Advertisement

ಮೆಂತೆಸೊಪ್ಪಿನ ತಿಂಡಿ-ತಿನಿಸುಗಳು

02:05 PM Dec 15, 2017 | Team Udayavani |

ಕಲ್ಲುಸಕ್ಕರೆ ರುಚಿ ಬಲ್ಲವರೇ ಬಲ್ಲರು’ ಎಂಬಂತೆ ಮೆಂತೆ ಸೊಪ್ಪಿನ ರುಚಿಯನ್ನು ಒಮ್ಮೆ ನೋಡಿದವರು ಮತ್ತೆಂದೂ ಬಿಡಲಾರರು. ಪೌಷ್ಠಿಕಾಂಶಗಳಿಂದ ಕೂಡಿದ ಈ ಸೊಪ್ಪು ಮಧುಮೇಹಿ ರೋಗಿಗಳಿಗೆ ಬಹಳ ಒಳ್ಳೆಯದು. ತೆಂಗಿನೆಣ್ಣೆಯ ಜೊತೆ ಸ್ವಲ್ಪ ಮೆಂತೆ ಸೊಪ್ಪನ್ನು ಹಾಕಿ, ಬಿಸಿ ಮಾಡಿ, ತಲೆಗೆ ಹಚ್ಚಿಕೊಂಡರೆ ತಲೆಹೊಟ್ಟು ಹೋಗುವುದರ ಜೊತೆಗೆ ಕೂದಲೂ ಸೊಂಪಾಗಿ ಬೆಳೆಯುತ್ತದೆ. ಮೇಲ್ನೋಟಕ್ಕೆ ಈ ಸೊಪ್ಪು ಕಹಿ ಎಂದೆನ್ನಿಸಿದರೂ ಆರೋಗ್ಯದ ಕಾಳಜಿ ಇದ್ದವರಿಗೆ ಇದು ಬಹಳ ಪರಿಣಾಮಕಾರಿ. 

Advertisement

ಮೆಂತೆ ಸೊಪ್ಪಿನ ದೋಸೆ 
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ- 2 ಬಟ್ಟಲು, ಶುಚಿ ಮಾಡಿದ ಮೆಂತೆಸೊಪ್ಪು-1 ಬಟ್ಟಲು, ತೆಂಗಿನತುರಿ-1/4 ಬಟ್ಟಲು, ಕೆಂಪು ಮೆಣಸಿನಕಾಯಿ 5-6, ಕೊತ್ತಂಬರಿ- 1 ಟೇಬಲ್‌ ಚಮಚ, ಜೀರಿಗೆ- 1 ಟೀ ಚಮಚ, ಮೆಂತೆ- 1/2 ಟೀ ಚಮಚ, ಉದ್ದಿನಬೇಳೆ- 1 ಟೇಬಲ್‌ ಚಮಚ, ಕಡಲೆಬೇಳೆ- 1 ಟೇಬಲ್‌ ಚಮಚ, ಹುಣಸೆಹಣ್ಣು- ಸಣ್ಣ ಉಂಡೆ, ಉಪ್ಪು ರುಚಿಗೆ, ಎಣ್ಣೆ ಸ್ವಲ್ಪ , ಅರಸಿನ ಪುಡಿ- 1/2 ಚಮಚ, ಬೆಲ್ಲ- ಸಣ್ಣ ತುಂಡು.

ತಯಾರಿಸುವ ವಿಧಾನ: ನೆನೆಸಿಟ್ಟ ಅಕ್ಕಿಯ ಜೊತೆ ಮೇಲೆ ಹೇಳಿದ ಮಸಾಲೆ ಸಾಮಾನುಗಳನ್ನು ಜೊತೆಗೆ ಉದ್ದಿನಬೇಳೆ, ಕಡಲೆಬೇಳೆ, ಹುಳಿ, ಬೆಲ್ಲಗಳನ್ನು ಹಾಕಿಕೊಂಡು ಸಣ್ಣಗೆ ರುಬ್ಬಿ. ದೋಸೆ ಮಾಡುವ ಮೊದಲು ಮೆಂತೆಸೊಪ್ಪನ್ನು ಸಣ್ಣಗೆ ಕತ್ತರಿಸಿ ಅದಕ್ಕೆ ಸೇರಿಸಿ. ದೋಸೆ ಕಾವಲಿಯ ಮೇಲೆ ಸ್ವಲ್ಪ ಎಣ್ಣೆ ಸವರಿ ದೋಸೆಯನ್ನು ಮಾಡಿ. ತುಂಬಾ ತೆಳುವಾಗಿ ಎಳೆಯಲು ಬರುವುದಿಲ್ಲ. ಸೆಟ್‌ ದೋಸೆಯಂತೆ ಮಾಡಿ ಮೇಲೆ ಸ್ವಲ್ಪ ಎಣ್ಣೆ ಹಾಕಿ, ಸಣ್ಣ ಉರಿಯಲ್ಲಿ ಬೇಯಿಸಿ. ಬೆಳಗಿನ ಉಪಾಹಾರಕ್ಕೆ ಚಟ್ನಿಯಿಲ್ಲದೆಯೂ ಸೇವಿಸಬಹುದು.

