಿಲ್ಲ. ಇದಕ್ಕಾಗಿ ಕಳೆದ ಬಾರಿ ಗ್ರಾ.ಪಂ. ಚುನಾವಣೆಯನ್ನೂ ಬಹಿಷ್ಕರಿಸಿದ್ದರು. ಜಿಲ್ಲಾಧಿಕಾರಿಗಳು, ಸಚಿವರು, ಶಾಸಕರು, ವಿವಿಧ ಪಕ್ಷದ ಮುಖಂಡರು ಆಗಮಿಸಿ 15 ದಿನಗಳೊಳಗೆ ಹಕ್ಕುಪತ್ರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಈಡೇರಿಲ್ಲ.

ಗ್ರಾ.ಪಂ. ವಿಗಂಡಣೆ

Advertisement

ಕೋಡಿಬೆಂಗ್ರೆ ಪ್ರತ್ಯೇಕ ದ್ವೀಪ ಪ್ರದೇಶವಾಗಿದ್ದು, ಕೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿದೆ. ಇಲ್ಲಿನ ಜನರು ಗ್ರಾ.ಪಂ. ಕಚೇರಿಗೆ ಆಗಮಿಸಲು ಸುಮಾರು 30 ಕಿ.ಮೀ. ಸುತ್ತಿ ಬಳಸಿ ಬರಬೇಕು. ದೈನಂದಿನ ಕೆಲಸಕ್ಕೆ ಗ್ರಾ.ಪಂ.ಗೆ ಬರುವುದೆಂದರೆ ಸಂಕಷ್ಟವಿದ್ದಂತೆ. ಹೀಗಾಗಿ ಕೋಡಿ ಬೆಂಗ್ರೆಯನ್ನು ಕೋಡಿ ಗ್ರಾ.ಪಂ.ನಿಂದ ಪ್ರತ್ಯೇಕಿಸಿ ಕೆಮ್ಮಣ್ಣು-ಹೂಡೆ ಗ್ರಾ.ಪಂ. ಸೇರಿಸಬೇಕು ಎಂಬುದು ಬಹುಕಾಲದ ಬೇಡಿಕೆ.

ಪ್ರಸ್ತುತ ಗ್ರಾಮಕ್ಕೆ ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರವೂ ಕೋಡಿ ಬೆಂಗ್ರೆಯಲ್ಲಿದೆ. ಆದರೆ ಕೋಡಿ ಭಾಗದವರಿಗೆ ಓಡಾಟವೇ (30 ಕಿ.ಮೀ. ದೂರ) ದೊಡ್ಡ ಸಮಸ್ಯೆ. ಆದ ಕಾರಣ ತುರ್ತು ಸಂದರ್ಭ ಆರೋಗ್ಯ ಸೌಲಭ್ಯ ಪಡೆಯಲು ಸಮಸ್ಯೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕೋಡಿ ಕನ್ಯಾಣಕ್ಕೆ ಪ್ರತ್ಯೇಕ ಆರೋಗ್ಯ ಕೇಂದ್ರ ಸ್ಥಾಪನೆಯಾಗಬೇಕು ಎನ್ನುವ ಬೇಡಿಕೆ ಈ ಗ್ರಾಮದವರದ್ದು.

ಎರಡು ಜೆಟ್ಟಿ ಇದ್ದರೂ ಪ್ರಯೋಜನವಿಲ್ಲ

ಕೋಡಿ ಗ್ರಾಮದಲ್ಲಿ ಕೋಡಿಬೆಂಗ್ರೆ ಹಾಗೂ ಕೋಡಿ ಕನ್ಯಾಣ ಎರಡು ಕಡೆ ಮೀನುಗಾರಿಕೆ ಜೆಟ್ಟಿಗಳಿವೆ. ಆದರೆ ಸರಿಯಾದ ಮೂಲ ಸೌಕರ್ಯಗಳಿಲ್ಲದೆ ಹಾಗೂ ಹೂಳೆತ್ತುವವರಿಲ್ಲದೆ ಜೆಟ್ಟಿ ನಿಷ್ಪ್ರಯೋಜಕವಾಗಿವೆ. ಇಲ್ಲಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿ ಸರ್ವ ಋತು ಬಂದರನ್ನಾಗಿ ಮಾಡಿದರೆ ಸಾಕಷ್ಟು ಜನರಿಗೆ ಉದ್ಯೋಗ ಸಿಗಲಿದೆ ಹಾಗೂ ಊರಿನ ಪ್ರಗತಿಗೂ ಸಹಾಯಕವಾಗಲಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ. ಈ ಬೇಡಿಕೆಯೂ ಈಡೇರಬೇಕಿದೆ.