ಮೆಂತೆಸೊಪ್ಪಿನ ನುಚ್ಚಿನುಂಡೆ
ಬೇಕಾಗುವ ಸಾಮಗ್ರಿ:
ಬೆಳ್ತಿಗೆ ಅಕ್ಕಿ- 1 ಬಟ್ಟಲು ಮೆಂತೆಸೊಪ್ಪು- 2 ಬಟ್ಟಲು, ಕಡಲೆಬೇಳೆ-1/2 ಬಟ್ಟಲು, ತೊಗರಿಬೇಳೆ-1/2 ಬಟ್ಟಲು, ಹಸಿಮೆಣಸಿನಕಾಯಿ-5, ಕೊತ್ತಂಬರಿ ಸೊಪ್ಪು- 1/2 ಕಟ್ಟು , ಕರಿಬೇವು ಸ್ವಲ್ಪ , ಹಸಿಶುಂಠಿ ಸ್ವಲ್ಪ , ಈರುಳ್ಳಿ ಬೇಕಿದ್ದರೆ ಸಣ್ಣಗೆ ಹೆಚ್ಚಿರಬೇಕು, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಅಕ್ಕಿ, ಕಡಲೆಬೇಳೆ, ತೊಗರಿಬೇಳೆಯನ್ನು ನೆನೆಸಿಟ್ಟು ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಟ್ಟುಕೊಳ್ಳಿ. ಇದಕ್ಕೆ ಸಣ್ಣಿಗೆ ಕತ್ತರಿಸಿದ ಮೆಂತೆಸೊಪ್ಪು , ಕೊತ್ತಂಬರಿ ಸೊಪ್ಪು, ಕರಿಬೇವು, ಶುಂಠಿಯನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣವನ್ನು ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ಕಲೆಸಿ ಉಂಡೆ ಮಾಡಿಟ್ಟುಕೊಳ್ಳಿ. ಇಡ್ಲಿ ಪಾತ್ರೆಗೆ ನೀರು ಹಾಕಿ, ಕಾದ ನಂತರ ಈ ಉಂಡೆಗಳನ್ನು ಅದರಲ್ಲಿಟ್ಟು ಸೆಕೆಯಲ್ಲಿ 20 ನಿಮಿಷ ಇಡ್ಲಿಯಂತೆ ಬೇಯಿಸಿ. ಬಿಸಿ ಬಿಸಿಯಾಗಿರುವಾಗಲೇ ಕಾಯಿಚಟ್ನಿಯೊಂದಿಗೆ ಸವಿಯಿರಿ.

Advertisement

ಮೆಂತೆಸೊಪ್ಪಿನ ಮಸಾಲೆ ವಡೆ
ಬೇಕಾಗುವ ಸಾಮಗ್ರಿ:
ಕಡಲೆಬೇಳೆ- 1 ಬಟ್ಟಲು, ಉದ್ದಿನಬೇಳೆ- 1/2 ಬಟ್ಟಲು, ಮೆಂತೆಸೊಪ್ಪು- 1 ಬಟ್ಟಲು, ಹಸಿಮೆಣಸು 5-6, ಕೊತ್ತಂಬರಿಸೊಪ್ಪು- 1/2 ಕಟ್ಟು , ಉಪ್ಪು ರುಚಿಗೆ, ಈರುಳ್ಳಿ- 1 ದೊಡ್ಡದು, ಶುಂಠಿ- ಸ್ವಲ್ಪ.

ತಯಾರಿಸುವ ವಿಧಾನ: ಕಡಲೆಬೇಳೆ, ಉದ್ದಿನಬೇಳೆಯನ್ನು ಒಟ್ಟಿಗೆ 2-3 ಗಂಟೆಗಳ ಕಾಲ ನೆನೆಸಿ ತರಿತರಿಯಾಗಿ ರುಬ್ಬಿಡಿ. ಅದಕ್ಕೆ ಸಣ್ಣಗೆ ಕತ್ತರಿಸಿದ ಮೆಂತೆಸೊಪ್ಪು , ಹಸಿಮೆಣಸು, ಕೊತ್ತಂಬರಿಸೊಪ್ಪು , ಕರಿಬೇವು, ಶುಂಠಿ, ಈರುಳ್ಳಿ , ತೆಂಗಿನಕಾಯಿ ಚೂರು ಎಲ್ಲವನ್ನೂ ಸೇರಿಸಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ವಡೆಯ ಹದಕ್ಕೆ ಕಲಸಿಡಿ. ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಎಣ್ಣೆಯನ್ನು ಕಾಯಲು ಇಟ್ಟು , ಉಂಡೆಗಳನ್ನು ವಡೆಯಂತೆ ತಟ್ಟುತ್ತಾ ಒಂದೊಂದಾಗಿ ಎಣ್ಣೆಗೆ ಹಾಕಿ. ಹೊಂಬಣ್ಣ ಬರುವಂತೆ ಕಾಯಿಸಿ, ಮಿಶ್ರಣಕ್ಕೆ ಸ್ವಲ್ಪ ಕಾದ ಎಣ್ಣೆಯನ್ನು ಹಾಕಿ ಕಲಸಿದರೆ ವಡೆಗಳು ಗರಿಗರಿಯಾಗಿ ಮೂಡಿಬರುತ್ತವೆ. ಸಾಯಂಕಾಲದ ಹೊತ್ತಿಗೆ ಹೇಳಿಮಾಡಿಸಿದ ತಿಂಡಿ ಇದು.

ಮೆಂತೆಸೊಪ್ಪಿನ ಅನ್ನ 
ಬೇಕಾಗುವ ಸಾಮಗ್ರಿ:
ಬೆಳ್ತಿಗೆ ಅಕ್ಕಿ- 1 ಪಾವು, ಮೆಂತೆಸೊಪ್ಪು- 1 ಬಟ್ಟಲು, ವಾಂಗೀಬಾತಿನ ಪುಡಿ 2-3 ಚಮಚ, ಹುಣಸೆಹಣ್ಣು ಸ್ವಲ್ಪ, ಉಪ್ಪು ರುಚಿಗೆ, ಎಣ್ಣೆ – 1/2 ಬಟ್ಟಲು, ಒಗ್ಗರಣೆಗೆ: ಒಣಮೆಣಸಿನಕಾಯಿ, ಉದ್ದಿನಬೇಳೆ, ಕಡಲೆಬೇಳೆ, ಕಡಲೆಬೀಜ, ಸಾಸಿವೆ, ಕರಿಬೇವಿನ ಸೊಪ್ಪು , ಒಣಮೆಣಸು, ಅರಸಿನ- 1/2 ಚಮಚ.

ತಯಾರಿಸುವ ವಿಧಾನ: ಮೊದಲಿಗೆ ಅನ್ನವನ್ನು ಉದುರುದುರಾಗಿ ಮಾಡಿಕೊಂಡು ಆರಲು ಬಿಡಿ. ಬಾಣಲೆಗೆ ಎಣ್ಣೆ ಹಾಕಿಕೊಂಡು ಒಗ್ಗರಣೆ ಸಾಮಾನುಗಳನ್ನು ಜೊತೆಗೆ ಕಡಲೆಬೀಜವನ್ನು ಹಾಕಿ. ಎಲ್ಲವೂ ಕೆಂಪಾದ ತಕ್ಷಣ ಅದಕ್ಕೆ ಮೆಂತೆಸೊಪ್ಪನ್ನು ಹಾಕಿ ನಂತರ ಸ್ವಲ್ಪ ಉಪ್ಪು , ಹುಣಸೆರಸ, ಅರಸಿನಪುಡಿ ಹಾಕಿ. ಮೆಂತೆಸೊಪ್ಪು ಬೆಂದ ನಂತರ ಅದಕ್ಕೆ ವಾಂಗೀಬಾತಿನ ಪುಡಿಯನ್ನು ಹಾಕಿ ಪಲ್ಯದ ಹಾಗೆ ಮಾಡಿಕೊಳ್ಳಿ. ಈಗ ಆರಿದ ಅನ್ನವನ್ನು ಅದಕ್ಕೆ ಹಾಕಿ, ಬೇಕಿದ್ದರೆ ಸ್ವಲ್ಪ ಉಪ್ಪು ಉದುರಿಸಿ. ಬೆಳಗಿನ ಫ‌ಲಾಹಾರಕ್ಕೆ ಹೊಟ್ಟೆತುಂಬಾ ತಿಂಡಿ.

ಪುಷ್ಪಾ ಎನ್‌.ಕೆ. ರಾವ್

Advertisement

Udayavani is now on Telegram. Click here to join our channel and stay updated with the latest news.

Next