ರಾಜ್ಯದ ಪ್ರಥಮ ತಂಬಾಕು ಮುಕ್ತ ಹಳ್ಳಿ

ಕೋಡಿಬೆಂಗ್ರೆ ಪ್ರದೇಶದಲ್ಲಿ 290 ಮನೆಗಳನ್ನು ಹೊಂದಿದ್ದು, 1,375ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಈ ಊರಿನಲ್ಲಿ ಮದುವೆಯ ಮೆಹಂದಿ ಕಾರ್ಯಕ್ರಮಗಳು ನಡೆದಾಗ ಯುವಜನರು ಪಾನಮತ್ತರಾಗುವುದು, ತಂಬಾಕು ಸೇವಿಸುವುದು ಕಂಡು ಬರುತ್ತಿತ್ತು. ಊರಿನ ಹಿರಿಯರು ಗ್ರಾಮವನ್ನು ಮದ್ಯಪಾನ ಹಾಗೂ ನಶಾ ಮುಕ್ತ ಗ್ರಾಮವಾಗಿಸಲು ದೃಢ ಸಂಕಲ್ಪ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ತಂಬಾಕು ಸೇವನೆಯಿಂದ ಮುಕ್ತವಾಗಿದ್ದು, ರಾಜ್ಯ ಸರಕಾರ ಈ ಗ್ರಾಮವನ್ನು ರಾಜ್ಯದ ಪ್ರಥಮ ತಂಬಾಕು ಮುಕ್ತ ಹಳ್ಳಿ ಎಂದು ಘೋಷಿಸಿದೆ. ಮದ್ಯದಂಗಡಿ ಇಲ್ಲದ ಈ ಊರನ್ನು ಮುಂದಿನ ದಿನದಲ್ಲಿ ಮದ್ಯದಿಂದ ಮುಕ್ತಿಗೊಳಿಸುವುದು ಜನರ ಆಶಯ.

ಇತಿಹಾಸ ಹಾಗೂ ಸಂಕ್ಷಿಪ್ತ ಪರಿಚಯ

ತುದಿ ಎನ್ನುವುದಕ್ಕೆ ಕುಂದಗನ್ನಡದಲ್ಲಿ ಕೊಡಿ ಎಂದು ಕರೆಯುತ್ತಾರೆ. ಹೀಗಾಗಿ ಊರಿನ ತುದಿ, ಕಡಲಿನ ತುದಿಯಲ್ಲಿರುವ ಈ ಭಾಗಕ್ಕೆ ಕೊಡಿ ಎನ್ನುವುದಾಗಿ ಕ್ರಮೇಣ ಇದು ಕೋಡಿ ಎಂದಾಯಿತು. ಕೋಡಿಬೆಂಗ್ರೆ ಹಾಗೂ ಕೋಡಿ ಕನ್ಯಾಣ ಎರಡೂ ಪ್ರದೇಶಗಳು ಒಂದೇ ಆಗಿದ್ದವು. ಆದರೆ ಕ್ರಮೇಣ ಸಮುದ್ರ ಹಾಗೂ ಅಳಿವೆ ಪ್ರದೇಶ ಸ್ಥಾನಪಲ್ಲಟಗೊಂಡು ಕಡಿಬೆಂಗ್ರೆ ಪ್ರತ್ಯೇಕಗೊಂಡು ದ್ವೀಪ ಪ್ರದೇಶವಾಯಿತಂತೆ.

ಸಮಸ್ಯೆ ಪರಿಹಾರಕ್ಕೆ ಯತ್ನ: ಹಕ್ಕುಪತ್ರ ಸಮಸ್ಯೆ ಪರಿಹರಿಸಲು ಸಾಕಷ್ಟು ಪ್ರಯತ್ನಿಸಿದ್ದೇವೆ. ಸರಕಾರದ ಹಂತದಲ್ಲಿದೆ ಎನ್ನುವ ಮಾತು ಅಧಿಕಾರಿಗಳಿಂದ ಕೇಳಿ ಬಂದಿದೆ. ಪ್ರತ್ಯೇಕ ಆರೋಗ್ಯ ಕೇಂದ್ರಕ್ಕಾಗಿ ಹೋರಾಟ ಚಾಲನೆಯಲ್ಲಿದೆ. –ಪ್ರಭಾಕರ ಮೆಂಡನ್‌, ಅಧ್ಯಕ್ಷರು, ಕೋಡಿ ಗ್ರಾ.ಪಂ.

ರಾಜ್ಯಕ್ಕೆ ಮಾದರಿ: ರಾಜ್ಯದಲ್ಲೇ ತಂಬಾಕು ಮುಕ್ತ ಪ್ರಥಮ ಹಳ್ಳಿ ನಮ್ಮದೆನ್ನುವುದು ನಮ್ಮೂರಿಗೆ ಅತ್ಯಂತ ಹೆಮ್ಮೆಯ ಸಂಗತಿ. ನಮ್ಮೂರ ಹಿರಿಯರ ಶ್ರಮಕ್ಕೆ ಸಿಕ್ಕ ಗೌರವ. -ರಮೇಶ್‌ ತಿಂಗಳಾಯ, ಕೋಡಿಬೆಂಗ್ರೆ ನಿವಾಸಿ

„ ರಾಜೇಶ್‌ ಗಾಣಿಗ ಅಚ್ಲಾಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next